* ಪ್ರತಿಭಟನಾ ಮೆರವಣಿಗೆ- ಸಿಪಿಐ (ಎಂಎಲ್) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಎಚ್ಚರಿಕೆ । ರೈತರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಕನ್ನಡಪ್ರಭ ವಾರ್ತೆ ಲಿಂಗಸುಗೂರು

ಸರ್ಕಾರಿ ಭೂಮಿ ಸಾಗುವಳಿ ಮಾಡುವ ರೈತರಿಗೆ ಭೂಮಿ ಪಟ್ಟಾ ನೀಡಬೇಕು ಹಾಗೂ ಅರಣ್ಯ ಭೂಮಿ ಸಾಗುವಳಿ ಮಾಡುವ ರೈತರಿಗೆ ಅರ್ಜಿ ಹಾಕಲು ಕೂಡಲೇ ಗ್ರಾಮ ಸಮಿತಿ ನೇಮಕ ಮಾಡಬೇಕು ಎನ್ನುವುದು ಸೇರಿದಂತೆ ರೈತರ ಬೇಡಿಕೆಗಳ ಈಡೇರಿಕೆಗಾಗಿ ಲಿಂಗಸುಗೂರು ಪಟ್ಟಣದ ಬಸ್ ನಿಲ್ದಾಣದ ಅಂಬೇಡ್ಕರ್ ವೃತ್ತದಲ್ಲಿ ಸ್ವಾತಂತ್ರೋತ್ಸವದ ದಿನದಂದು ರಸ್ತೆ ಬಂದ್ ಹೋರಾಟ ಮಾಡಲಾಗುವುದೆಂದು ಸಿಪಿಐ (ಎಂಎಲ್) ರೆಡ್‌ಸ್ಟಾರ್ ಪಾಲಿಟ್ ಬ್ಯೂರೋದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಎಚ್ಚರಿಕೆ ನೀಡಿದರು.

ಗುರುವಾರ ಪಟ್ಟಣದ ಬಸ್ ನಿಲ್ದಾಣದ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಸಹಾಯಕ ಆಯುಕ್ತರ ಕಚೇರಿ ಬಳಿ ಪತ್ರಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಅವರು, ಜನವರಿ ತಿಂಗಳಲ್ಲಿ ಸರ್ಕಾರಿ ಭೂಮಿ ಸಾಗುವಳಿ ಮಾಡುವ ರೈತರಿಗೆ ಭೂಮಿ ಪಟ್ಟಾ ನೀಡಬೇಕೆಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಪತ್ರಿಭಟನೆ ನಡೆಸಿದಾಗ ಅಂದಿನ ಪ್ರತಿಭಟನೆಗೆ ಸಹಾಯಕ ಆಯುಕ್ತರು, ತಹಸೀಲ್ದಾರರು, ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಬಂದು ಭೂಮಿ ಪಟ್ಟಾ ನೀಡುವ ಕುರಿತು ಭರವಸೆ ನೀಡಿದ್ದೀರಿ. ಅಲ್ಲದೇ ಮಾಜಿ ಶಾಸಕ ಡಿ.ಎಸ್.ಹೂಲಗೇರಿಯೂ ಸರ್ಕಾರದ ಮಟ್ಟದಲ್ಲಿ ಸಚಿವರು, ಮೇಲಧಿಕಾರಿ ಗಳನ್ನು ಭೇಟಿ ಮಾಡಿ ಪಟ್ಟಾ ಕೊಡುವ ಬಗ್ಗೆ ಭರವಸೆ ನೀಡಿದ್ದೀರಿ. ಆದರೆ ಇದುವರೆಗೂ ರೈತರಿಗೆ ಅರ್ಧ ಎಕರೆ ಭೂಮಿ ಹಂಚಿಕೆ ಮಾಡಿಲ್ಲ ಎಂದು ತೀವ್ರ ಟೀಕಾ ಪ್ರಹಾರ ನಡೆಸಿದರು.

ಇನ್ನೂ ಶಾಸಕ ಮಾನಪ್ಪ ವಜ್ಜಲ್ ಭೂಮಿ ಹಂಚಿಕೆ ಮಾಡಲು ಅಧಿಕಾರಿಗಳಿಗೆ ಹೇಳಲಾಗಿದೆ ಎಂದು ಮಾದ್ಯಮದಲ್ಲಿ ಹೇಳಿದರು. ಹೇಳಿ ಆರು ತಿಂಗಳು ಉರುಳಿದರು ಭೂಮಿ ಹಂಚಿಕೆ ಮಾಡಿಲ್ಲ. ಕನಿಷ್ಟ ಅರಣ್ಯ ಭೂಮಿ ಸಾಗುವಳಿ ಮಾಡುವ ರೈತರಿಗೆ ಅರ್ಜಿ ಹಾಕಲು ಸಮಿತಿ ರಚನೆ ಮಾಡಿಲ್ಲ ಎಂದು ಆರೋಪಿಸಿದರು.

ರೈತರಿಗೆ ಭೂಮಿ ಪಟ್ಟಾ ನೀಡಲು ಆಗ್ರಹಿಸಿ ಸ್ವಾತಂತ್ರ್ಯೋತ್ಸವದ ದಿನದಂದು ಅಂದರೆ, ಆಗಷ್ಟ್‌ ೧೪ರಂದು ಅಹೋರಾತ್ರಿ ಧರಣಿ ನಡೆಸಿ ಅಂದು ಬೆಳಗ್ಗೆ ಲಿಂಗಸುಗೂರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆ ಮಾಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.


ಪತ್ರಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ಪಾರಂ ೫೭ರಡಿ ಅರ್ಜಿ ಸಲ್ಲಿಸಿದ ರೈತರ ಅರ್ಜಿ ಪರಿಶೀಲನೆ ಮಾಡಲಾಗಿದೆ, ಮತ್ತು ಅರಣ್ಯ ಭೂಮಿ ಹಾಗೂ ಕಂದಾಯ ಭೂಮಿಯ ಬಗ್ಗೆ ಸರ್ವೆ ಮಾಡಿ ವಿಗಂಡನೆ ಮಾಡುವುದು ಕೊನೆ ಹಂತದಲ್ಲಿ ಇದೆ. ಅರಣ್ಯ ಭೂಮಿ ಸಾಗುವಳಿ ರೈತರು ಅರ್ಜಿ ಸಲ್ಲಿಸಲು ಗ್ರಾಮ ಸಮಿತಿಗಳ ರಚನೆ ಮಾಡಲಾಗುವುದು. ಎಸ್‌ಐಆರ್ ಕಾರ್ಯ ಮಾಡಬೇಕಿರುವುದರಿಂದ ಅಗಷ್ಟ ೨೪ರ ವರೆಗೆ ಕಾಲಾವಕಾಶ ನೀಡಿದರೆ. ಸರ್ಕಾರಿ ಭೂಮಿ ಸಾಗುವಳಿ ಪಟ್ಟಾ ಕುರಿತು ಸ್ಟಷ್ಟ ಚಿತ್ರಣ ನೀಡಲಾಗುವುದೆಂದು ಹೇಳಿದರು.

ಈ ವೇಳೆ ಕೆಆರ್‌ಎಸ್ ಜಿಲ್ಲಾಧ್ಯಕ್ಷ ಮಲ್ಲಯ್ಯ ಕಟ್ಟಿಮನಿ, ತಾಲೂಕ ಅಧ್ಯಕ್ಷ ವೀರಭದ್ರಪ್ಪ ತರ‍್ಲಬೆಂಚಿ, ತಾಲೂಕ ಕಾರ್ಯದರ್ಶಿ ತಿಪ್ಪರಾಜ ಗೆಜ್ಜಲಗಟ್ಟಾ, ಕೆಆರ್‌ಎಸ್ ಉಪಾಧ್ಯಕ್ಷ ತಿಪ್ಪಣ್ಣ ಚಿಕ್ಕಹೆಸರೂರು, ಕಾರ್ಯದರ್ಶಿ ಬಸವರಾಜ ಬಡಿಗೇರ, ಸಿಪಿಐ(ಎಂಎಲ್) ರೆಡ್‌ಸ್ಟಾರ್ ರಸೀದದ ಜಮದಾರ, ಆದೇಶ ನಗನೂರು, ಬಸವರಾಜ ಹೆಸರೂರು, ರಮೇಶ ಹೆಸರೂರು, ದ್ಯಾಮಣ್ಣ ಸುಣಕಲ್, ಗುಂಡಪ್ಪ ಗೋಲಪಲ್ಲಿ, ಚಿದಾನಂದ ಕಸಬಾಲಿಂಗಸುಗೂರು, ಪರಸಪ್ಪ, ಬಸ್ಸಪ್ಪ ದಳಪತಿ, ಜೋಗಮ್ಮ ತರ‍್ಲಬೆಂಚಿ, ದುರುಗಮ್ಮ ದೇವರಬುಪೂರ ಸೇರಿದಂತೆ ಇದ್ದರು.

--

ಫೋಟೋ೨೩ಕೆಪಿಎಲ್‌ಎನ್‌ಜಿ೦೩: ಲಿಂಗಸುಗೂರು ಸಹಾಯಕ ಆಯುಕ್ತ ಕಚೇರಿ ಮುಂದೆ ಕರ್ನಾಟಕ ರೈತ ಸಂಘದಿಂದ ಸರ್ಕಾರಿ ಭೂಮಿ ಪಟ್ಟಾ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.