ಗಣಿನಗರಿ ಸಂಡೂರಿನಲ್ಲಿ ಸದ್ಯಕ್ಕೆ ನೀರಿನ ಅಭಾವ ಕಾಣಿಸಿಕೊಂಡಿಲ್ಲವಾದರೂ ದಿನಗಳು ಕಳೆದಂತೆ ನೀರಿನ ಕೊರತೆ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ವಿ.ಎಂ. ನಾಗಭೂಷಣಕನ್ನಡಪ್ರಭ ವಾರ್ತೆ ಸಂಡೂರು

ಗಣಿನಗರಿ ಸಂಡೂರಿನಲ್ಲಿ ಸದ್ಯಕ್ಕೆ ನೀರಿನ ಅಭಾವ ಕಾಣಿಸಿಕೊಂಡಿಲ್ಲವಾದರೂ ದಿನಗಳು ಕಳೆದಂತೆ ನೀರಿನ ಕೊರತೆ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಸಂಡೂರಿಗೆ ನೀರು ಪೂರೈಸುವ ನಾರಿಹಳ್ಳ ಜಲಾಶಯ ಸೇರಿದಂತೆ ತಾಲೂಕಿನ ಕೆರೆ ಕುಂಟೆಗಳು ಭರ್ತಿಯಾಗಿವೆ. ಆದರೆ, ಬೇಸಿಗೆ ತೀವ್ರತೆ ಹೆಚ್ಚಾದಂತೆ ನೀರಿನ ಸಮಸ್ಯೆ ಉಲ್ಬಣಗೊಂಡರೆ ಜನ-ಜಾನುವಾರುಗಳಿಗೆ ನೀರಿನ ತತ್ವಾರ ಕಂಡು ಬರಲಿದೆ. ನೀರಿನ ಸಮಸ್ಯೆ ಎದುರಾಗುವ ಗ್ರಾಮಗಳನ್ನು ಗುರುತಿಸಿ ಟಾಸ್ಕ್‌ಫೋರ್ಸ್‌ ವತಿಯಿಂದ ಜಿಲ್ಲಾಡಳಿತಕ್ಕೆ ಕಳಿಸಿಕೊಡಲಾಗಿದೆ.

ತಾಲೂಕಿನ ನಾರಾಯಣಪುರ, ತಾಳೂರು, ಯಶವಂತನಗರ, ಬಂಡ್ರಿ, ಕೋಡಿಹಳ್ಳಿ, ಕೆ. ಗೊಲ್ಲರಹಟ್ಟಿ, ನಿಡಗುರ್ತಿ, ಹುಲಿಕುಂಟೆ, ಕೊಂಡಾಪುರ, ಬೊಮ್ಮಾಘಟ್ಟ, ತೋಕೇನಹಳ್ಳಿ, ಸೆಲಿಯಪ್ಪನಹಳ್ಳಿ, ಡಿ.ಬಿ. ಹಳ್ಳಿ, ಸ್ವಾಮಿಹಳ್ಳಿ, ಜಿಗೇನಹಳ್ಳಿ, ಸೋವೇನಹಳ್ಳಿ, ಚೋರನೂರು, ಜಿ.ಎಲ್. ಹಳ್ಳಿ ಹಾಗೂ ಹೆಚ್‌ಕೆ.ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳನ್ನು ಗುರುತಿಸಲಾಗಿದೆ.

ರಾಮಘಡಕ್ಕೆ ಟ್ಯಾಂಕರ್ ಲಾರಿ ಮೂಲಕ ನೀರು ಪೂರೈಕೆ:

ತಾಲೂಕಿನ ರಾಮನಮಲೈ ಅರಣ್ಯ ಪ್ರದೇಶದಲ್ಲಿರುವ ರಾಮಘಡದ ಜನತೆಗೆ ಪ್ರತಿನಿತ್ಯ ಟ್ಯಾಂಕರ್ ಲಾರಿಗಳ ಮೂಲಕವೇ ನೀರು ಪೂರೈಕೆ ಮಾಡಲಾಗುತ್ತಿದೆ. ಸುತ್ತಮುತ್ತಲಿನ ಗಣಿಗಳಲ್ಲಿನ ಬ್ಲಾಸ್ಟಿಂಗ್‌ನಿಂದಾಗಿ ಇಲ್ಲಿ ಕೊಳವೆ ಬಾವಿ ಕೊರೆಸಿದರೂ ನೀರು ದೊರೆಯುವುದಿಲ್ಲ. ಹೀಗಾಗಿ ಗ್ರಾಮದಲ್ಲಿರುವ ಸುಮಾರು 65 ಮನೆಗಳಿಗೆ ಗಣಿ ಕಂಪನಿಗಳು ಪ್ರತಿನಿತ್ಯ ಲಾರಿಗಳ ಮೂಲಕ ನೀರನ್ನು ಸರಬರಾಜು ಮಾಡುತ್ತವೆ. ಕೋಡಾಲು ಸೇರಿದಂತೆ 33 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ನೀರನ್ನು ಪೂರೈಸಲಾಗುತ್ತಿದೆ. ನಿಡಗುರ್ತಿ ಸೇರಿದಂತೆ 63 ಗ್ರಾಮಗಳಿಗೆ, ತೋರಣಗಲ್ಲು ಹಾಗೂ ದರೋಜಿ ಭಾಗದ ಒಟ್ಟು 10 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ನೀರು ಪೂರೈಸುವ ಯೋಜನೆಯ ಕಾರ್ಯ ಪ್ರಗತಿಯಲ್ಲಿದ್ದು, ಇನ್ನು ಕೆಲ ತಿಂಗಳಲ್ಲಿ ಪೂರ್ಣವಾಗಬಹುದೆನ್ನಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿನ 151 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 6 ಘಟಕಗಳನ್ನು ಹೊರತು ಪಡಿಸಿ, ಉಳಿದವುಗಳು ಕಾರ್ಯನಿರ್ವಹಿಸುತ್ತಿವೆ.

ನಾರಿಹಳ್ಳ ಜಲಾಶಯ ತುಂಬಿರುವುದರಿಂದ ಸಂಡೂರು ಪಟ್ಟಣಕ್ಕೆ ನಾಲ್ಕು ದಿನಕ್ಕೊಮ್ಮೆ ನೀರನ್ನು ಪೂರೈಸಲಾಗುತ್ತಿದೆ. ಪಟ್ಟಣದಲ್ಲಿ ಹತ್ತು ಲಕ್ಷ ಲೀ.ನೀರು ಸಾಮರ್ಥ್ಯದ ನೀರು ಸಂಗ್ರಹ ಟ್ಯಾಂಕ್ ಅನ್ನು ನಿರ್ಮಿಸಲಾಗುತ್ತಿದೆ. ಡಿಎಂಎಫ್ ಹಾಗೂ ಕೆಎಂಇಆರ್‌ಸಿ ಯೋಜನೆ ಅಡಿಯಲ್ಲಿ ಪಟ್ಟಣಕ್ಕೆ ಅಗತ್ಯವಿರುವ ಇನ್ನೂ 30 ಲಕ್ಷ ಲೀ. ನೀರು ಸಂಗ್ರಹ ಟ್ಯಾಂಕ್‌ಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಈ ಕುರಿತ ಪ್ರಸ್ತಾವವನ್ನು ಸಲ್ಲಿಸಲಾಗಿದೆ. ಪಟ್ಟಣದಲ್ಲಿರುವ 16 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 2-3 ಹೊರತು ಪಡಿಸಿ ಉಳಿದವುಗಳು ಕಾರ್ಯನಿರ್ವಹಿಸುತ್ತಿವೆ. ಸ್ಥಗಿತಗೊಂಡಿರುವ 2-3 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸಲಾಗವುದು ಎಂದು ಪುರಸಭೆ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

48 ವಾರಗಳಿಗಾಗುವಷ್ಟು ಮೇವು ಲಭ್ಯ :

ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ವಲಿಬಾಷ ಅವರು ಕನ್ನಡಪ್ರಭ ಜೊತೆ ಮಾತನಾಡಿ, ಉತ್ತಮ ಮಳೆಯಾಗಿದ್ದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ. ಇನ್ನೂ 48 ವಾರಗಳಿಗಾಗುವಷ್ಟು ಮೇವು ತಾಲ್ಲೂಕಿನಲ್ಲಿದೆ ಎಂದರು. ಹಿಂದಿನ ವರ್ಷದಲ್ಲಿ ಉತ್ತಮ ಮಳೆಯಿಂದಾಗಿ ಕೆರೆ ಕುಂಟೆಗಳು ತುಂಬಿಕೊಂಡಿರುವುದು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಕಾರ್ಯಗತವಾಗಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಸದ್ಯಕ್ಕೆ ಯಾವುದೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ. ಮುಂದಿನ ದಿನಗಳಲ್ಲಿ ಎಲ್ಲಿಯಾದರು, ಕುಡಿಯುವ ನೀರಿನ ಸಮಸ್ಯೆ ತಲೆದೋರಿದರೆ, ಅದನ್ನು ನಿವಾರಿಸಲು ತಾಲ್ಲೂಕು ಟಾಕ್ಸ್ಪೋರ್ಸ್ ಸಮಿತಿ ಸಿದ್ಧತೆಯನ್ನು ಮಾಡಿಕೊಂಡಿದೆ.

ಕೆರೆಕುಂಟೆಗಳಲ್ಲಿ ನೀರಿರುವುದು ಜನರಿಗೆ ಮಾತ್ರವಲ್ಲದೆ, ಪ್ರಾಣಿ ಪಕ್ಷಿಗಳಿಗೂ ಅನುಕೂಲವಾಗಿದೆ ಎಂದು ತಿಳಿಸಿದರು. ನಮ್ಮ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿರುವ ಕಾರಣ, ನಾವು ಸುಮಾರು 9 ಕಿ.ಮೀ ದೂರವಿರುವ ಬೊಮ್ಮಾಘಟ್ಟಕ್ಕೆ ಹೋಗಿ ಫಿಲ್ಟರ್ ನೀರನ್ನು ತರುತ್ತೇವೆ. ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಿಸಿದರೆ, ಜನತೆಗೆ ಅನುಕೂಲವಾಗಲಿದೆ ಎನ್ನುತ್ತಾರೆ ಸೆಲಿಯಪ್ಪನಹಳ್ಳಿಯ ಮಂಜು.

ಬೇಸಿಗೆಯಲ್ಲಿ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದೆಂದು ಅಂದಾಜಿಸಲಾಗಿದೆ. ಹೀಗಾಗಿ ಕೊಳವೆ ಬಾವಿಗಳನ್ನು ರಿಬೋರ್ ಮಾಡಿಸಲು ಅಥವಾ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲು ಯೋಜಿಸಲಾಗಿದೆ. ಇಲಾಖೆಯದ್ದೇ ಒಂದು ಟ್ಯಾಂಕರ್ ಇದೆ. ಸದ್ಯಕ್ಕಂತೂ ಎಲ್ಲಿಯೂ ನೀರಿನ ಸಮಸ್ಯೆ ಇಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ವಿನಾಯಕ ತಿಳಿಸಿದ್ದಾರೆ.ಸಂಡೂರು ಪಟ್ಟಣದಲ್ಲಿ ಸರಾಸರಿ ನಾಲ್ಕು ದಿನಕ್ಕೊಮ್ಮೆ ನೀರನ್ನು ಪೂರೈಸಲಾಗುತ್ತಿದೆ. ಪಟ್ಟಣದಲ್ಲಿ ನೀರಿನ ಸಮಸ್ಯೆ ಇಲ್ಲ. ಹತ್ತು ಲಕ್ಷ ಲೀ. ನೀರು ಸಂಗ್ರಹ ಟ್ಯಾಂಕನ್ನು ನಿರ್ಮಿಸಲಾಗುತ್ತಿದೆ. ಪಟ್ಟಣದ ಜನಸಂಖ್ಯೆಗೆ ಇನ್ನೂ 30 ಲಕ್ಷ ಲೀ. ನೀರಿನ ಸಾಮರ್ಥ್ಯದ ನೀರು ಸಂಗ್ರಹ ಟ್ಯಾಂಕ್‌ಗಳು ಬೇಕಾಗಿವೆ. ಅವುಗಳ ನಿರ್ಮಾಣಕ್ಕೆ ಪ್ರಸ್ತಾವವನ್ನು ಸಲ್ಲಿಸಲಾಗಿದೆ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಬಿ. ವಿನಯ್‌ಕುಮಾರ್ ಗೌಡ.