ನವಂಬರ್‌ನಲ್ಲಿ ಶಿವಪೂಜಾನುಷ್ಟಾನ, ಧರ್ಮಜಾಗೃತಿ ಸಮಾರಂಭ

| Published : Jul 09 2024, 12:48 AM IST

ಸಾರಾಂಶ

ರಿಪ್ಪನ್‍ಪೇಟೆ ಸಮೀಪದ ಕೋಣಂದೂರು ಬೃಹನ್ಮಠದಲ್ಲಿ ಧರ್ಮಜಾಗೃತಿ ಸಮಾರಂಭದ ಪೂರ್ವ ಭಾವಿ ಸಭೆಯು ಕೋಣಂದೂರು ಬೃಹನ್ಮಠದ ಷ.ಬ್ರ,ಶ್ರೀಪತಿ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅಧ್ಯಕ್ಷತೆಯಲ್ಲಿ ಜರುಗಿತು.

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ಸಮೀಪದ ಕೋಣಂದೂರು ಬೃಹನ್ಮಠದಲ್ಲಿ ನಿರ್ಮಿಸಲಾಗಿರುವ ಗುರು ನಿವಾಸ ಶಿಲಾಮಂಟಪ ಕರ್ತೃ ಗದ್ದುಗೆ ಹಾಗೂ ಪಂಚಪೀಠಾಧೀಶ್ವರ ಜಗದ್ಗುರುಗಳ ಇಷ್ಟಲಿಂಗ ಶಿವಪೂಜಾನುಷ್ಟಾನ ಹಾಗೂ ಧರ್ಮಜಾಗೃತಿ ಸಮಾರಂಭವೂ ನ.6ರಿಂದ 8ರ ವರೆಗೆ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದು, ಇದರ ಅಂಗವಾಗಿ ಭಾನುವಾರ ಪೂರ್ವ ಭಾವಿ ಸಭೆಯು ಕೋಣಂದೂರು ಬೃಹನ್ಮಠದ ಷ.ಬ್ರ,ಶ್ರೀಪತಿ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅಧ್ಯಕ್ಷತೆಯಲ್ಲಿ ಜರುಗಿತು.

ಈ ಕಾರ್ಯಕ್ರಮವು ಮೂರು ದಿನಗಳ ಕಾಲ ನಡೆಯಲಿದ್ದು ಸುಮಾರು 20 ರಿಂದ 25 ಲಕ್ಷ ರು. ವೆಚ್ಚವಾಗಲಿದ್ದು ಮಠದ ಭಕ್ತರ ಸಹಕಾರದೊಂದಿಗೆ ಈ ಎಲ್ಲಾ ಧರ್ಮಕಾರ್ಯಗಳು ನಡೆಯಬೇಕಾಗಿರುವುದರಿಂದಾಗಿ ನಾಲ್ಕು ಐದು ತಿಂಗಳ ಮೊದಲೇ ಪೂರ್ವ ಭಾವಿ ಸಭೆಯನ್ನು ಭಕ್ತ ಸಮೂಹದಲ್ಲಿ ಕರೆಯಲಾಗಿದು ಭಕ್ತರ ಸಲಹೆ ಸೂಚನೆಯನ್ವಯ ಕಾರ್ಯಕ್ರಮದ ರೂಪರೇಷ ಸಿದ್ಧಪಡಿಸಲಾಗುವುದೆಂದು ಶ್ರೀಗಳು ಸಭೆಯಲ್ಲಿ ಪ್ರಾಸ್ತಾವನೆ ಇಟ್ಟರು.

ನ.6ರಂದು ಸಂಜೆ ಶ್ರೀಶೈಲ ಪಂಚಪೀಠದ ಜಗದ್ದುರುಗಳು ಮತ್ತು ಕಾಶಿ ಪೀಠದ ಜಗದ್ಗುರುಗಳು ಹಾಗೂ ಉಜ್ಜಯನಿ ಪೀಠದ ಜಗದ್ಗುರುಗಳು ಕೋಣಂದೂರು ಮಠಕ್ಕೆ ದಯಮಾಡಿಸುವರು. ಅಂದು ರಾತ್ರಿ ನೂತನ ಗುರುನಿವಾಸ ಶಿಲಾಮಂಟಪ ಮತ್ತು ಕರ್ತೃ ಗದ್ದುಗೆಗೆ ಪ್ರವೇಶೋತ್ಸವದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗುವುದು.

ನ.7ರಂದು ಮುಂಜಾನೆ ಪೂಜೆಯೊಂದಿಗೆ ಉಭಯ ಜಗದ್ಗುರುಗಳಿಂದ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಜರುಗಲಿದ್ದು, ನ.8ರಂದು ಬೆಳಗ್ಗೆ ನೂತನ ಶಿಲಾಮಯ ಕಟ್ಟಡದ ಉದ್ಘಾಟನೆ ಮತ್ತು ಕರ್ತೃಗದ್ದುಗೆ ಲೋಕಾರ್ಪಣೆ ಕಾರ್ಯಕ್ರಮ ಜರುಗುವುದು. ನಂತರ ಧರ್ಮ ಸಮಾರಂಭದಲ್ಲಿ ಗುರು ವಿರಕ್ತ ಪೀಠಾಧ್ಯಕ್ಷರ ಸಮಾಗಮದಲ್ಲಿ ಧರ್ಮಜಾಗೃತಿ ಕಾರ್ಯಕ್ರಮವು ಶ್ರೀಶೈಲ, ಕಾಶಿ, ಮತ್ತು ಉಜ್ಜಯನಿ ಪಂಚಪೀಠಾಧ್ಯಕ್ಷರು ಮತ್ತು ಆನಂದಪುರಂ ಮುರುಘಾಮಠದ ಜಗದ್ಗುರು ಮ.ನಿ.ಪ್ರ ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧರ್ಮ ಜಾಗೃತಿ ಕಾರ್ಯಕ್ರಮ ಜರುವುದು. ಎಂದು ಮಾಹಿತಿ ನೀಡಿದರು.

ಪೂರ್ವಭಾವಿ ಸಭೆಯಲ್ಲಿ ಹಲವು ಭಕ್ತರು ವಾಗ್ದಾನ ಮಾಡುವುದರೊಂದಿಗೆ ಶ್ರೀಗಳು ಮುಂದಿನ ದಿನಗಳಲ್ಲಿ ತೀರ್ಥಹಳ್ಳಿ-ಹೊಸನಗರ-ಸಾಗರ-ಸೊರಬ ಶಿಕಾರಿಪುರ-ಶಿವಮೊಗ್ಗ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಮಠದ ಭಕ್ತರ ಮತ್ತು ಸಮಾಜ ಬಾಂಧವರನ್ನು ಸಂಪರ್ಕಿಸಿ ಗ್ರಾಮದಲ್ಲಿ ಈ ಧಾರ್ಮಿಕ ಕಾರ್ಯಕ್ಕೆ ಭಕ್ತರ ಮನೆ ಮನ ತಲುಪಿ ಅವರು ಕೊಡುವ ಕಾಣಿಕೆಯನ್ನು ಸ್ವಿಕರಿಸುವ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡುವುದಾಗಿ ನಿರ್ಣಯ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಉದ್ಯಮಿ ಕೆ.ಆರ್.ಪ್ರಕಾಶ್ ಕೋಣಂದೂರು ಇವರನ್ನು ಈ ಧರ್ಮಜಾಗೃತಿ ಸಮಾರಂಭದ ಸಮಿತಿ ಅಧ್ಯಕ್ಷರನ್ನಾಗಿ ಮತ್ತು ಆಯಾ ಗ್ರಾಮಗಳ ತಲಾ ಇಬ್ಬರು ಸದಸ್ಯರನ್ನು ಅಯ್ಕೆ ಮೂಲಕ ಸಂಪರ್ಕಿಸಲು ಸಭೆ ನಿರ್ಣಯಿಸಿತು.

ಈ ಸಭೆಯಲ್ಲಿ ಕೋಣಂದೂರು ಕೆ.ಆರ್.ಪ್ರಕಾಶ, ಬೆಳಕೋಡು ಹಾಲಸ್ವಾಮಿಗೌಡರು, ಜೆ.ಎಸ್.ಚಂದ್ರಪ್ಪ,ತಳಗಿಬೈಲು ವೀರಪ್ಪ, ಕಾರ್ಗಲ್ ಮಹೇಶಗೌಡ ಸೇರಿದಂತೆ ಹಲವರು ಇದ್ದರು.

---------------------------------

ರಿಪ್ಪನ್‍ಪೇಟೆ ಸಮೀಪದ ಕೋಣಂದೂರು ಬೃಹನ್ಮಠದಲ್ಲಿ ಧರ್ಮಜಾಗೃತಿ ಸಮಾರಂಭದ ಪೂರ್ವ ಭಾವಿ ಸಭೆಯು ಕೋಣಂದೂರು ಬೃಹನ್ಮಠದ ಷ.ಬ್ರ,ಶ್ರೀಪತಿ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅಧ್ಯಕ್ಷತೆಯಲ್ಲಿ ಜರುಗಿತು.