ಕಂಪ್ಲಿಯಲ್ಲಿ ಗಾಳಿಗೆ ನೆಲಕಚ್ಚಿದ ಭತ್ತ, ಅನ್ನದಾತಗೆ ನಷ್ಟ

| Published : Apr 22 2025, 01:47 AM IST

ಸಾರಾಂಶ

ಕಂಪ್ಲಿ ಪಟ್ಟಣದ ಸೇರಿದಂತೆ ತಾಲೂಕಿನ ಎಲ್ಲೆಡೆ ಭಾನುವಾರ ಮಧ್ಯರಾತ್ರಿ ಸುರಿದ ಗಾಳಿ, ಗುಡುಗು, ಸಿಡಿಲು ಸಹಿತ ಮಳೆಗೆ ಭತ್ತ ಬೆಳೆ ನೆಲಕಚ್ಚಿದ್ದು, ಅನ್ನದಾತರಿಗೆ ನಷ್ಟದ ಆತಂಕ ಉಂಟಾಗಿದೆ.

ಬಿ. ಎಚ್.ಎಂ. ಅಮರನಾಥ ಶಾಸ್ತ್ರಿ

ಕಂಪ್ಲಿ: ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ಭಾನುವಾರ ಮಧ್ಯರಾತ್ರಿ ಸುರಿದ ಗಾಳಿ, ಗುಡುಗು, ಸಿಡಿಲು ಸಹಿತ ಮಳೆಗೆ ಭತ್ತ ಬೆಳೆ ನೆಲಕಚ್ಚಿದ್ದು, ಅನ್ನದಾತರಿಗೆ ನಷ್ಟದ ಆತಂಕ ಉಂಟಾಗಿದೆ.

ತಾಲೂಕಿನ 13,650 ಹೆಕ್ಟೇರ್ ಪ್ರದೇಶದಲ್ಲಿ ಬೇಸಿಗೆ ಹಂಗಾಮಿಗೆ ಗಂಗಾ ಕಾವೇರಿ, ಆರ್.ಎನ್‌.ಆ‌ರ್. ತಳಿಯ ಭತ್ತವನ್ನು ರೈತರು ಬೆಳೆದಿದ್ದಾರೆ. ಬೆಳಗೋಡ್ ಹಾಳ್, ಸಣಾಪುರ, ಇಟಗಿ ಸೇರಿದಂತೆ ತುಂಗಭದ್ರಾ ನದಿ ಪಾತ್ರದ ಅನೇಕ ಜಮೀನುಗಳಲ್ಲಿ ಬೆಳೆದ ಭತ್ತ 15ರಿಂದ 20 ದಿನಗಳ ಒಳಗಾಗಿ ಕಟಾವು ಮಾಡಲು ರೈತರು ಸಿದ್ಧರಾಗಿದ್ದರು. ಆದರೆ ಭಾನುವಾರ ರಾತ್ರಿ ಬೀಸಿದ ಗಾಳಿಗೆ ನೂರಾರು ಎಕರೆ ಭತ್ತದ ಬೆಳೆ ನೆಲಕಚ್ಚಿದೆ. ಈ ಭತ್ತವನ್ನು ಎತ್ತಿ ಕಟ್ಟಲು ಎಕರೆಗೆ 25ರಿಂದ 30 ಕೂಲಿ ಕಾರ್ಮಿಕರು ಬೇಕಿದ್ದು, ₹9 ಸಾವಿರದ ವರೆಗೂ ಖರ್ಚಾಗುತ್ತದೆ. ದಿನಕ್ಕೆ ₹300 ನೀಡಿದರು ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಗದ್ದೆಗೆ ನೀರು ಹಾಯಿಸಿದರೆ ಭತ್ತದಲ್ಲಿ ಮೊಳಕೆ ಬರುತ್ತದೆ. ಹಾಗೆ ಬಿಟ್ಟರೆ ಭತ್ತ ಜೊಳ್ಳಾಗುತ್ತದೆ. ಇದರಿಂದಾಗಿ ಬೆಳೆಗೆ ವ್ಯಯಿಸಿದ ಹಣ ಸಿಗುವ ನಿರೀಕ್ಷೆಯೂ ಇಲ್ಲದಂತಾಗಿದೆ ಎಂದು ರೈತರಾದ ಅಲಬನೂರು ಬಸವರಾಜ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಬೆಂಬಲ ಬೆಲೆ ಇಲ್ಲ: ಮಾರುಕಟ್ಟೆಯಲ್ಲಿ 75 ಕೆಜಿ ಭತ್ತದ ಚೀಲಕ್ಕೆ ದರ ನಿಗದಿಪಡಿಸಲಾಗುತ್ತದೆ. ಗಂಗಾ ಕಾವೇರಿ ತಳಿಯ ಭತ್ತ 75 ಕೆಜಿ ಚೀಲಕ್ಕೆ ₹1,350 ಇದ್ದರೆ, ಆರ್.ಎನ್.ಆರ್. ತಳಿಯ ಭತ್ತಕ್ಕೆ ₹1,420 ದರ ಇದೆ. ಕನಿಷ್ಠ ಬೆಂಬಲ ಬೆಲೆಯ ಪ್ರಕಾರ ಭತ್ತ ಒಂದು ಚೀಲಕ್ಕೆ ₹2300 ನೀಡಬೇಕಿದೆ. ಆದರೆ ಎಲ್ಲಿಯೂ ಕನಿಷ್ಠ ಬೆಂಬಲ ದೊರೆಯುತ್ತಿಲ್ಲ. ಭತ್ತ ಕಟಾವು ಮಾಡಲು ಯಂತ್ರಗಳ ಬಾಡಿಗೆ ಪ್ರತಿ ಗಂಟೆಗೆ ₹2500 ದಿಂದ ₹2600 ಇದ್ದು, ಇದು ರೈತರಿಗೆ ಹೊರೆಯಾಗಿದೆ. ಜತೆಗೆ ಗುತ್ತಿಗೆ ಆಧಾರಿತ ಕೃಷಿಕರು ಎಕರೆಗೆ 15ರಿಂದ 18 ಚೀಲ ಭತ್ತ ಜಮೀನು ಮಾಲೀಕರಿಗೆ ನೀಡಬೇಕಿದೆ. ಸಸಿ, ಗೊಬ್ಬರ, ಕ್ರಿಮಿನಾಶಕ ಸಿಂಪಡಣೆ, ಕೃಷಿ ಕಾರ್ಮಿಕರ ವೆಚ್ಚ, ಕಟಾವು ಸೇರಿ ಎಕರೆಗೆ ₹45 ಸಾವಿರದ ವರೆಗೂ ಹಣ ವ್ಯಯಿಸಲಾಗಿದೆ. ಬೆಳೆದ ಬೆಳೆಗೆ ಬೆಂಬಲ ಬೆಲೆ ಇಲ್ಲದಿರುವುದರಿಂದ ಕೃಷಿಗೆ ಪಡೆದ ಸಾಲಕ್ಕೆ ಬಡ್ಡಿ ಕಟ್ಟಲು ಸಹ ಆಗದ ಪರಿಸ್ಥಿತಿಯಲ್ಲಿ ರೈತರಿದ್ದಾರೆ.

ಶಾಶ್ವತ ಭತ್ತ ಖರೀದಿ ಕೇಂದ್ರ ತೆರೆಯಲು ಒತ್ತಾಯ: ರೈತರು ಬೆಳೆದ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ದೊರೆಯುತ್ತಿಲ್ಲ. ಇದರಿಂದಾಗಿ ತುಂಬಾ ನಷ್ಟ ಉಂಟಾಗಲಿದೆ. ಈ ಕುರಿತು ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತಿರುವುದು ಶೋಚನೀಯ. ಬೆಂಬಲ ಬೆಲೆ ಯೋಜನೆಯಡಿ ಶಾಶ್ವತವಾಗಿ ಭತ್ತ ಖರೀದಿ ಕೇಂದ್ರ ಆರಂಭಿಸಿದರೆ ದರ ನಿಯಂತ್ರಣದಲ್ಲಿರುತ್ತದೆ. ಇದರಿಂದಾಗಿ ಶಾಶ್ವತವಾಗಿ ಭತ್ತ ಖರೀದಿ ಕೇಂದ್ರ ಆರಂಭಿಸುವುದರೊಂದಿಗೆ ಕೃಷಿ ಯಂತ್ರಧಾರೆ ಮೂಲಕ ಕಟಾವು ಯಂತ್ರಗಳನ್ನು ಒದಗಿಸಿದರೆ ಬೆಳೆಗಾರರಿಗೆ ಅನುಕೂಲವಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ವಿ. ಗೌಡ ''ಕನ್ನಡಪ್ರಭ''ಕ್ಕೆ ತಿಳಿಸಿದ್ದಾರೆ.