ಹೊಳೆನರಸೀಪುರದ ರಸ್ತೆಗಳು ಗುಂಡಿಮಯ: ದುರಸ್ತಿಗೆ ಸಾರ್ವನಿಕರ ಆಗ್ರಹ

| Published : Jul 18 2024, 01:36 AM IST

ಹೊಳೆನರಸೀಪುರದ ರಸ್ತೆಗಳು ಗುಂಡಿಮಯ: ದುರಸ್ತಿಗೆ ಸಾರ್ವನಿಕರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರ ಪಟ್ಟಣದ ಪ್ರಮುಖ ವೃತ್ತಗಳು ಹಾಗೂ ಮುಖ್ಯ ರಸ್ತೆಗಳು ಗುಂಡಿ ಬಿದ್ದಿದ್ದು, ವಾಹನ ಚಾಲಕರು ಜೀವ ಭಯದಿಂದ ವಾಹನ ಚಲಾಯಿಸುತ್ತಿದ್ದರೇ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾಣ ಕುರುಡು ತೋರುತ್ತಿರುವುದು ವ್ಯವಸ್ಥೆಯ ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಳ್ಳದ ರಸ್ತೆಯಲ್ಲೇ ವಿದ್ಯಾರ್ಥಿಗಳ ಬಸ್‌ ಸಂಚಾರ । ಜೀವ ಭಯದಿಂದ ಸಂಚರಿಸುತ್ತಿರುವ ವಾಹನ ಸವಾರರು । ಅಧಿಕಾರಿಗಳ ನಿರ್ಲಕ್ಷ್ಯ

ಎಚ್.ವಿ.ರವಿಕುಮಾರ್

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಪ್ರಮುಖ ವೃತ್ತಗಳು ಹಾಗೂ ಮುಖ್ಯ ರಸ್ತೆಗಳು ಗುಂಡಿ ಬಿದ್ದಿದ್ದು, ವಾಹನ ಚಾಲಕರು ಜೀವ ಭಯದಿಂದ ವಾಹನ ಚಲಾಯಿಸುತ್ತಿರೇ, ವೃದ್ಧರು ಜತೆಗೆ ಮದ್ಯವಯಸ್ಕರಿಗೆ ಬೆನ್ನುಹುರಿ (ಸ್ಪೈನಲ್‌ಕಾರ್ಡ್) ಸಮಸ್ಯೆ ಉಂಟಾದರೆ ಎಂಬ ಚಿಂತೆ ಬೆಂಬಿಡದ ಕಾಡುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾಣಕುರುಡು ತೋರುತ್ತಿರುವುದು ವ್ಯವಸ್ಥೆಯ ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ರೈಲ್ವೆ ಫ್ಲೈಓವರ್ ಹಾಗೂ ಮೈಸೂರು ಕಡೆಯಿಂದ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲ್ದಾಣಕ್ಕೆ ಹಾಗೂ ಇತರೆ ವಾಹನಗಳು ಪುರಪ್ರವೇಶಕ್ಕೆ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಹಾಗೂ ಸ್ನಾತ್ತಕೋತ್ತರ ಕಾಲೇಜು ಮತ್ತು ಸರ್ಕಾರಿ ಮಹಿಳಾ ಗೃಹವಿಜ್ಞಾನ ಕಾಲೇಜಿಗೆ ವಿದ್ಯಾರ್ಥಿನಿಯರು ಕಾಲೇಜಿಗೆ ತೆರಳಲು ಈ ತಿರುವು ಅಗತ್ಯವಾಗಿದೆ. ಒಂದೈದು ಮೀಟರ್‌ನಷ್ಟು ಅಳತೆಯಲ್ಲಿ ರಸ್ತೆಯ ಗುಂಡಿಗಳು ನಾಗರಿಕರಿಗೆ ನರಕ ದರ್ಶನ ಮಾಡಿಸುತ್ತಿದ್ದು, ಚಾಲಕರು ವಾಹನ ಚಲಾವಣೆ ಮಾಡುವಾಗ ಒಮ್ಮೆ ವೇಗವಾಗಿ ಗುಂಡಿ ಇಳಿಸಿದರೆ ಬೆನ್ನುಹುರಿ (ಸ್ಪೈನಲ್‌ಕಾರ್ಡ್) ಸಮಸ್ಯೆ ಭೀತಿ ಉಂಟಾಗಿದೆ.

ಪುರಸಭೆ ವಾರ್ಡ್ ನಂಬರ್ ಒಂದರ ಸೂರನಹಳ್ಳಿಗೆ ಹಾಗೂ ಚನ್ನರಾಯಪಟ್ಟಣಕ್ಕೆ ತೆರಳುವ ರಸ್ತೆಯ ಹೇಮಾವತಿ ಸ್ಟೇಡಿಯಂ ಸಮೀಪದ ರಸ್ತೆಯೂ ಕೆಸರು ಗದ್ದೆಯಂತಾಗಿದ್ದು, ಈ ರಸ್ತೆಯಲ್ಲಿ ಪ್ರಿಯದರ್ಶಿನಿ ಪ್ರೌಢಶಾಲೆ ಹಾಗೂ ಕಾಲೇಜು ಮತ್ತು ಸ್ವರ್ಣ ಪ್ರೌಢಶಾಲೆ ಹಾಗೂ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳ ಗೋಳು ವರ್ಣಿಸಲಸಾಧ್ಯವಾಗಿದ್ದು, ಏಕಾಗ್ರೆತೆಯ ಕಲಿಕೆಗೆ ಜತೆಗೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ.

ಪಟ್ಟಣದ ಹಾಸನ ಮೈಸೂರು ಹೆದ್ದಾರಿ ಸಮೀಪದ ಆರ‍್ಯ ಈಡಿಗರ ಬೀದಿ ತಿರುವಿನ ಸಮೀಪ ಹೆದ್ದಾರಿಯು ಎರಡು ಮೀಟರ್ ಅಗಲದಷ್ಟು ಸಂಪೂರ್ಣ ಗುಂಡಿ ಬಿದ್ದಿದೆ. ಪಟ್ಟಣದ ಹೃದಯಭಾಗದ ಸುಭಾಷ್ ವೃತ್ತದ ಸಮೀಪ, ಮಹಾತ್ಮಗಾಂಧಿ ವೃತ್ತ ಸಮೀಪದ ಪುರಸಭೆ ಎಡಭಾಗದ ಕೋಟೆ ಪ್ರವೇಶದ್ವಾರದಲ್ಲಿ ರಸ್ತೆ ಗುಂಡಿ ಬಿದ್ದಿದೆ. ಬಯಲು ರಂಗಮಂದಿರ ಹತ್ತಿರದ ಬಾಬು ಜಗಜೀವನ್ ರಾಮ್ ವೃತ್ತದ ಸಮೀಪ ರಸ್ತೆ ಗುಂಡಿ ಬಿದ್ದಿದೆ. ಇದ್ದೆಲ್ಲಾ ಹೆದ್ದಾರಿ ಹಾಗೂ ಹೆದ್ದಾರಿ ಪಕ್ಕದ ರಸ್ತೆಗುಂಡಿಗಳ ಸಮಸ್ಯೆಯಾದರೇ, ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳ ಕಾಲುವೆಕೇರಿ ಬೀದಿ, ಕಾಳಿಕಾಂಬ ದೇವಸ್ಥಾನ ರಸ್ತೆ, ಚಿಟ್ಟನಹಳ್ಳಿ ರಸ್ತೆ, ದಾಸಗೌಡರ ಬೀದಿ ಹಾಗೂ ಬಡಾವಣೆಗಳಲ್ಲಿ ರಸ್ತೆ ಹಾಗೂ ಚರಂಡಿಗಳಲ್ಲಿ ಸ್ವಚ್ಛತೆ ಇಲ್ಲದೆ ಸಾಂಕ್ರಮಿಕ ರೋಗದ ಭೀತಿ ಎದುರಾಗಿದೆ.

ರಸ್ತೆ ಕಾಮಗಾರಿ, ರಸ್ತೆ ರಿಪೇರಿ, ಚರಂಡಿ ರಿಪೇರಿಗಾಗಿ ಪದೇ ಪದೇ ಹಣ ಖರ್ಚು ಮಾಡುತ್ತಿರುವುದು ಏಕೆ? ಇದರಲ್ಲಿ ಪರ್ಸಂಟೇಜ್ ವ್ಯವಹಾರ ನಡೆಯುತ್ತಿದೆಯಾ? ವಾರ್ಡ್‌ಗಳ ಸದಸ್ಯರು ಏನು ಮಾಡುತ್ತಿದ್ದಾರೆ? ಕೇಳುವವರೇ ಇಲ್ಲದಂತಾಗಿದೆ ಎಂದು ದೂರಿರುವ ನಾಗರಿಕರು, ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿರಲು ಕಾರಣವೇನು? ಹೊಸದಾಗಿ ಮಾಡಿದ ರಸ್ತೆಯನ್ನು ಜಲಜೀವನ್ ಮಿಷನ್ ಕುಡಿಯುವ ನೀರಿನ ಪೈಪ್ ಅಳವಡಿಸಲು ಮತ್ತೆ ಬಗೆಯುವುದು, ಮುಚ್ಚುವುದು ಮತ್ತು ಮತ್ತೊಮ್ಮೆ ಕೇಬಲ್ ಅಳವಡಿಸಲು ಬಗೆಯುವುದು ಮತ್ತೆ ಮುಚ್ಚುವುದೇ ಆಗಿದೆ ಎಂದು ಕಿಡಿಕಾರಿದ್ದಾರೆ.

ಇತರೆ ಜಿಲ್ಲೆಗಳಿಂದ ಪಟ್ಟಣಕ್ಕೆ ಆಗಮಿಸುವ ಸಾರ್ವಜನಿಕರು ಇದು ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ, ಪ್ರಮುಖ ಖಾತೆ ನಿರ್ವಹಿಸಿದ್ದ ಸಚಿವರ ಪಟ್ಟಣವೇ ಅಥವಾ ಯಾವುದೂ ಕುಗ್ರಾಮಕ್ಕೆ ಬಂದಿದ್ದೇವೆಯೋ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.