ಧಾರ್ಮಿಕ ಮೌಲ್ಯ ಪುನರುತ್ಥಾನಗೊಳಿಸುವುದೇ ಗುರುವಿನ ಧರ್ಮ

| Published : Nov 20 2025, 01:15 AM IST

ಸಾರಾಂಶ

ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಜ್ಞಾವಂತರು ಶ್ರಮಿಸುವ ಅವಶ್ಯಕತೆಯಿದೆ. ಅರಿವು ಮತ್ತು ಮರೆವು ಎರಡೂ ಮನುಷ್ಯನಲ್ಲಿವೆ.

ಕಲಘಟಗಿ:

ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಜ್ಞಾವಂತರು ಶ್ರಮಿಸುವ ಅವಶ್ಯಕತೆಯಿದೆ. ಅರಿವು ಮತ್ತು ಮರೆವು ಎರಡೂ ಮನುಷ್ಯನಲ್ಲಿವೆ. ಅರಿವನ್ನು ಜಾಗೃತಗೊಳಿಸಿ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯ ಪುನರುತ್ಥಾನಗೊಳಿಸುವುದೆ ನಿಜವಾದ ಗುರುವಿನ ಕರ್ತವ್ಯವಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಶ್ರೀ ಅಭಿಪ್ರಾಯ ಪಟ್ಟರು.

ತಾಲೂಕಿನ ದಾಸ್ತಿಕೊಪ್ಪ ಹನ್ನೆರಡು ಮಠದ ಲಿಂ. ಮಡಿವಾಳ ಶಿವಾಚಾರ್ಯರ 35ನೇ ವರ್ಷದ ಪುಣ್ಯಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮಹಾತ್ಮರು ಸಮಾಜದ ಓರೆ-ಕೋರೆ ತಿದ್ದಿ-ತೀಡಿ ಸನ್ಮಾರ್ಗದಲ್ಲಿ ಕರೆದೊಯ್ಯುವ ಮಹಾನ್ ಶಕ್ತಿ ಹೊಂದಿದ್ದಾರೆ ಎಂದ ಅವರು, ವೀರಶೈವ ಧರ್ಮದಲ್ಲಿ ಜ. ರೇಣುಕಾಚಾರ್ಯರು ಮಾನವ ಜೀವನದ ವಿಕಾಸಕ್ಕೆ ಅಮೂಲ್ಯವಾದ ಅಧ್ಯಾತ್ಮದ ಆದರ್ಶ ಮೌಲ್ಯ ಬೋಧಿಸಿದ್ದಾರೆ. ಹನ್ನೆರಡು ಮಠದ ಲಿಂ. ಮಡಿವಾಳ ಶಿವಾಚಾರ್ಯರು ಆಚಾರ-ವಿಚಾರ ಸಂಪನ್ನರಾಗಿ ಶಿವಾದ್ವೈತ ತತ್ವ ಸಿದ್ಧಾಂತದ ಪ್ರತಿಪಾದಕರಾಗಿ ಗುರುಸ್ಥಳದ ಕೀರ್ತಿ ಎತ್ತಿ ಹಿಡಿದಿದ್ದಾರೆ ಎಂದರು.

ಸಮಾರಂಭ ಉದ್ಘಾಟಿಸಿದ ಮುಕ್ತಿಮಂದಿರ ವಿಮಲ ರೇಣುಕ ಶಿವಾಚಾರ್ಯರು, ಬೆಳೆದ ಮರ, ಹರಿಯುವ ನೀರು, ಬೀಸುವ ಗಾಳಿ ಮತ್ತು ನಿಂತ ನೆಲ ತ್ಯಾಗದ ಹಿರಿಮೆ ಮತ್ತು ಪರೋಪಕಾರ ಎತ್ತಿ ತೋರಿಸುತ್ತವೆ. ಅದೇ ರೀತಿ ಮಡಿವಾಳ ಶಿವಾಚಾರ್ಯರು ಧರ್ಮಮುಖಿಯಾಗಿ, ಸಮಾಜಮುಖಿಯಾಗಿ ಬಾಳಿ ಭಕ್ತರಿಗೆ ಧರ್ಮದ ಬೆಳಕು ತೋರಿ ಮುನ್ನಡೆಸಿದ್ದಾರೆ ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಹನ್ನೆರಡು ಮಠದ ರೇವಣಸಿದ್ಧ ಶಿವಾಚಾರ್ಯರು ಆಶೀರ್ವಚನ ನೀಡಿದರು. ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಶಿರಕೋಳದ ಗುರುಸಿದ್ಧೇಶ್ವರ ಶಿವಾಚಾರ್ಯರು, ಬ್ಯಾಹಟ್ಟಿ ಹಿರೇಮಠದ ಮರುಳಸಿದ್ಧ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಹನುಮಾಪುರ ಕಾಳಿಕಾ ಹಿರೇಮಠದ ಡಾ. ಸೋಮಶೇಖರ ಶಿವಾಚಾರ್ಯರು, ರಾಯನಾಳ ರೇವಣಸಿದ್ಧೇಶ್ವರ ಸ್ವಾಮಿಗಳು, ಬೆಲವಂತರ ಹಿರೇಮಠದ ರೇವಣಸಿದ್ಧ ಸ್ವಾಮಿಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

ಇದೇ ವೇಳೆ ಮಲ್ಲಯ್ಯಸ್ವಾಮಿ ತೋಟಗಂಟಿ ಮತ್ತು ಸಹ ಕಲಾವಿದರಿಂದ ಸಂಗೀತ ಸೌರಭ ಜರುಗಿತು. ಹಲವಾರು ವಟುಗಳಿಗೆ ಶಿವದೀಕ್ಷಾ ಅಯ್ಯಾಚಾರ ಜರುಗಿತು. ಹನ್ನೆರಡು ಮಠದ ನೂತನ ಪಟ್ಟಾಧ್ಯಕ್ಷ ಅಭಿನವ ಮಡಿವಾಳ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ವೀರಯ್ಯ ನಾಗಲೋಟಿಮಠ ನಿರೂಪಿಸಿದರು. ಸಮಾರಂಭಕ್ಕೂ ಮುನ್ನ ಕಲಘಟಗಿ ನಗರದಲ್ಲಿ ಲಿಂ. ಮಡಿವಾಳ ಶಿವಾಚಾರ್ಯರ ಭಾವಚಿತ್ರದ ಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು.