ಆಧುನಿಕ ಯುಗದ ವೇಗದ ಭರದಲ್ಲಿ, ಇಂತಹ ಆಚರಣೆಗಳು ಮತ್ತು ಕಾರ್ಯಕ್ರಮಗಳು ಮನಸ್ಸಿಗೆ ಸಂತೋಷ ನೀಡುವುದು ಮಾತ್ರವಲ್ಲ ನಮ್ಮ ಸಂಸ್ಕೃತಿ, ಆಚರಣೆ ಹಾಗೂ ಪಾರಂಪರಿಕ ಪದ್ಧತಿಗಳನ್ನು ಜೀವಂತವಾಗಿರಿಸಲು ತುಂಬಾ ಸಹಕಾರಿ ಎಂದು ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅಭಿಪ್ರಾಯ ಪಟ್ಟರು.
ಶ್ರೀಮಂಗಲ : ಆಧುನಿಕ ಯುಗದ ವೇಗದ ಭರದಲ್ಲಿ, ಇಂತಹ ಆಚರಣೆಗಳು ಮತ್ತು ಕಾರ್ಯಕ್ರಮಗಳು ಮನಸ್ಸಿಗೆ ಸಂತೋಷ ನೀಡುವುದು ಮಾತ್ರವಲ್ಲ ನಮ್ಮ ಸಂಸ್ಕೃತಿ, ಆಚರಣೆ ಹಾಗೂ ಪಾರಂಪರಿಕ ಪದ್ಧತಿಗಳನ್ನು ಜೀವಂತವಾಗಿರಿಸಲು ತುಂಬಾ ಸಹಕಾರಿ ಎಂದು ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅಭಿಪ್ರಾಯ ಪಟ್ಟರು.
ಟಿ. ಶೆಟ್ಟಿಗೇರಿಯ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ 10ನೇ ವರ್ಷದ ಪತ್ತಾಲೋದಿ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.ಜನಾಂಗದಲ್ಲಿ ಜನಸಂಖ್ಯೆ ಕಡಿಮೆ ಇರುವ ಬಗ್ಗೆ ಗಮನ ಹರಿಸಬೇಕಾಗಿದೆ. ಆದರೆ, ವಾಸ್ತವ ಅರಿತುಕೊಂಡು ನಾವು ಮುಂದುವರಿಯಬೇಕು. ಕೊಡವ ಜನಾಂಗದಲ್ಲಿ ಹಿಂದಿನಿಂದಲೂ ಜನಸಂಖ್ಯೆ ಕಡಿಮೆ ಇತ್ತು. ಒಂದು ತಿಂಗಳಲ್ಲಿ ಅಥವಾ ಒಂದು ವರ್ಷದಲ್ಲಿ ಇದನ್ನು ಹೆಚ್ಚು ಮಾಡಲು ಸಾಧ್ಯವಿಲ್ಲ. ಇರುವ ಜನಸಂಖ್ಯೆಯಲ್ಲಿ ನಾವು ಜನಾಂಗಕ್ಕೆ ಹಾಗೂ ಸಮಾಜಕ್ಕೆ ಕೊಡುಗೆ ನೀಡಬೇಕಾಗಿದೆ. ಸಾಧನೆ ಮಾಡಬೇಕು. ಪಾರ್ಸಿ ಜನಾಂಗ ಕೇವಲ 50 ಸಾವಿರ ಜನ ಇದ್ದು ಅವರು ನೀಡಿದ ಕೊಡುಗೆಯು ಕೊಡವ ಜನಾಂಗಕ್ಕೆ ಮಾದರಿಯಾಗಬೇಕು ಎಂದು ಅವರು ಹೇಳಿದರು.
2029ರಲ್ಲಿ ಕೊಡವರ ಕೋವಿ ವಿನಾಯಿತಿ ಹಕ್ಕು ಮೊಟಕುಗೊಳ್ಳಲಿದೆ. ಇದನ್ನು ಮುಂದುವರಿಸಲು ಯಾರು ಕೆಲಸ ಮಾಡುವುದು ಎಂದು ಪ್ರಶ್ನಿಸಿದ ಅವರು, 2019ರಲ್ಲಿ ನ್ಯಾಯಾಲಯದಲ್ಲಿ ಈ ಹಕ್ಕನ್ನು ಉಳಿಸಿಕೊಳ್ಳಲು ನಾನು ಮನವರಿಕೆ ಮಾಡಿ ಮುಂದುವರಿಸಲು ಸಾಧ್ಯವಾಯಿತು. ಹಾಗೆಯೇ ಬುಡಕಟ್ಟು ಸ್ಥಾನಮಾನದ ಬಗ್ಗೆ ಕುಲಶಾಸ್ತ್ರ ಅಧ್ಯಯನವನ್ನು 2016ರಲ್ಲಿ ನಮ್ಮ ಸರ್ಕಾರ ಮಾಡಿದ್ದು ಆದರೆ ಆ ಅಧ್ಯಯನ ಸರಿಯಾಗಿ ಆಗಿಲ್ಲ ಎಂಬ ಹಿನ್ನೆಲೆಯಲ್ಲಿ 2024ರಲ್ಲಿ ಮತ್ತೆ ಕೊಡವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮಾಡಲು ಆದೇಶಿಸಲಾಯಿತು. ಆದರೆ ಕೋವಿ ಹಕ್ಕಿನ ಬಗ್ಗೆ ಬುಡಕಟ್ಟು ಸಮೀಕ್ಷೆಯ ಬಗ್ಗೆ ಕೊಡವ ಸಮಾಜಗಳು ಮುತುವರ್ಜಿ ವಹಿಸುತ್ತಿಲ್ಲ ಎಂದರು.ಈ ಹಿಂದೆ ನಮ್ಮ ಸರ್ಕಾರದಿಂದ ಕೊಡವ ಸಮಾಜಕ್ಕೆ 10 ಲಕ್ಷ ಅನುದಾನ ನೀಡಲಾಗಿತ್ತು. ಇದೀಗ ಮತ್ತೆ ಕೋರಿಕೆಯಂತೆ ಶಾಸಕರ ನಿಧಿಯಿಂದ 10 ಲಕ್ಷ ನೀಡುವುದಾಗಿ ಅವರು ಭರವಸೆ ನೀಡಿದರು.ಮತ್ತೋರ್ವ ಅತಿಥಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಅವರು ಮಾತನಾಡಿದರು.
ಕೊಡವ ತಕ್ಕ್ ಎಳ್ತ್ ಕಾರಡ ಕೂಟದ ವತಿಯಿಂದ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಬಟ್ಟಿಯಂಡ ಲಿಖಿತ ಪಳಂಗಪ್ಪ, ಮಾಳೇಟಿರ ಅಜಿತ್ ಪೂವಣ್ಣ, ಬೊಪ್ಪಂಡ ತ್ರಿಶೂಲ್ ಗಣಪತಿ ಅವರು ಕೊಡವ ಹಾಡುಗಳನ್ನು ಹಾಡಿ ರಂಜಿಸಿದರು. ‘ತಿಂಗಕೋರ್ ಮೊಟ್ಟ್ ತಲಕಾವೇರಿಕ್’ ಕೂಟದಿಂದ ಕೊಡವ ಜಾನಪದ ಕಲೆಯ ಪ್ರದರ್ಶನ ಗಮನ ಸೆಳೆಯಿತು.ಮೂರು ಮಕ್ಕಳನ್ನು ಹೊಂದಿದ ದಂಪತಿಗಳಾದ ಚೊಟ್ಟೆಯಾಂಡಮಾಡ ವಿನೋದ್ ಹಾಗೂ ಪೆಮ್ಮಂಡ ಭರತ್ ದಂಪತಿಗಳನ್ನು ಬಾಂಡ್ ನೀಡಿ ಸನ್ಮಾನಿಸಲಾಯಿತು. ಬಾಂಡ್ ಹಣ ದಾನಿಗಳಾದ ಕೈಬುಲಿರ ಪ್ರಭು ಉತ್ತಯ್ಯ -ಶೈಲಾ ಉತ್ತಯ್ಯ, ದಂಪತಿಯನ್ನು, ಚಿರಿಯಪಂಡ ಸುರೇಶ್ ನಂಜಪ್ಪ ಅವರನ್ನು ಸನ್ಮಾನಿಸಲಾಯಿತು.ಸಮಾಜದ ಉಪಾಧ್ಯಕ್ಷ ಮಚ್ಚಮಾಡ ಸುಮಂತ್ ಅವರು ಸಮಾಜ ಬೆಳೆದು ಬಂದ ಬಗ್ಗೆ ಹಿರಿಯರ ಕೊಡುಗೆಯನ್ನು ವಿವರಿಸಿದರು. ಕಾರ್ಯಕ್ರಮ ನಿರ್ವಹಿಸಿ, ಪತ್ತಾಲೋದಿ ಕಾರ್ಯಕ್ರಮ ಆರಂಭದ ಅಗತ್ಯತೆ ಅದರ ಯಶಸ್ವಿಯ ದಾರಿಯ ಬಗ್ಗೆ ಸಮಾಜದ ಸಾಂಸ್ಕೃತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ವಿವರಿಸಿದರು.ನಿರ್ದೇಶಕಿ ಚಂಗುಲಂಡ ಆಶ್ವಿನಿ ಸತೀಶ್ ಪ್ರಾರ್ಥಿಸಿ, ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ ಸ್ವಾಗತಿಸಿ, ಉಪ ಕಾರ್ಯದರ್ಶಿ ಬಾದುಮಂಡ ವಿಷ್ಣು ಕಾರ್ಯಪ್ಪ ವಂದಿಸಿದರು.ದಾನಿಗಳಾದ ಕೈಬುಲಿರ ಪ್ರಭು ಉತ್ತಯ್ಯ, ಸಮಾಜದ ಕ್ರೀಡಾ ಕಾರ್ಯದರ್ಶಿ ತಡಿಯಾಂಗಡ ಶಮ್ಮಿ ಸುಬ್ಬಯ್ಯ ನಿರ್ದೇಶಕರುಗಳಾದ ಚಂಗುಲಂಡ ಸತೀಶ್, ಮುಕ್ಕಾಟಿರ ಸಂದೀಪ್, ತಡಿಯಂಗಡ ಸೌಮ್ಯ ಕರುಂಬಯ್ಯ, ತೀತಿರ ಅನಿತಾ ಸುಬ್ಬಯ್ಯ, ಕೋಟ್ರಮಾಡ ರೇಷ್ಮಾ ಕಾರ್ಯಪ್ಪ, ಮಾಣೀರ ದೀಪಕ್, ತೀತಿರ ಸೋಮಣ್ಣ ಹಾಗೂ ಟಿ. ಶೆಟ್ಟಿಗೇರಿ ಆಟೋ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷ ಚೊಟ್ಟೆಯಾಂಡಮಾಡ ಪ್ರವೀಣ್ ಪೊನ್ನಪ್ಪ ಇದ್ದರು.