ಸಾರಾಂಶ
ಅಧಿಕಾರಿಗಳೇ ರೈತರಿಗೆ ಪ್ರತ್ಯೇಕ ಕಣದ ವ್ಯವಸ್ಥೆ ಮಾಡಿ । ವಾಹನ ಸವಾರರ ಸಂಕಷ್ಟ ನಿವಾರಿಸಿ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಜಿಲ್ಲೆಯ ಗ್ರಾಮೀಣ ಪ್ರದೇಶದ ಬಹು ಭಾಗಗಳ ರಸ್ತೆಗಳು ಇದೀಗ ಏಕದಳ ಮತ್ತು ದ್ವಿದಳ ಧಾನ್ಯಗಳ ಒಕ್ಕಣೆಯ ಕಣಗಳಾಗಿ ಮಾರ್ಪಟ್ಟು ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ.
ರಸ್ತೆಗಳಲ್ಲಿಯೇ ರಾಗಿ, ಜೋಳ ಅಲಸಂದೆ,ಹುರಳಿ ಸೇರಿ ವಿವಿಧ ಧಾನ್ಯಗಳ ಹುಲ್ಲು ಮತ್ತು ಗೊಡಗಳನ್ನು ಹರಡಿ ಸಾರ್ವಜನಿಕರಿಗೆ ಇನ್ನಿಲ್ಲದ ಕಿರಿಕಿರಿಯುಂಟು ಮಾಡಲಾಗುತ್ತಿದೆ.ತಾಲೂಕು ಮತ್ತು ಜಿಲ್ಲೆಯಾದ್ಯಂತ ವಿವಿಧ ಕಡೆಗಳಲ್ಲಿ ಹಾದು ಹೋಗಿರುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿಯೇ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಬಳಕೆ ಮಾಡಿಕೊಳ್ಳುತ್ತಿರುವ ಕಾರಣ, ಈ ರಸ್ತೆಗಳು ಅವಘಡಗಳಿಗೆ ಅಹ್ವಾನ ನೀಡಿದಂತಾಗಿವೆ.
ರೈತರು ಬೆಳೆಗಳನ್ನು ಸ್ವಚ್ಛಗೊಳಿಸಲು ಸ್ಥಳೀಯ ರಸ್ತೆಗಳನ್ನು ಒಕ್ಕಣೆ ಕಣಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಪಂಯಿಂದ ನರೇಗಾ ಯೋಜನೆಯಡಿ ನಿರ್ಮಾಣವಾಗಿರುವ ಒಕ್ಕಣೆ ಕಣಗಳು ಕಣ್ಮರೆಯಾಗಿದ್ದು, ಕಣಗಳಿಲ್ಲದೆ ಒಕ್ಕಣೆ ಮಾಡಿಕೊಳ್ಳುವುದು ರೈತರಿಗೆ ತೊಂದರೆಯಾಗಿ ಪರಿಣಮಿಸಿದೆ. ಇದರಿಂದಾಗಿ ರಸ್ತೆಗಳನ್ನೇ ಒಕ್ಕಣೆ ಮಾಡುವ ಕಣಗಳನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ. ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳು, ಕಾರು, ಲಾರಿ, ಬಸ್ ಸೇರಿ ಇತ್ಯಾದಿ ವಾಹನಗಳಿಗೆ ಕಷ್ಟ ಎದುರಾಗಿದೆ. ವೇಗವಾಗಿ ಬರುವ ವಾಹನಗಳು ಅಪಘಾತಕ್ಕೀಡಾಗುತ್ತಿವೆ. ಧಾನ್ಯದ ಜತೆಗೆ ಮೇವು ಸಹ ಅನಾಹುತಕ್ಕೆ ಕಾರಣವಾಗುತ್ತಿದೆ. ರಸ್ತೆಗಳಲ್ಲಿಯೇ ಹರಡಿರುವ ಹುಲ್ಲಿನ ಮೇಲೆ ಮುಂದೆ ಸಾಗುವಾಗ ದ್ವಿಚಕ್ರ ವಾಹನ ಸವಾರರು ಜಾರಿ ನೆಲಕ್ಕೆ ಬಿದ್ದ ನಿದರ್ಶನಗಳು ಸಾಕಷ್ಟಿವೆ.
ಇನ್ನು ಗ್ರಾಮೀಣ ಪ್ರದೇಶದ ಬಹುತೇಕ ಕಡೆಗಳಲ್ಲಿ ಸರ್ಕಾರದಿಂದ ನಿರ್ಮಾಣವಾಗಿರುವ ಕಣಗಳು ಅವೈಜ್ಞಾನಿಕವಾಗಿವೆ. ಕಣ ಬಳಕೆಗೆ ಯೋಗ್ಯವಾಗಿಲ್ಲ, ಹೀಗಾಗಿ ರೈತರು ರಸ್ತೆಗಳಲ್ಲಿಯೇ ರಾಗಿಮೆದೆಯನ್ನು ಹರಡಿದ್ದಾರೆ.ಧಾನ್ಯಗಳ ರಕ್ಷಣೆಗಾಗಿ ರೈತರು ರಾತ್ರಿ ಕಾವಲು ಕಾಯುತ್ತ ಇಲ್ಲಿಯೇ ಮಲಗುವರು. ರಸ್ತೆಗಳು ಕಣಗಳಾಗಿ ರೈತರಿಗೆ ಉಪಯೋಗವಾದರೆ ಮತ್ತೊಂದೆಡೆ ವಾಹನ ಸವಾರರಿಗೆ ಸಂಚಕಾರ ತರುತ್ತಿವೆ.
ಇನ್ನೂ ಕಟಾವು ಮಾಡಿದ ಬೆಳೆಗಳನ್ನು ಒಣಗಿಸಿ, ಸ್ವಚ್ಛ ಮಾಡಲು ಗ್ರಾಮದಲ್ಲಿನ ಕೆಲವು ಸರ್ಕಾರಿ ಪ್ರದೇಶಗಳ ಜತೆಗೆ ಶಾಲಾ ಆವರಣಗಳು, ದೇವಸ್ಥಾನದ ಆವರಣ ಮತ್ತು ಚಾವಣಿಗಳನ್ನೂ ಬಳಸುತ್ತಿದ್ದಾರೆ. ವೈಜ್ಞಾನಿಕ ಒಕ್ಕಣೆ ಕೇಂದ್ರಗಳಿಲ್ಲದ ಹಿನ್ನೆಲೆ ಗ್ರಾಮೀಣ ಪ್ರದೇಶದ ಬಹುತೇಕ ರೈತರು ರಸ್ತೆಗಳನ್ನೇ ಒಕ್ಕಣೆ ಕಣಗಳನ್ನಾಗಿ ಮಾಡಿಕೊಂಡು ಇಂತಹ ದುಸ್ಥಿತಿ ಎದುರಾಗಿದೆ. ಈ ಬಗ್ಗೆ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.ನಾಗರಿಕರ ಮತ್ತು ವಾಹನ ಸವಾರರ ಸುರಕ್ಷತೆಗೆ ಬೇಕಾದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು, ಕೂಡಲೇ ಕ್ರಮವಹಿಸಿ ಪ್ರತ್ಯೇಕ ಒಕ್ಕಣೆ ಕಣಗಳನ್ನು ತಯಾರಿಸಿ ರೈತರಿಗೆ ಸೂಚನೆಗಳನ್ನು ನೀಡಿದ್ದಲ್ಲಿ ರಸ್ತೆಗಳಲ್ಲಿ ಸಾಗುವ ವಾಹನ ಸವಾರರಿಗೆ ಸಂಕಷ್ಟ ತಪ್ಪಲಿದೆ.
ದಶಕದ ಹಿಂದೆ ಬೀಚಗಾನಹಳ್ಳಿ ಬಳಿ ಜೋಳದ ಒಕ್ಕಣೆ ಮಾಡುವಾಗ ಕ್ಯಾಂಟರ್ ಹರಿದು ನಾಲ್ವರು ರೈತರು ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.ಇನ್ನು ಮುಂದಾದರೂ ಅಧಿಕಾರಿಗಳು ರಸ್ತೆಗಳನ್ನೇ ಕಣಗಳನ್ನಾಗಿ ಮಾರ್ಪಡಿಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದು ಮುಂದಾಗಬಹುದಾದ ಅಪಘಾತಗಳ ತಪ್ಪಿಸುವಲ್ಲಿ ಕ್ರಮಕೈಗೊಳ್ಳುವರೇ ಕಾದುನೋಡಬೇಕು.
----------ಸಿಕೆಬಿ-1 ರಸ್ತೆಗಳೇ ಕಣಗಳಾಗಿ ಮಾರ್ಪಟ್ಟ ಗಂಗರೆ ಕಾಲುವೆ - ದಿಬ್ಬೂರಹಳ್ಳಿ ರಸ್ತೆ