ಸಾರಾಂಶ
ರಸ್ತೆ ಸುರಕ್ಷತೆ ಜನಜಾಗೃತಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಕನ್ನಡಪ್ರಭ ವಾರ್ತೆ ಕೊಪ್ಪಳ
ವಾಹನಗಳು ಮನೋರಂಜನೆಯ ಸಾಧನಗಳಲ್ಲ, ಪ್ರತಿಯೊಬ್ಬ ವಾಹನ ಚಾಲಕ ಮತ್ತು ಸವಾರರಲ್ಲಿ ರಸ್ತೆ ಸುರಕ್ಷತೆ ಅವಶ್ಯಕ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀಕಾಂತ ನಾಲವಾರ ಹೇಳಿದರು.ನಗರದ ಹೊಸಪೇಟೆ ರಸ್ತೆಯ ಆರ್.ಟಿ.ಓ. ಚಾಲನಾ ಪರೀಕ್ಷೆ ಆವರಣದಲ್ಲಿ ಜನವರಿ ತಿಂಗಳಲ್ಲಿ ಆಚರಿಸಲ್ಪಡುವ ರಸ್ತೆ ಸುರಕ್ಷತಾ ಜನಜಾಗೃತಿ ಉದ್ದೇಶಿಸಿ ಮಾತನಾಡಿದ ಅವರು, ರಸ್ತೆ ಸುರಕ್ಷತೆ ಬಗ್ಗೆ ಪ್ರತಿಯೊಬ್ಬ ವಾಹನ ಸವಾರರಲ್ಲಿ ಜಾಗೃತಿ ಅವಶ್ಯಕವಾಗಿ ಇರಬೇಕು. ಬೇಕಾಬಿಟ್ಟಿಯಾಗಿ ರಸ್ತೆಯಲ್ಲಿ ವಾಹನ ಚಾಲನೆ ಮಾಡಬಾರದು ಎಂದರು.
ಹಿರಿಯ ಮೋಟಾರು ವಾಹನ ನಿರೀಕ್ಷಕ ಪ್ರಭಾಕರ ಎನ್. ಮಾತನಾಡಿ, ಎಲ್ಲ ವಾಹನ ಚಾಲಕರು ರಸ್ತೆ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ವೇಗದ ಮಿತಿ ಹಾಗೂ ಚಾಲನೆಯ ಇತಿಮಿತಿಗಳನ್ನು ಅರ್ಥ ಮಾಡಿಕೊಳ್ಳಬೇಕು. ಕಾರು ಚಲಾಯಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ, ನಿಧಾನಿಸಿದರೆ ಅನೇಕ ಅಪಘಾತ ತಪ್ಪಿಸಲು ಸಾಧ್ಯ ಎಂದರು.ಹಿರಿಯ ಮೋಟಾರು ವಾಹನ ನಿರೀಕ್ಷಕ ಮಂಜುನಾಥ ಪ್ರಸಾದ ಮಾತನಾಡಿ, ನಾವು ತೆರಳಬೇಕಾದ ಸ್ಥಳಕ್ಕೆ ನಿಗದಿತ ಅವಧಿಯೊಳಗೆ ತಲುಪಲು ವೇಗವಾಗಿ ವಾಹನ ಚಾಲನೆ ಮಾಡಬಾರದು, ನಿಧಾನವಾಗಿ ಜಾಗರೂಕತೆಯಿಂದ ಚಾಲನೆ ಮಾಡಬೇಕು. ನಿರ್ದಿಷ್ಟ ಸಮಯಕ್ಕೆ ತಲುಪಲು ಸ್ವಲ್ಪ ಮುಂಚಿತವಾಗಿ ಹೊರಡುವ ಮನೋಭಾವ ರೂಢಿಸಿಕೊಳ್ಳಬೇಕು. ರಸ್ತೆ ಸುರಕ್ಷತೆ ಬಗ್ಗೆ ಯುವಜನರಲ್ಲಿ ಹೆಚ್ಚು ಜಾಗೃತಿ ಮೂಡಿಸುವುದು ಅಗತ್ಯವಾಗಿರುವ ಹಿನ್ನೆಲೆ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುವುದು ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಡಿ. ಡೊಳ್ಳಿನ ಮಾತನಾಡಿ, ರಸ್ತೆ ಸುರಕ್ಷತೆ ಜಾಗೃತಿಗಾಗಿ ಪ್ರಾದೇಶಿಕ ಸಾರಿಗೆ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ನೀವು ರಸ್ತೆಯ ಹಿರೋಗಳಾಗಿ ಎಂಬ ಘೋಷವಾಕ್ಯದಡಿ ಈ ಬಾರಿ ರಸ್ತೆ ಸುರಕ್ಷತೆ ಮಾಸಾಚರಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬರು ಸಾರಿಗೆ, ಸಂಚಾರ ನಿಯಮ ಅರಿತುಕೊಂಡು, ಅಳವಡಿಸಿಕೊಂಡು, ಕಟ್ಟು ನಿಟ್ಟಾಗಿ ಪಾಲಿಸಿದರೆ ರಸ್ತೆ ಸುರಕ್ಷತೆಯನ್ನು ಪರಿಣಾಮಕಾರಿಗೊಳಿಸಲು ಸಾಧ್ಯ ಎಂದರು.ಪ್ರಾದೇಶಿಕ ಸಾರಿಗೆ ಕಚೇರಿ ಅಧೀಕ್ಷಕ ನರಸಪ್ಪ, ವಾಹನ ಚಾಲಕರು, ಸವಾರರು, ಸಾರ್ವಜನಿಕರಿದ್ದರು.