ಸಾರಾಂಶ
ಪಂಡರಾಪುರ ದೇವರ ದರ್ಶನ ಮಾಡಿ ವಾಪಸ್ ಬರುವಾಗ ಗೋಪಾಲಕೃಷ್ಣ ಉಪಾಧ್ಯಾಯ ಹುಬ್ಬಳ್ಳಿಯಲ್ಲಿ ಮಂಗಳವಾರ ಮುಂಜಾನೆ 4 ಗಂಟೆ ಸುಮಾರಿಗೆ ಬಸ್‌ನಿಂದ ಇಳಿದರು, ಅಲ್ಲಿಂದ ತಮ್ಮ ಮಿತ್ರ ಸದಾನಂದ ದೇವಾಡಿಗರನ್ನು ಸಂಪರ್ಕಿಸಿ ಸ್ಕೂಟರ್‌ನಲ್ಲಿ ಕಾರು ಪಾರ್ಕಿಂಗ್ ಮಾಡಿದ್ದ ಜಾಗಕ್ಕೆ ಹೋಗುತ್ತಿರುವಾಗ ಅಪರಿಚಿತ ವಾಹನ ಸ್ಕೂಟರ್‌ಗೆ ಡಿಕ್ಕಿಯಾಗಿ ಇಬ್ಬರೂ ಮೃತಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಮೂಲ್ಕಿ
ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಹುಬ್ಬಳ್ಳಿ ಹೊರವಲಯದಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೂಲ್ಕಿ ಹಾಗೂ ಉಡುಪಿ ಜಿಲ್ಲೆಯ ಎಲ್ಲೂರು ಮೂಲದ ಯುವಕರಿಬ್ಬರು ಮೃತಪಟ್ಟಿದ್ದಾರೆ.ಕೊಲಕಾಡಿ ನಿವಾಸಿ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಗೋಪಾಲಕೃಷ್ಣ ಉಪಾಧ್ಯಾಯ (44), ಎಲ್ಲೂರು ನಿವಾಸಿ ಹುಬ್ಬಳ್ಳಿಯಲ್ಲಿ ವಾಸ್ತವ್ಯವಿರುವ ಸದಾನಂದ ದೇವಾಡಿಗ (56) ಮೃತರು.
ಕೊಲಕಾಡಿಯಿಂದ ಗೋಪಾಲಕೃಷ್ಣ ಉಪಾಧ್ಯಾಯ ಅವರ ಅಣ್ಣ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ಸಹಿತ 44 ಮಂದಿ ಬಸ್‌ನಲ್ಲಿ ಪಂಡರಾಪುರಕ್ಕೆ ದೇವರ ದರ್ಶನಕ್ಕೆ ಹೊರಟಿದ್ದರು. ಬೆಂಗಳೂರಿನಲ್ಲಿರುವ ಗೋಪಾಲಕೃಷ್ಣ ಉಪಾಧ್ಯಾಯರು ಹುಬ್ಬಳ್ಳಿಗೆ ಕಾರಿನಲ್ಲಿ ಬಂದು ಅಲ್ಲಿ ಇವರ ಜೊತೆ ಸೇರಿಕೊಂಡಿದ್ದರು. ಪಂಡರಾಪುರ ದೇವರ ದರ್ಶನ ಮಾಡಿ ವಾಪಸ್ ಬರುವಾಗ ಗೋಪಾಲಕೃಷ್ಣ ಉಪಾಧ್ಯಾಯ ಹುಬ್ಬಳ್ಳಿಯಲ್ಲಿ ಮಂಗಳವಾರ ಮುಂಜಾನೆ 4 ಗಂಟೆ ಸುಮಾರಿಗೆ ಬಸ್‌ನಿಂದ ಇಳಿದರು, ಅಲ್ಲಿಂದ ತಮ್ಮ ಮಿತ್ರ ಸದಾನಂದ ದೇವಾಡಿಗರನ್ನು ಸಂಪರ್ಕಿಸಿ ಸ್ಕೂಟರ್‌ನಲ್ಲಿ ಕಾರು ಪಾರ್ಕಿಂಗ್ ಮಾಡಿದ್ದ ಜಾಗಕ್ಕೆ ಹೋಗುತ್ತಿರುವಾಗ ಅಪರಿಚಿತ ವಾಹನ ಸ್ಕೂಟರ್‌ಗೆ ಡಿಕ್ಕಿಯಾಗಿ ಇಬ್ಬರೂ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತಪಟ್ಟವರ ಬಗ್ಗೆ ಮಾಹಿತಿ ತಿಳಿದು ಕೂಡಲೇ ಕೊಲೆಕಾಡಿಯತ್ತ ಪ್ರಯಾಣಿಸುತ್ತಿದ್ದ ಬಸ್‌ನಲ್ಲಿದ್ದವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಮೃತ ಗೋಪಾಲಕೃಷ್ಣ ಅವರು ಬೆಂಗಳೂರಿನ ಜಾಲಹಳ್ಳಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಸದಾನಂದ ದೇವಾಡಿಗ ಹುಬ್ಬಳ್ಳಿಯಲ್ಲಿ ಕ್ಯಾಟರಿಂಗ್ ವೃತ್ತಿ ನಡೆಸುತ್ತಿದ್ದು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.