ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ

| Published : Jun 27 2024, 01:08 AM IST

ಸಾರಾಂಶ

ತ್ಯಾಜ್ಯ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಹಸಿರು ದಳ ಚಾರಿಟಬಲ್‌ ಟ್ರಸ್ಟ್‌ನಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬುಧವಾರ ‘ಹಸಿರು ಹಬ್ಬ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮಾನ್ಯತೆ ಪಡೆದಿರುವ ಪ್ರದೇಶಗಳನ್ನು ಕೊಳಗೇರಿ ಪ್ರದೇಶಗಳೆಂದು ಅಧಿಕೃತವಾಗಿ ಘೋಷಿಸಲಾಗುವುದು. ಈಗಾಗಲೇ ಘೋಷಿಸಿರುವ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಮಂಡಳಿಯ ಅಧ್ಯಕ್ಷ ಪ್ರಸಾದ್‌ ಅಬ್ಬಯ್ಯ ಭರವಸೆ ನೀಡಿದರು.

ತ್ಯಾಜ್ಯ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಹಸಿರು ದಳ ಚಾರಿಟಬಲ್‌ ಟ್ರಸ್ಟ್‌ನಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬುಧವಾರ ಆಯೋಜಿಸಿದ್ದ ‘ಹಸಿರು ಹಬ್ಬ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೊಳಗೇರಿ ಪ್ರದೇಶಗಳ ಜನರ ಸಂಕಷ್ಟ ಮಂಡಳಿಗೆ ತಿಳಿದಿದ್ದು, ಅವರ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸಲಾಗುವುದು. ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಕೊಳಗೇರಿ ಪ್ರದೇಶಗಳಿಗೆ ವಿದ್ಯುತ್‌ ಸರಬರಾಜು, ನೀರಿನ ಸಂಪರ್ಕ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಕಾರ್ಮಿಕ ಇಲಾಖೆ ವಿಭಾಗ-3 ರ ಸಹಾಯಕ ಕಾರ್ಮಿಕ ಆಯುಕ್ತ ಸಂತೋಷ್‌ ಹಿಪ್ಪರಗಿ ಮಾತನಾಡಿ, ಅಧಿಕೃತವಾಗಿ ಸಮೀಕ್ಷೆ ನಡೆಸಿ ತ್ಯಾಜ್ಯ ಶ್ರಮಿಕರಿಗೆ ಗುರುತಿನ ಚೀಟಿ ನೀಡಲಾಗುತ್ತದೆ. ಕಟ್ಟಡ ಕಾರ್ಮಿಕರಿಗಾಗಿ ನಿರ್ಮಾಣ ವಲಯದಿಂದ ನಿಧಿ ಸಂಗ್ರಹಿಸಿ ಸೌಲಭ್ಯಗಳನ್ನು ನೀಡುವಂತೆ ತ್ಯಾಜ್ಯ ನಿರ್ವಹಣೆ ಮತ್ತು ಕಸದ ವಾಹನಗಳಿಂದ ನಿಧಿ ಸಂಗ್ರಹಿಸಿ ತ್ಯಾಜ್ಯ ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸುವ ಸಂಬಂಧ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಮಿಕ ಅಧ್ಯಯನ ಕೇಂದ್ರದ ಸಹ ನಿರ್ದೇಶಕ ಪ್ರೊ.ಬಾಬು ಮ್ಯಾಥ್ಯೂ ಮತ್ತಿತರರು ಉಪಸ್ಥಿತರಿದ್ದರು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ತ್ಯಾಜ್ಯ ವಸ್ತುಗಳಿಂದ ತಯಾರಿಸಲ್ಪಟ್ಟ ಅಲಂಕಾರಿಕ ವಸ್ತುಗಳ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು.