ಸಾರಾಂಶ
ಬೆಂಗಳೂರು : ಕಲಬುರಗಿ ಜಿಲ್ಲೆ ಆಳಂದ ವಿಧಾನಸಭಾ ಕ್ಷೇತ್ರದ ಮತಗಳವು ಯತ್ನ ಕೃತ್ಯದಲ್ಲಿ ಪಶ್ಚಿಮ ಬಂಗಾಳದ ಕುಗ್ರಾಮದಲ್ಲಿ ಕೂತು 10 ರುಪಾಯಿಗೆ ಒಂದು ಒಟಿಪಿ ಮಾರುತ್ತಿದ್ದ ಕಿಡಿಗೇಡಿಯೊಬ್ಬನನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿ ಕರೆತಂದಿದೆ.
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಬಾಪಿ ಆದ್ಯ ಬಂಧಿತ ಆರೋಪಿ. ಈತನಿಂದ ಎರಡು ಲ್ಯಾಪ್‌ಟಾಪ್ ಹಾಗೂ ಕೆಲ ತಾಂತ್ರಿಕ ವಸ್ತುಗಳನ್ನು ಎಸ್‌ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಇತ್ತೀಚೆಗೆ ಆಳಂದ ಕ್ಷೇತ್ರದ ಮತಕಳವು ಯತ್ನ ಪ್ರಕರಣ ಸಂಬಂಧ ಕಲಬುರಗಿ ನಗರದಲ್ಲಿ ಕೆಲವರನ್ನು ವಶಕ್ಕೆ ಪಡೆದು ಎಸ್‌ಐಟಿ ವಿಚಾರಣೆಗೊಳಪಡಿಸಿತು. ಆಗ ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಈ ಸುಳಿವು ಆಧರಿಸಿ ಬೆನ್ನತ್ತಿದ್ದ ಎಸ್‌ಐಟಿ, ಕೊನೆಗೆ ಹಳ್ಳಿಯಲ್ಲೇ ಕೂತು ಒಟಿಪಿ ಮಾರುತ್ತಿದ್ದ ಚಾಲಾಕಿ ಆದ್ಯನನ್ನು ಸೆರೆ ಹಿಡಿದಿದೆ.
ಬಳಿಕ ಆತನನ್ನು ನಗರಕ್ಕೆ ಕರೆತಂದ ಎಸ್‌ಐಟಿ ಅಧಿಕಾರಿಗಳು, ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆ ಸಲುವಾಗಿ 12 ದಿನ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ಬಳಿಕ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ)ಯ ಕಚೇರಿಗೆ ಕರೆತಂದು ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
70 ಮೊಬೈಲ್ ಸಂಖ್ಯೆ ಕೊಟ್ಟು ಒಟಿಪಿ:
2023ರ ವಿಧಾನಸಭಾ ಚುನಾವಣೆಗೂ ಮುನ್ನ 2022ರ ಡಿಸೆಂಬರ್ ಹಾಗೂ 2023ರ ಫೆಬ್ರವರಿ ತಿಂಗಳಲ್ಲಿ ಆಳಂದ ಕ್ಷೇತ್ರದ 6,018 ಮತಗಳ ರದ್ದತಿಗೆ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಕೆಯಾಗಿದ್ದವು. ಈ ಅರ್ಜಿಯನ್ನು ಸ್ಥಳೀಯರ ಹೆಸರಿನಲ್ಲಿ ಭರ್ತಿ ಮಾಡಿ ಕಾಲ್ ಸೆಂಟರ್‌ನ ಡೇಟಾ ಆಪರೇಟರ್‌ಗಳು ಸಲ್ಲಿಸಿದ್ದರು. ಕಾಲ್ ಸೆಂಟರ್ ನಡೆಸುತ್ತಿದ್ದ ಕಲುಬರಗಿ ನಗರದ ಮೊಹಮ್ಮದ್ ಅಶ್ಫಾಕ್ ತಂಡಕ್ಕೆ ಪ್ರತಿ ಅರ್ಜಿಗೆ 80 ರು. ನಂತೆ 4.6 ಲಕ್ಷ ರು. ಪಾವತಿಯಾಗಿತ್ತು. ಇದರಲ್ಲಿ ಒಟಿಪಿ ಪಡೆಯಲು ತಲಾ ಒಟಿಪಿಗೆ 10 ರು. ನಂತೆ ಆದ್ಯನ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿತ್ತು ಎನ್ನಲಾಗಿದೆ.
ಚುನಾವಣಾ ಆಯೋಗಕ್ಕೆ ಮತ ರದ್ದತಿಗೆ ಅರ್ಜಿ ಸಲ್ಲಿಸುವ ಮುನ್ನ ಆಯೋಗದ ವೆಬ್‌ಸೈಟ್‌ನಲ್ಲಿ ಮೊಬೈಲ್ ಸಂಖ್ಯೆ ಕೊಟ್ಟು ನೋಂದಣಿ ಮಾಡಿಸಬೇಕಿತ್ತು. ಆಗ ಅರ್ಜಿ ಸಲ್ಲಿಸಿದರೆ ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತಿತ್ತು. ಈ ಒಟಿಪಿ ಬಳಸಿದರೆ ವೆಬ್‌ಸೈಟ್‌ನಲ್ಲಿ ಮುಂದಿನ ಹಂತದ ಪ್ರಕ್ರಿಯೆ ನಡೆಸಲು ಪಾಸ್‌ವರ್ಡ್ ಸಿಗುತ್ತಿತ್ತು. ನಂತರ ಮತ ರದ್ದತಿ ಕುರಿತು ಅರ್ಜಿದಾರರು ಮಾಹಿತಿ ದಾಖಲು ಮಾಡಬೇಕಿತ್ತು. ಹೀಗೆ ಒಮ್ಮೆ ನೋಂದಣಿಯಾದರೆ ಪಾಸ್‌ವರ್ಡ್ ಬಳಸಿ ಹಲವು ಬಾರಿ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಮತ ಕಳವು ಆರೋಪ ಬಳಿಕ ಈ ವ್ಯವಸ್ಥೆಯನ್ನು ಚುನಾವಣಾ ಆಯೋಗ ಬದಲಾಯಿಸಿದೆ. ಈಗ ಮತ ರದ್ದತಿಗೆ ಪ್ರತಿ ಬಾರಿ ಅರ್ಜಿ ಸಲ್ಲಿಸುವಾಗಲೂ ಹೊಸದಾಗಿ ನೋಂದಣಿ ಮಾಡಬೇಕಿದೆ.
ಆಳಂದ ಕ್ಷೇತ್ರದಲ್ಲಿ ಮತ ರದ್ದು ಮಾಡಲು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ 72 ಮಂದಿ ಹೆಸರಿನಲ್ಲಿ ಆಶ್ಫಾಕ್ ತಂಡ ನೋಂದಣಿ ಮಾಡಿಸಿತ್ತು. ಈ 72 ಜನರ ಮೂಲಕವೇ 6 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆಗ ಮೂಲ ಮತದಾರರ ಹೆಸರಲ್ಲಿ ಆದ್ಯ ನೀಡಿದ್ದ ಮೊಬೈಲ್ ಸಂಖ್ಯೆಗಳನ್ನು ಬಳಸಿ ಮತಕಳ್ಳರು ಒಟಿಪಿ ಪಡೆದಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.
ವೆಬ್‌ಸೈಟ್ ನಡೆಸುತ್ತಿದ್ದ ಆರೋಪಿ:
ಆರೋಪಿ ಆದ್ಯ ವೆಬ್‌ಸೈಟ್‌ವೊಂದನ್ನು ನಡೆಸುತ್ತಿದ್ದ. ಆ ಪೋರ್ಟಲ್ ಮೂಲಕ ಆನ್‌ಲೈನ್ ವಂಚಕರಿಗೆ ಆತ ಒಟಿಪಿ ಮಾರಾಟ ಮಾಡುತ್ತಿದ್ದ. ಅದೇ ರೀತಿ ಮತಗಳ್ಳರ ತಂಡಕ್ಕೂ ಆತ ಒಟಿಪಿ ಮಾರಿದ್ದಾನೆ. ಒಟಿಪಿ ಅಗತ್ಯವಿದ್ದರೆ ಆತನೇ ಎರಡು ಮೊಬೈಲ್ ಸಂಖ್ಯೆ ಕೊಡುತ್ತಿದ್ದ. ಆ ಮೊಬೈಲ್ ಸಂಖ್ಯೆ ಬಳಸಿ ತನ್ನ ವೆಬ್ ಸೈಟ್ ಮೂಲಕ ಆದ್ಯ ಒಟಿಪಿ ಮಾರುತ್ತಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ದುಬೈನಿಂದ ಬಂದ ಅಶ್ಫಾಕ್?:
ಮತಗಳ್ಳತನ ಪ್ರಕರಣ ಸಂಬಂಧ ಕಲುಬರಗಿ ನಗರದ ಕಾಲ್ ಸೆಂಟರ್ ಮಾಲೀಕ ಮೊಹಮ್ಮದ್ ಅಶ್ಫಾಕ್‌ನ ಆಪ್ತ ಮೊಹಮ್ಮದ್ ಅಕ್ರಂ ಸೇರಿ ಮೂವರನ್ನು ಎಸ್‌ಐಟಿ ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿತ್ತು. ಅಲ್ಲದೆ, ಅಶ್ಫಾಕ್ ಹಾಗೂ ಆತನ ಸಹಚರರ ಮನೆಗಳ ಮೇಲೂ ದಾಳಿ ನಡೆಸಿ ಕೆಲ ದಾಖಲೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಇನ್ನು ಈ ಅಕ್ರಮದ ಬಗ್ಗೆ ಪ್ರಕರಣ ದಾಖಲಾದ ಬಳಿಕ ದುಬೈಗೆ ಹಾರಿದ್ದ ಅಶ್ಫಾಕ್ ಕೊನೆಗೆ ಎಸ್‌ಐಟಿ ತನಿಖೆಗೆ ಭೀತಿಗೊಂಡು ಮರಳಿ ಶರಣಾಗಿದ್ದ. ಆಗ ಆತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಒಟಿಪಿ ಮಾಹಿತಿ ಸಿಕ್ಕಿದೆ ಎಂದು ತಿಳಿದು ಬಂದಿದೆ.
ಅಶ್ಫಾಕ್ ಮುಖತಃ ಆದ್ಯನ ಭೇಟಿಯಾಗಿರಲಿಲ್ಲ. ಆನ್‌ಲೈನ್ ಮೂಲಕವೇ ಪರಸ್ಪರ ವ್ಯವಹಾರ ನಡೆದಿತ್ತು. ಅಲ್ಲದೆ, ಬೇರೆ ಹೆಸರು ಹೇಳಿ ಆದ್ಯ ಪರಿಚಯಿಸಿಕೊಂಡಿದ್ದ. ಹೀಗಾಗಿ ಒಟಿಪಿ ಮೂಲ ಶೋಧನೆಗೆ ಎಸ್‌ಐಟಿಗೆ ಸವಾಲಾಗಿತ್ತು. ಆದರೆ ಅಶ್ಫಾಕ್‌ನಿಂದ ಪಶ್ಚಿಮ ಬಂಗಾಳದ ರಾಷ್ಟ್ರೀಯ ಬ್ಯಾಂಕ್‌ವೊಂದರ ಖಾತೆಗೆ ಹಣ ವರ್ಗಾವಣೆಯಾಗಿತ್ತು. ಈ ಬ್ಯಾಂಕ್ ಖಾತೆ ಜಾಡು ಹಿಡಿದಾಗ ಆದ್ಯ ಬಲೆಗೆ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.
ಆನ್‌ಲೈನ್ ವಂಚನೆಗಳು ಪತ್ತೆ
ಆರೋಪಿ ಆದ್ಯ ಮತಕಳವು ಮಾತ್ರವಲ್ಲದೆ ಇತರೆ ಸೈಬರ್ ವಂಚನೆ ಕೃತ್ಯಗಳಿಗೂ ಒಟಿಪಿ ಮಾರಾಟ ಮಾಡಿರುವ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಮತ ಕಳವು ಕೃತ್ಯಕ್ಕೆ ಮಾತ್ರ ಸೀಮಿತವಾಗಿ ತನಿಖೆ ನಡೆದಿದೆ. ಆತನ ವಿಚಾರಣೆ ವೇಳೆ ಲಭ್ಯವಾಗುವ ಮಾಹಿತಿ ಆಧರಿಸಿ ಮುಂದಿನ ಹಂತದ ತನಿಖೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ವಿದೇಶದಲ್ಲಿ ಸರ್ವರ್ ?:
ಆದ್ಯನ ಪೋರ್ಟಲ್ ಅಥವಾ ವೆಬ್‌ಸೈಟ್‌ನ ಮೂಲ ಸರ್ವರ್ ವಿದೇಶದಲ್ಲಿರುವ ಬಗ್ಗೆ ಅನುಮಾನವಿದೆ. ಈ ಸರ್ವರ್‌ನಿಂದ ಮಾಹಿತಿ ಸಿಗುವುದು ವಿಳಂಬವಾಗಬಹುದು. ಅಲ್ಲದೆ, ಕಾನೂನುಬಾಹಿರ ಕೃತ್ಯಗಳಿಗೆ ವೆಬ್‌ಸೈಟ್ ಬಳಕೆ ಮಾಡಿರುವ ಕಾರಣ ಆ ವೆಬ್‌ಸೈಟ್‌ನವರು ಮಾಹಿತಿ ಹಂಚಿಕೊಳ್ಳುವ ಬಗ್ಗೆಯೂ ನಂಬಿಕೆ ಇಲ್ಲ. ಹೀಗಾಗಿ ಆದ್ಯನಿಂದ ಲಭ್ಯವಾಗುವ ಮಾಹಿತಿ ಆಧರಿಸಿ ತನಿಖೆ ನಡೆಯಲಿದೆ ಎಂದು ತಿಳಿದು ಬಂದಿದೆ.

;Resize=(128,128))
;Resize=(128,128))
;Resize=(128,128))