ಸಂಪೂರ್ಣ ಹದಗೆಟ್ಟ ರಸ್ತೆ: ವಾಹನ ಚಾಲಕರ ಪರದಾಟ

| Published : Jul 09 2024, 12:48 AM IST

ಸಾರಾಂಶ

ಶ್ರೀ ಪೊನ್ನು ಮುತ್ತಪ್ಪ ದೇವಸ್ಥಾನದ ಬಳಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ವಾಹನ ಚಾಲಕರು ಪರದಾಡುವಂತಾಗಿದೆ.

ದುಗ್ಗಳ ಸದಾನಂದ ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಹಳೆ ತಾಲೂಕು ಶ್ರೀ ಪೊನ್ನು ಮುತ್ತಪ್ಪ ದೇವಸ್ಥಾನದ ಬಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಚಾಲಕರು ಪರದಾಡುವಂತಾಗಿದೆ.

ನಾಪೋಕ್ಲುನಿಂದ ಹಳೆ ತಾಲೂಕು, ಭಾಗಮಂಡಲ, ಕಕ್ಕಬೆ ಮುಖ್ಯ ರಸ್ತೆಯಲ್ಲಿ ಹೊಂಡಗಳಾಗಿ ಏಕಮುಖ ರಸ್ತೆಯಂತಾಗಿದ್ದು ದ್ವಿಚಕ್ರ ವಾಹನ ಸವಾರರು ಸೇರಿದಂತೆ ಇತರ ವಾಹನ ಸವಾರರು ಸಂಚರಿಸಲು ಜೀವ ಭಯಪಡುವಂತಾಗಿದೆ. ಸಂತೆಯ ದಿನವಾದ ಸೋಮವಾರ ವಾಹನಗಳ ಸಂಖ್ಯೆ ಹೆಚ್ಚಿದ್ದು ಗುಂಡಿ ತಪ್ಪಿಸಲು ಹೋಗಿ ವಾಹನ ಚಾಲಕರು ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಹಲವು ಬಾರಿ ಬಿದ್ದು ಸಮಸ್ಯೆ ಅನುಭವಿಸಿದ್ದು ಇದೀಗ ಪುನರಾವರ್ತನೆಯಾಗುತ್ತಿದೆ .

ಸೂಕ್ತ ಚರಂಡಿ ವ್ಯವಸ್ಥೆಗಳು ಇಲ್ಲದೆ ಈಗ ಮತ್ತೆ ರಸ್ತೆ ಗುಂಡಿಗಳಾಗಿದ್ದು ಕೆಸರು ನೀರು ತುಂಬಿಕೊಂಡಿದೆ. ಗುಂಡಿ ತಪ್ಪಿಸಲು ಹೋಗಿ ಸವಾರರಿಗೆ ಅಪಘಾತಗಳಾಗಿ ಹಲವು ರೀತಿಯ ತೊಂದರೆಗಳನ್ನು ಅನುಭವಿಸುವಂತಾಗಿದೆ. ಎರಡು ಭಾಗಗಳಿಂದ ಬರುವ ವಾಹನಗಳು ಇರುವ ಕಿರು ದಾರಿಯಲ್ಲಿ ಸಂಚರಿಸುತ್ತಿದ್ದು ವಾಹನ ಸಂಚಾರಕ್ಕೆ ತೀವ್ರತರದ ಸಮಸ್ಯೆ ಆಗುತ್ತಿದೆ. ಸಂಬಂಧ ಪಟ್ಟ ಇಲಾಖೆ, ಜನಪ್ರತಿನಿಧಿಗಳು, ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಮುಖ್ಯ ರಸ್ತೆಯಲ್ಲಿ ದಿನನಿತ್ಯ ಹಲವಾರು ವಾಹನಗಳು ಸಂಚರಿಸುತ್ತಿದ್ದು ಚರಂಡಿ ಅವಸ್ಥೆ ಇಲ್ಲದೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಕೆಲವು ದಿನಗಳಿಂದ ರಸ್ತೆ ಗುಂಡಿಗಳಾಗಿ ತೀವ್ರ ಸಮಸ್ಯೆ ಎದುರಾಗಿ ಅಪಘಾತಗಳಿಗೆ ಕಾರಣವಾಗುತ್ತಿದ್ದು ಸಂಬಂಧಪಟ್ಟವರು ಕೂಡಲೇ ಗುಂಡಿಗಳನ್ನು ಮುಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಲ್ಲಮಾವಟ್ಟಿ ನೇತಾಜಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಸಿ.ಎಸ್ ಸುರೇಶ್ ಹೇಳಿದರು.

ಎದುರಿನಿಂದ ಬರುವ ವಾಹನಗಳಿಗೆ ಸ್ಥಳಾವಕಾಶ ಕೊಡಲು ಆಗುತ್ತಿಲ್ಲ. ರಸ್ತೆ ಹೊಂಡ ತೀವ್ರ ಸಮಸ್ಯೆ ತಂದಿದೆ. ಕೂಡಲೇ ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಕೊಡಬೇಕು ಎಂದು ಒತ್ತಾಯಿಸಿದರು ಎಂದು ನೆಲಜಿ ಶಾಲಾ ಬಸ್ಸು ಚಾಲಕ ಶಂಭು ಅಯ್ಯಣ್ಣ ತಿಳಿಸಿದರು.

ಕಳೆದ ಬಾರಿಯೂ ಈ ರೀತಿಯ ಸಮಸ್ಯೆ ಉಂಟಾಗಿತ್ತು. ರಸ್ತೆ ಹೊಂಡಗಳನ್ನು ಮುಚ್ಚಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದ್ದರು. ಚಾಲಕರಿಗೆ ಇತರ ವಾಹನಗಳ ಚಾಲಕರಿಗೆ ಸಮಸ್ಯೆ ಆಗುತ್ತಿದೆ. ಆದಷ್ಟು ಬೇಗ ರಸ್ತೆ ದುರಸ್ತಿ ಪಡಿಸಿದರೆ ತುಂಬಾ ಅನುಕೂಲವಾಗುತ್ತದೆ ಎಂದು ನೆಲಜಿ ಬದಂಚೆಟ್ಟಿರ ವಿನೋದ್ ತಿಮ್ಮಯ್ಯ ತಿಳಿಸಿದರು.

ರಸ್ತೆ ಗುಂಡಿ ಬಿದ್ದು ವಾಹನಗಳು ಒಂದೇ ಬದಿಯಲ್ಲಿ ಸಂಚರಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷವೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ದುಃಸ್ಥಿತಿಯಿಂದಾಗಿ ಇಲ್ಲಿ ಸಣ್ಣಪುಟ್ಟ ಅಪಘಾತಗಳಾಗಿದ್ದು ಹೆಚ್ಚಿನ ಅನಾಹುತ ಆಗುವ ಮೊದಲು ಸಂಬಂಧಪಟ್ಟವರು ಗುಂಡಿಗಳನ್ನು ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಎಮ್ಮೆಮಾಡು ಆಟೋ ಚಾಲಕ ಸಿಎ.ಚ್ ಮೈದು ತಿಳಿಸಿದರು.