ಪರಂಪರೆ ಶ್ರೀಮಂತ ಆದರೆ ವರ್ತಮಾನ ಕಠೋರ: ಡಾ.ಕೆ.ಸತೀಶ

| Published : Jan 02 2025, 12:31 AM IST

ಸಾರಾಂಶ

ವರ್ತಮಾನದಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಕಠೋರ ಪರಿಸ್ಥಿತಿ ಎದುರಿಸುತ್ತಿದೆ

ಹೂವಿನಹಡಗಲಿ: ಉತ್ತರ ಕರ್ನಾಟಕವು ಪ್ರಾಚೀನ ಕಾಲದಿಂದಲೂ ಸುಭಿಕ್ಷತೆಯಿಂದ ಕೂಡಿದ ಪ್ರದೇಶವಾಗಿತ್ತು. ರಾಜಕೀಯ, ಆಡಳಿತಾತ್ಮಕವಾಗಿ ವ್ಯವಸ್ಥಿತ ಸಂಘಟನೆಯ ಕೇಂದ್ರವಾಗಿತ್ತು. ಆದರೆ ವರ್ತಮಾನದಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಕಠೋರ ಪರಿಸ್ಥಿತಿ ಎದುರಿಸುತ್ತಿದೆ ಎಂದು ಪ್ರಾಚಾರ್ಯ ಡಾ.ಕೆ.ಸತೀಶ್ ಆತಂಕ ವ್ಯಕ್ತಪಡಿಸಿದ್ದಾರೆ.ಪಟ್ಟಣದ ಜಿಬಿಆರ್ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಆಯೋಜಿಸಿದ್ದ ಪಾಟೀಲ್ ಅನ್ನದಾನಗೌಡರ, ಪಾಟೀಲ್ ಚನ್ನನಗೌಡರು, ಟಿ.ಎಸ್.ಮೃತ್ಯುಂಜಯಪ್ಪ, ಮುದ್ದಿ ನಿಂಗಪ್ಪ, ನಂದಿಹಳ್ಳಿ ಹಾಲಪ್ಪ ಅವರ ದತ್ತಿ ಉಪನ್ಯಾಸದಲ್ಲಿ ''''''''ಉತ್ತರ ಕರ್ನಾಟಕದ ಅಭಿವೃದ್ಧಿಯ ಸ್ಥಿತಿಗತಿಗಳು'''''''' ಕುರಿತು ಮಾತನಾಡಿದರು.

ಅಶೋಕನ ಶಾಸನಗಳು ಈ ಪ್ರದೇಶದಲ್ಲಿ ಮೊದಲು ದೊರೆತಿದ್ದು, ಅಂದಿನ ಇತಿಹಾಸವನ್ನು ಸಾರುತ್ತಿವೆ. ಬಾದಾಮಿಯ ಚಾಲಕ್ಯ ಅರಸರು ಉತ್ತರ ಕರ್ನಾಟಕದಲ್ಲಿ ಬಹುದೊಡ್ಡ ಸಾಮ್ರಾಜ್ಯ ಸ್ಥಾಪನೆ ಮಾಡಿದ್ದರು. ರಾಷ್ಟ್ರಕೂಟರು ಕನ್ನಡ ಸಾಹಿತ್ಯವನ್ನು ಬೆಳೆಸುವ ದೃಷ್ಟಿಯಲ್ಲಿ ಅತ್ಯಂತ ಮಹತ್ವದ ಕಾರ್ಯ ನೆರವೇರಿಸಿದರು ಎಂದರು.

ಕಲ್ಯಾಣಿ ಚಾಲುಕ್ಯರು ಉತ್ತರ ಕರ್ನಾಟಕದಲ್ಲಿ ಸುಂದರ ದೇವಾಲಯಗಳನ್ನು ನಿರ್ಮಿಸಿ ಶಿಲ್ಪ ಕಲೆಗಳ ಸಂಸ್ಕೃತಿಗೆ ನಾಂದಿ ಹಾಡಿದ್ದಾರೆ. ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕವಾಗಿ ಕಾರ್ಯ ನಿರ್ವಹಿಸಿ ಈ ಪ್ರದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.

ಹೈದರಾಲಿ, ಟಿಪ್ಪು ಸುಲ್ತಾನನ ನಂತರದಲ್ಲಿ ಈ ಪ್ರದೇಶ ಹಲವು ಭಾಗವಾಗಿ ವಿಭಜನೆ ಹೊಂದಿದ್ದು, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮಾರಕವಾಯಿತು ಎಂದರು.

ಉತ್ತರ ಕರ್ನಾಟಕದ ಅರಸರು ಈ ಭಾಗದ ಅಭಿವೃದ್ಧಿಯನ್ನು ವ್ಯವಸ್ಥಿತವಾಗಿ ಸಂಘಟಿಸಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ದಕ್ಷಿಣ ಕರ್ನಾಟಕದಲ್ಲಿ ಮೈಸೂರು ಮಹಾರಾಜರು ಅಭಿವೃದ್ಧಿಯನ್ನೇ ತಮ್ಮ ಮಾನದಂಡವಾಗಿರಿಸಿಕೊಂಡರು. ಈ ಅಭಿವೃದ್ಧಿಯ ಅಸಮತೋಲನ ಸ್ವಾತಂತ್ರ್ಯ ನಂತರದಲ್ಲೂ ಮುಂದುವರೆಯಿತು ಎಂದರು.

ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಡಾ.ನಂಜುಂಡಪ್ಪ ವರದಿಯಲ್ಲಿ 42 ತಾಲೂಕುಗಳು ಹಿಂದುಳಿದಿವೆ. ಇದರ ಅಭಿವೃದ್ಧಿಗೆ ₹31 ಸಾವಿರ ಕೋಟಿ ಅನುದಾನ ಅಗತ್ಯವಿದೆ ಎಂಬ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ ಹತ್ತು ಹಲವು ಯೋಜನೆಗಳನ್ನು ರೂಪಿಸಿದರೂ ಉತ್ತರ ಕರ್ನಾಟಕದ ಅಭಿವೃದ್ಧಿಯು ಇನ್ನು ಮರೀಚಿಕೆಯಾಗಿ ಉಳಿದಿದೆ ಎಂದರು.

ಸರ್ಕಾರವು ಅಸಮತೋಲನ ನಿವಾರಣೆಗಾಗಿ ಗೋವಿಂದರಾವ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದೆ ಎಂದರು.

ಸಾಹಿತಿ ಡಾ.ನಾ. ಕೊಟ್ರೇಶ್ ಉತ್ತಂಗಿ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜು ಪ್ರಾಚಾರ್ಯ ಎಸ್.ಎಸ್.ಪಾಟೀಲ್ ಮಾತನಾಡಿದರು.

ಕಸಾಪ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಅಮರೇಗೌಡ ಪಾಟೀಲ್, ವಿ.ಸಿ.ಪಾಟೀಲ್ ಉಪಸ್ಥಿತರಿದ್ದರು.

ಪುಷ್ಪ ಪ್ರಾರ್ಥಿಸಿದರು. ಗೀತ ಮಿತ್ರಾಚಾರ್ಯ ಸ್ವಾಗತಿಸಿದರು. ಡಿ.ಕೃಷ್ಣ ವಂದಿಸಿದರು. ಪ್ರಭು ಸೊಪ್ಪಿನ ನಿರ್ವಹಿಸಿದರು.