ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬರವಿದ್ದರೂ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿಲ್ಲ. ಉರಿಬಿಸಿಲಿನ ಅನುಭವಕ್ಕೆ ಬೆಚ್ಚಿ ಬೀಳುತ್ತಿರುವ ನಾಗರಿಕರು ಮಾರ್ಚ್‌, ಏಪ್ರಿಲ್‌, ಮೇ ತಿಂಗಳು ಹೇಗಪ್ಪಾ ಕಳೆಯುವುದು ಎಂಬ ಚಿಂತೆಯಲ್ಲಿದ್ದಾರೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿ ಬಿಸಿಲಿನ ಆರ್ಭಟಕ್ಕೆ ಜನಸಾಮಾನ್ಯರು ತತ್ತರಗೊಂಡು ತಂಪು ಪಾನೀಯ, ಎಳನೀರು ಹಾಗೂ ಕಲ್ಲಂಗಡಿ ಹಣ್ಣಿಗೆ ಮೊರೆ ಹೋಗುತ್ತಿದ್ದು, ಇದರಿಂದಾಗಿ ತಂಪು ಪಾನೀಯ ದರ ಸಮರಕ್ಕೆ ಈಗಾಗಲೇ ಜನರ ಕೈಸುಟ್ಟುಕೊಳ್ಳುವಂತಾಗಿದೆ.

ಜಿಲ್ಲೆಯಲ್ಲಿ ಈ ಬಾರಿಯೂ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಸೂರ್ಯ ಜನರ ನೆತ್ತಿ ಸುಡುವುದರ ಜೊತೆಗೆ ಮೈ ಬೆವರನ್ನು ಇಳಿಸುತ್ತಿದ್ದಾನೆ. ಇದರಿಂದ ಜನರು ಸುಸ್ತಾಗಿ ದಾಹ ನೀಗಿಸಿಕೊಳ್ಳಲು ಎಳನೀರು, ಕಲ್ಲಂಗಡಿ ಹಣ್ಣು, ತಂಪು ಪಾನೀಯ, ಕಬ್ಬಿನ ಹಾಲು, ಎಳನೀರು, ಮಜ್ಜಿಗೆ, ನಿಂಬೆಹಣ್ಣಿನ ರಸದ ಮೊರೆ ಹೋಗಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಇಲ್ಲ

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬರವಿದ್ದರೂ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿಲ್ಲ. ಆದರೆ ಬಿಸಿಲಿನ ಆರ್ಭಟ ಮಾತ್ರ ಜನರನ್ನು ಕಂಗೆಡಿಸಿದೆ. ಬೇಸಿಗೆ ಪ್ರಾರಂಭದಲ್ಲೇ ಉರಿಬಿಸಿಲಿನ ಅನುಭವಕ್ಕೆ ಬೆಚ್ಚಿ ಬೀಳುತ್ತಿರುವ ನಾಗರಿಕರು ಮಾರ್ಚ್‌, ಏಪ್ರಿಲ್‌, ಮೇ ತಿಂಗಳು ಹೇಗಪ್ಪಾ ಕಳೆಯುವುದು ಎಂಬ ಚಿಂತೆಯಲ್ಲಿದ್ದಾರೆ. ಜನತೆ ಛತ್ರಿ ಹಿಡಿದು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾರುಕಟ್ಟೆಯಲ್ಲಿ ಒಂದು ಎಳನೀರಿನ ಬೆಲೆ 30 ರಿಂದ 40 ರು.ವರೆಗೆ ಮಾರಾಟ ಆಗುತ್ತಿದೆ. ಮಜ್ಜಿಗೆ ಮತ್ತು ನಿಂಬೆಹಣ್ಣಿನ ರಸ ಒಂದು ಲೋಟಕ್ಕೆ 10 ರಿಂದ 20 ರು. ಹಾಗೂ ಕಬ್ಬಿನ ಹಾಲಿಗೆ 20 ರು., ಮೂಸಂಬಿ ಮತ್ತು ಪೈನಾಫ‌ಲ್‌ ಜ್ಯೂಸ್‌ಗೆ 40 ರು., ಆಪಲ್‌ 50 ರು., ಸಫೋಟಾ 45 ರು., ಡ್ರೈಪ್ರೂಟ್ಸ್‌ ಜ್ಯೂಸ್‌ 75 ರುಪಾಯಿಗೆ ಮಾರಾಟ ಆಗುತ್ತಿದೆ.ಎಳನೀರಿಗೆ ಹೆಚ್ಚು ಬೇಡಿಕೆ

ಬೇಸಿಗೆ ಸಂದರ್ಭದಲ್ಲಿ ಎಳನೀರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಆಸ್ಪತ್ರೆಯಿಂದ ಬರುವ ರೋಗಿಗಳಿಗೆ, ಗರ್ಭಿಣಿಯರಿಗೆ, ಸಾರ್ವಜನಿಕರು 25 ರಿಂದ 30 ರು.ಗಳನ್ನು ನೀಡಿ ಎಳನೀರು ಬಳಸುತ್ತಿದ್ದಾರೆ. ತಾಲೂಕಿನ ಮತ್ತು ಜಿಲ್ಲೆಯ ಅಕ್ಕಪಕ್ಕದ ತೋಟಗಳಿಂದ ಎಳೆನೀರು ಖರೀದಿಸಿ ತರಲಾಗುತ್ತಿದ್ದು, ಉತ್ತಮ ವ್ಯಾಪಾರ ಆಗುತ್ತಿದೆ ಎನ್ನುತ್ತಾರೆ ಎಳನೀರು ವ್ಯಾಪಾರಿ ನಾರಾಯಣಸ್ವಾಮಿ.ಕಲ್ಲಂಗಡಿ ಹಣ್ಣಿಗೆ 3 ಕೆಜಿ ಹಣ್ಣಿನಿಂದ 17 ಕೆಜಿ ಗಾತ್ರದ ಹಣ್ಣಿನವರೆಗೆ ಅಂದರೆ ಗಾತ್ರಕ್ಕೆ ತಕ್ಕಂತೆ 50 ರಿಂದ 400 ರವರೆಗೆ ದರ ಇದೆ. ವರ್ಷದ 12 ತಿಂಗಳೂ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣು ಇರುತ್ತದೆ. ಬೇಸಿಗೆ ಕಾಲದಲ್ಲಿ3 ರಿಂದ 4 ಕ್ವಿಂಟಲ್‌ ಕಲ್ಲಂಗಡಿ ಮಾರಾಟ ಆಗುತ್ತದೆ. ಸಾಮಾನ್ಯ ದಿನಗಳಲ್ಲಿ1 ರಿಂದ 2 ಕ್ವಿಂಟಲ್‌ ಮಾರಾಟ ಆಗುತ್ತದೆ.