ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಪಂಚಮಸಾಲಿ ಸಮುದಾಯದ ಶಾಂತಿಯುತ ಹೋರಾಟವನ್ನು ಹತ್ತಿಕ್ಕಲು ಮಂಗಳವಾರ ಬೆಳಗಾವಿಯಲ್ಲಿ ಪ್ರತಿಭಟನೆ ನಿರತರ ಮೇಲೆ ಲಾಠಿಚಾರ್ಜ್ ಮಾಡಿ, ಹೋರಾಟದ ಧಿಕ್ಕು ತಪ್ಪಿಸುವ ಪ್ರಯತ್ನ ಸರ್ಕಾರ ಮಾಡುತ್ತಿದ್ದು, ಸರ್ಕಾರದ ನಡೆ ಖಂಡನೀಯವಾಗಿದೆ. ಲಾಠಿಚಾರ್ಜ್ ಮಾಡಲು ಆದೇಶ ನೀಡಿರುವ ಎಡಿಜಿಪಿ ಆರ್.ಹಿತೇಂದ್ರ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿ, ತಾಲೂಕಿನ ಪಂಚಮಸಾಲಿ ಸಮುದಾಯದ ಮುಖಂಡರು ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿ, ಆಗ್ರಹಿಸಿದರು.ಪಟ್ಟಣದ ಚನ್ನಮ್ಮಾ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆದು, ಪ್ರತಿಭಟನೆ ನಡೆಸಿ, ಉಪತಹಸೀಲ್ದಾರ್ ಅಣ್ಣಾಸಾಹೇಬ ಕೋರೆ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ, ಆಗ್ರಹಿಸಿದರು.
ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸನಗೌಡ ಪಾಟೀಲ (ಮಮ್ನಾಳ) ಮಾತನಾಡಿ, ಕಳೆದ ಮೂರ್ನಾಲ್ಕು ವರ್ಷಗಳಿಂದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಶಾಂತಿಯುತ ಹೋರಾಟ ಮಾಡುತ್ತ ಬಂದಿದ್ದು, ಕಳೆದ ಮಂಗಳವಾರ ಸರ್ಕಾರ ಪೊಲೀಸ್‌ರ ಮೂಲಕ ಲಿಂಗಾಯತ ಪಂಚಮಸಾಲಿಗರ ಮೇಲೆ ಲಾಠಿ ಚಾರ್ಜ್ ಮಾಡಿಸಿದೆ. ಇದಕ್ಕೆ ಪಂಚಮಸಾಲಿ-ಲಿಂಗಾಯತರು ಮುಂಬರುವ ದಿನಗಳಲ್ಲಿ ಉತ್ತರ ಕೊಡಲಿದ್ದಾರೆ. ಕೂಡಲೇ ಲಾಠಿ ಬೀಸಲು, ಆದೇಶಿಸಿದ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ಸರ್ಕಾರ ಸರ್ವಾಧಿಕಾರಿಂತೆ ವರ್ತಿಸದೇ ನಮಗೆ ನಮ್ಮ ನ್ಯಾಯಯುತ ಬೇಡಿಕೆಯಾದ 2ಎ ಮೀಸಲಾತಿ ನೀಡಬೇಕು. ಇಲ್ಲವಾದಲ್ಲಿ ನಮ್ಮ ಸ್ವಾಮೀಜಿ ನೇತೃತ್ವದಲ್ಲಿ ಎಲ್ಲ ರೀತಿಯ ಹೋರಾಟಕ್ಕೆ ನಾವು ಸದಾ ಸಿದ್ಧರಿದ್ದೇವೆ. ನಮ್ಮ ಹೋರಾಟ ಮೀಸಲಾತಿ ಸಿಗುವವರೆಗೂ ನಿರಂತರ ನಡೆಯಲಿದೆ ಎಂದು ಗುಡುಗಿದರು.ನ್ಯಾಯವಾದಿ ರಾಹುಲ ಕಟಗೇರಿ ಮಾತನಾಡಿ, ರಾಜ್ಯ ಸರ್ಕಾರ ಪಂಚಮಸಾಲಿ ಸಮಾಜದ ಮೇಲೆ ಅನ್ಯಾಯ ಮಾಡುತ್ತಿದೆ. ಇದನ್ನು ಖಂಡಿಸಿ, ಸರ್ಕಾರದಲ್ಲಿರುವ ನಮ್ಮ ಸಮಾಜದ ಅರ್ಧದಷ್ಟು ಶಾಸಕರು ಮತ್ತು ಸಚಿವರು ಕೂಡಲೇ ರಾಜೀನಾಮೆ ನೀಡಿ, ಹೊರ ಬಂದು ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು. ಯಾವ ಸರ್ಕಾರವು ಲಿಂಗಾಯತ ಪಂಚಮಸಾಲಿಗರ ಮೇಲೆ ಕೈ ಮಾಡಿಲ್ಲ. ಆದರೆ, ಈಗಿನ ಸರ್ಕಾರ ಕೈ ಮಾಡಿ, ನಮ್ಮ ಮುಖಂಡರು ಹಾಗೂ ವಕೀಲರ ಮೇಲೆ ಪ್ರಕರಣ ದಾಖಲಿಸಿ, ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದನ್ನು ಕೂಡಲೇ ನಿಲ್ಲಿಸಿ, ಪ್ರಕರಣ ಹಿಂಪಡೆದು, ನಮ್ಮ ಸ್ವಾಮೀಜಿಗಳ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ಉಗ್ರವಾಗಲಿದೆ ಎಂದು ತಿಳಿಸಿದರು.ಮುಂಜಾಗ್ರತಾ ಕ್ರಮವಾಗಿ ಪಿಎಸೈ ಜಿ.ಜಿ.ಬಿರಾದರ ಹಾಗೂ ರಾಕೇಶ ಬಗಲಿ ನೇತೃತ್ವದಲ್ಲಿ ಬಂದೋಬಸ್ತ ಮಾಡಲಾಗಿತ್ತು. ಈ ವೇಳೆ ಮುಖಂಡರಾದ ಬಸನಗೌಡ ಪಾಟೀಲ (ಬೊಮ್ಮನಾಳ), ಉಮೇಶಗೌಡ ಪಾಟೀಲ, ಸೌರಭ ಪಾಟೀಲ, ನಾಥಗೌಡ ಪಾಟೀಲ, ಅಣ್ಣಾಗೌಡ ಪಾಟೀಲ, ರಮೇಶ ಚೌಗಲೆ, ರಾಜಗೌಡ ಪಾಟೀಲ, ಜ್ಯೋತಿಕುಮಾರ ಪಾಟೀಲ, ರಾಘವೇಂದ್ರ ಜಾಯಗೊಂಡೆ, ಕಾಕಾಸಾಬ ಪಾಟೀಲ, ರಾಹುಲ ಕಟಗೇರಿ, ತಾತ್ಯಾಸಾಬ ಗಡಗೆ, ಪ್ರಕಾಶ ಪಾಟೀಲ, ಅಶೋಕ ಪಾಟೀಲ, ವಿನಾಯಕ ಚೌಗಲೆ, ಸುಭಾಷ ಅಥಣಿ, ಅಶೋಕ ನಾಂದಣಿ, ಬಾಲಕೃಷ್ಣ ಪಾಟೀಲ, ಮಹಾದೇವ ವಡಗಾಂವೆ, ಶಿವಾನಂದ ಪಾಟೀಲ, ರಾಕೇಶ ಪಾಟೀಲ, ಎ.ಜಿ.ಪಾಟೀಲ, ಚೇತನ ಪಾಟೀಲ, ಸೇರಿದಂತೆ ತಾಲೂಕಿನ ನೂರಾರು ಪಂಚಮಸಾಲಿ ಮುಖಂಡರು ಉಪಸ್ಥಿತರಿದ್ದರು.