ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರು ಕುಂದಾಪುರದಲ್ಲಿ ತಮ್ಮ 42ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.

ಬೆಂಗಳೂರು : ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರು ಕುಂದಾಪುರದಲ್ಲಿ ‘ಕಾಂತಾರ 1’ ಚಿತ್ರತಂಡದ ಜೊತೆಗೆ ತಮ್ಮ 42ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.

ನಿರ್ಮಾಪಕ ವಿಜಯ್‌ ಕಿರಗಂದೂರು ಸೇರಿ ಚಿತ್ರದ ತಂತ್ರಜ್ಞರು, ಕಲಾವಿದರು ಸಂಭ್ರಮದಲ್ಲಿ ಪಾಲ್ಗೊಂಡು ರಿಷಬ್‌ ಶೆಟ್ಟಿ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದರು. ಈ ಸಂದರ್ಭದಲ್ಲಿ ರಿಷಬ್‌ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಕೂಡ ಹಾಜರಿದ್ದರು.

ರಿಷಬ್‌ ಶೆಟ್ಟಿ ಹುಟ್ಟುಹಬ್ಬದ ಅಂಗವಾಗಿ ‘ಕಾಂತಾರ 1’ ಚಿತ್ರದ ವಿಶೇಷ ಪೋಸ್ಟರ್‌ ಕೂಡ ಬಿಡುಗಡೆ ಮಾಡಲಾಗಿದೆ. ಈ ಮೊದಲೇ ನಿಗದಿ ಆಗಿರುವಂತೆ ಅ.2ರಂದು ‘ಕಾಂತಾರ 1’ ಸಿನಿಮಾ ವಿಶ್ವದಾದ್ಯಂತ ಬಹು ಭಾಷೆಯಲ್ಲಿ ತೆರೆಗೆ ಬರಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯ ಶೀರ್ಷಿಕೆಯೊಂದಿಗೆ ಬಿಡುಗಡೆ ಆಗಿರುವ ಪೋಸ್ಟರ್‌ಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

25 ಎಕರೆಯಲ್ಲಿ ಬೃಹತ್‌ ಊರಿನ ಸೆಟ್‌

ಅಧ್ಯಾತ್ಮ ಮತ್ತು ಸಾಹಸಗಾಥೆಯ ಸಮ್ಮಿಶ್ರಣದ ಕತೆಯನ್ನು ಒ‍ಳಗೊಂಡ ಈ ಚಿತ್ರಕ್ಕಾಗಿ ಕುಂದಾಪುರ ಬಳಿ ಸುಮಾರು 25 ಎಕರೆ ಪ್ರದೇಶದಲ್ಲಿ ಬೃಹತ್‌ ಸೆಟ್‌ ನಿರ್ಮಿಸಲಾಗಿದೆ. ಈ ಸೆಟ್‌ನಲ್ಲಿ ಹುಟ್ಟಿಕೊಂಡಿರುವ ಕಾಲ್ಪನಿಕ ಊರಿನಲ್ಲಿ ‘ಕಾಂತಾರ ಚಾಪ್ಟರ್‌ 1’ ಚಿತ್ರಕ್ಕೆ ಶೂಟಿಂಗ್‌ ನಡೆಯುತ್ತಿದ್ದು, ಬಹುತೇಕ ಚಿತ್ರೀಕರಣ ಮುಗಿದಿದೆ ಎನ್ನಲಾಗಿದೆ. ಕಳೆದ 50 ದಿನಗಳಿಂದ 500ಕ್ಕೂ ಹೆಚ್ಚು ತರಬೇತಿದಾರರು, 3000ಕ್ಕೂ ಹೆಚ್ಚು ಜೂನಿಯರ್‌ ಕಲಾವಿದರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.