ಅಪಾಯಮಟ್ಟ ಮೀರಿ ಹರಿಯುತ್ತಿರುವ ನದಿಗಳು

| Published : Jun 27 2025, 12:48 AM IST

ಸಾರಾಂಶ

ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಜಿಲ್ಲೆಯ ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿದಂತೆ ಎಲ್ಲ ನದಿಗಳು ತುಂಬಿ ಹರಿಯುತ್ತಿವೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಜಿಲ್ಲೆಯ ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿದಂತೆ ಎಲ್ಲ ನದಿಗಳು ತುಂಬಿ ಹರಿಯುತ್ತಿವೆ.

ಕೃಷ್ಣಾ ನದಿಗೆ 1,08,723 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕೃಷ್ಣಾ ನದಿತೀರದ ಗ್ರಾಮಸ್ಥರಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ 84,083 ಕ್ಯುಸೆಕ್‌ ನೀರು ಕರ್ನಾಟಕದ ಕೃಷ್ಣಾ, ದೂಧಗಂಗಾ, ವೇದಗಂಗಾ ಹರಿದು ಬರುತ್ತಿದೆ. ಒಟ್ಟು ಕಲ್ಲೋಳ ಬ್ಯಾರೇಜ್‌ನ ಕೃಷ್ಣಾನದಿಗೆ 1,08,723 ಕ್ಯೂಸೆಕ್‌ನಷ್ಟು ನೀರು ಹರಿದು ಬರುತ್ತಿದೆ. ಕೃಷ್ಣಾ ನದಿ ಸೇರಿದಂತೆ ಉಪ ನದಿಗಳ ನೀರಿನ ಮಟ್ಟ ಸರಾಸರಿ 4 ಅಡಿಯಷ್ಟು ಏರಿಕೆಯಾಗಿದೆ. ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಹೆಚ್ಚಾಗುತ್ತಿದೆ. ನದಿ ತೀರದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ.ಗುರುವಾರ ಮತ್ತೆ ಎರಡು ಬ್ಯಾರೇಜ್‌ಗಳು ಜಲಾವೃತಗೊಂಡಿವೆ. ಚಿಕ್ಕೋಡಿ-ನಿಪ್ಪಾಣಿ ತಾಲೂಕಿನ ಎಲ್ಲಾ 8 ಬ್ಯಾರೇಜ್‌ಗಳು ಜಲಾವೃತಗೊಂಡಿವೆ. ವೇದಗಂಗಾ ನದಿಯ ಜತ್ರಾಟ-ಭಿವಸಿ, ಅಕ್ಕೋಳ-ಸಿದ್ದಾಳ ಬ್ಯಾರೇಜ್‌ಗಳು ಜಲಾವೃತಗೊಂಡಿವೆ. ವೇದಗಂಗಾ ನದಿಯ ಬಾರವಾಡ-ಕುನ್ನೂರ, ಭೋಜ- ಶಿವಾಪುರವಾಡಿ, ದೂಧಗಂಗಾ ನದಿಯ ಕಾರದಗಾ-ಭೋಜ, ಮಲಿಕವಾಡ- ದತ್ತವಾಡ, ಕೃಷ್ಣಾ ನದಿಯ ಕಲ್ಲೋಳ- ಯಡೂರ ಮತ್ತು ಮಾಂಜರಿ-ಸವದತ್ತಿ ಬ್ಯಾರೇಜ್‌ಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.ಜಲಾವೃತಗೊಂಡ ಹೊಲಗದ್ದೆ:

ಬೆಳಗಾವಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುವಾರ ತುಸು ಮಳೆ ಕಡಿಮೆಯಾಗಿದ್ದರೂ ಬಳ್ಳಾರಿ ನಾಲಾ ನೀರಿನಲ್ಲಿ ಅಪಾರ ಪ್ರಮಾಣದ ಬೆಳೆ ಜಲಾವೃತಗೊಂಡಿವೆ. ನಾಲಾದ ತೀರದಲ್ಲಿರುವ ಹೊಲಗದ್ದೆಗಳಿಗೆ ನೀರು ನುಗ್ಗಿರುವುದರಿಂದ ಕಟಾವಿಗೆ ಬಂದ ಗೆಣಸು ಜಲಾವೃತಗೊಂಡಿದೆ.ಬೆಳಗಾವಿ ತಾಲೂಕಿನ ಯಳ್ಳೂರು ಶಹಾಪುರ, ವಡಗಾವಿ ಭಾಗದ ರೈತರಿಂದ ಗೆಣಸು, ತರಕಾರಿ ಬೆಳೆ ಬೆಳೆಯಲಾಗಿದೆ. ಆದರೆ, ಬಳ್ಳಾರಿ ನಾಲಾ ನೀರು ಜಮೀನಿಗೆ ನುಗ್ಗಿದೆ. ಇದರಿಂದಾಗಿ ರೈತರು ಕಂಲಾಲಾಗಿದ್ದಾರೆ. ಜಲಾವೃತಗೊಂಡ ಜಮೀನಿನಲ್ಲೇ ಗೆಣಸು ಕಟಾವು ಮಾಡಲು ರೈತರು ಪರದಾಡುವಂತಾಗಿದೆ. ಕೊತಂಬರಿ, ಸಬ್ಬಸಗಿ, ಮೆತ್ತೆ ಸೇರಿ ತರಕಾರಿ ಬೆಳೆಗಳು ಹಾನಿ ಆಗುವ ಭೀತಿ ರೈತರಲ್ಲಿ ಎದುರಾಗಿದೆ.ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಧಾರಾಕಾರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕಿನಲ್ಲಿ ಮಲಪ್ರಭಾ, ಮಹದಾಯಿ ಮತ್ತು ಪಾಂಡರಿ ನದಿಗಳು ಸೇರಿದಂತೆ ಇಲ್ಲಿನ ಹಳ್ಳ-ಕೊಳ್ಳಗಳು ಉಕ್ಕಿ‌ ಹರಿಯುತ್ತಿವೆ. ಇದರ ಪರಿಣಾಮ ಕಾಡಂಚಿನ 15ಕ್ಕೂ ಅಧಿಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.ವರುಣನ ಆರ್ಭಟಕ್ಕೆ ಅವಾಂತರ ಸೃಷ್ಟಿಯಾಗಿದೆ. ಖಾನಾಪುರ-ಗೋವಾ ರಾಜ್ಯ ಹೆದ್ದಾರಿಯ ಮಂತುರ್ಗಾ ಬಳಿ ಸೇತುವೆ ಮೇಲೆ ಹಾಲಾತ್ರಿ ಹಳ್ಳ ತುಂಬಿ ಹರಿಯುತ್ತಿದೆ. ಸೇತುವೆ ಜಲಾವೃತವಾದ ಪರಿಣಾಮ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಬೆಳಗಾವಿ-ಚೋರ್ಲಾ, ಜಾಂಬೋಟಿ-ಜತ್ತ, ಸಿಂಧನೂರು-ಹೆಮ್ಮಡಗಾ ಹೆದ್ದಾರಿಗಳಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದೆ. ನೀರು ಕಡಿಮೆ ಆಗುವವರೆಗೆ ಈ ಮಾರ್ಗಗಳಲ್ಲಿ ಸಂಚರಿಸದಂತೆ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸೂಚಿಸಿದೆ.ಕುಸಮಳ್ಳಿ ಗ್ರಾಮದ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ಸೇತುವೆ ಕಾಮಗಾರಿ ನಿರ್ಮಾಣ ಹಂತದಲ್ಲಿದ್ದು, ಇಲ್ಲಿಯೇ ಪಕ್ಕದಲ್ಲಿ ತಾತ್ಕಾಲಿಕ ಸರ್ವಿಸ್ ರಸ್ತೆ ನಿರ್ಮಿಸಲಾಗಿತ್ತು. ಅದು ಕುಸಿದಿದ್ದರಿಂದ ಗೋವಾಗೆ ಸಂಪರ್ಕಿಸುವ ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿ ಮೇಲೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬಳಿಕ ಬೆಳಗಾವಿಯಿಂದ ಗೋವಾ ಕಡೆಗೆ ಸಾಗುವ ವಾಹನಗಳಿಗೆ ಬೈಲೂರು, ಹಬ್ಬನಹಟ್ಟಿ ಮಾರ್ಗವಾಗಿ ಅವಕಾಶ ಕಲ್ಪಿಸಲಾಗಿತ್ತು. ಈಗ ಈ ಮಾರ್ಗದ ಮೇಲೂ ನೀರು ಬಂದಿದೆ. ಹಾಗಾಗಿ, ಗೋವಾಗೆ ಹೋಗಲು ರಾಮನಗರ ಮೂಲಕ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಮಲಪ್ರಭಾ, ಪಾಂಡು, ಮಹದಾಯಿ ನದಿಗಳು ಹಾಗೂ ಕೋಟ್ನಿ, ಹಾಲಾತ್ರಿ, ಮಂಗೇತ್ರಿ, ಕುಂಬಾರ, ತಟ್ಟಿ, ಪಣಸೂರಿ, ಬೈಲ್, ಕಳಸಾ ಹಾಗೂ ಬಂಡೂರಿ ಹಳ್ಳಗಳು ಉಕ್ಕಿ ಹರಿಯುತ್ತಿವೆ. ಹಾಗಾಗಿ, ನೆರಸೆ, ಮಂತುರ್ಗಾ, ಅಶೋಕನಗರ, ಗವಳಿವಾಡ, ಹೆಮ್ಮಗಡಾ ಸೇರಿ 15ಕ್ಕೂ ಅಧಿಕ‌ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಕಾಡಂಚಿನ ಗ್ರಾಮಗಳ ಜನರು ಪ್ರತಿ ವರ್ಷದಂತೆ ಈ ಬಾರಿಯೂ ಸಂಕಷ್ಟ ಅನುಭವಿಸುವಂತಾಗಿದೆ.