ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಭಾರತ್ ಆಸ್ಪತ್ರೆ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಅಂಕೊಲಾಜಿಸ್ಟ್ ಮತ್ತು ರೋಬೊಟಿಕ್ ಸರ್ಜರಿ ಮೈಸೂರಿನಲ್ಲಿ ಸುಧಾರಿತ ಡಾ.ವಿನ್ಸಿ ರೋಬೋಟಿಕ್ ಸರ್ಜಿಕಲ್ ಸಿಸ್ಟಮ್‌ನ್ನು ಪರಿಚಯಿಸಿದೆ ಎಂದು ಅಂಕೊಲಾಜಿಸ್ಟ್ ಮತ್ತು ರೊಬೊಟಿಕ್ ಸರ್ಜನ್ ಡಾ.ಎಂ.ವಿಜಯಕುಮಾರ್ ಹೇಳಿದರು.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಡಾ.ವಿನ್ಸಿ ರೊಬೊಟಿಕ್ ಸರ್ಜಿಕಲ್ ಸಿಸ್ಟಮ್ ಪರಿಚಯಿಸಿರುವುದು ರೊಬೊಟಿಕ್ ಸರ್ಜರಿಯಲ್ಲಿ ಕ್ರಾಂತಿಕಾರಿಕ ಮೈಲಿಗಲ್ಲಾಗಿದೆ. ಅಲ್ಲದೇ, 20 ರೊಬೊಟಿಕ್ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದರು.
ಇದು ಮೈಸೂರಿನಲ್ಲಿ ಸುಧಾರಿತ ವೈದ್ಯಕೀಯ ತಂತ್ರಜ್ಞಾನದ ಬೆಳವಣಿಗೆಯಾಗಿದೆ. ಈಗಾಗಲೇ ಅಂಕೋಲಾಜಿ, ಸ್ತ್ರೀರೋಗಶಾಸ್ತ್ರ, ಮೂತ್ರ ಶಾಸ್ತ್ರ ಮತ್ತು ಸಾಮಾನ್ಯ ಶಸ್ತ್ರಚಿಕಿತ್ಸೆಗೆ ಇದನ್ನು ಬಳಕೆ ಮಾಡಿಕೊಳ್ಳಲಾಗಿದೆ. ರೋಗಿಯ ಚೇತರಿಕೆ ಸಮಯ ಮತ್ತು ಫಲಿತಾಂಶವೂ ಗಮನಾರ್ಹವಾಗಿ ಸುಧಾರಿಸಿದೆ ಎಂದರು.ಈ ಅತ್ಯಾಧುನಿಕ ತಂತ್ರಜ್ಞಾನವು ಈಗಾಗಲೇ ಕ್ಯಾನ್ಸರ್ ರೋಗಿಗಳ ಜೀವನವನ್ನು ಪರಿವರ್ತಿಸುತ್ತಿದೆ. ಅಲ್ಲದೇ, ರೋಟೋಟಿಕ್ ಶಸ್ತ್ರಚಿಕಿತ್ಸೆಯು ನಿಖರತೆಯನ್ನು ಖಚಿತಪಡಿಸುತ್ತದೆ. ನೋವು, ರಕ್ತದ ನಷ್ಟ ಮತ್ತು ಚೇತರಿಕೆ ಸಮಯವನ್ನು ಕಡಿಮೆ ಮಾಡುತ್ತದೆ. ರೋಗಿಗಳು ತಮ್ಮ ದೈನಂದಿನ ಜೀವನಕ್ಕೆ ಬೇಗನೆ ಮರಳುವುದಕ್ಕೆ ಅನುವು ಮಾಡಿಕೊಡುತ್ತದೆ ಎಂದು ನುಡಿದರು.
ಮಂಡ್ಯ, ಚಾಮರಾಜನಗರ, ಮಡಿಕೇರಿ ಮತ್ತು ಹಾಸನ ಸೇರಿದಂತೆ ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರೋಗ್ಯ ರಕ್ಷಣೆಯಲ್ಲಿ ಇದು ಕ್ರಾಂತಿಕಾರಕ ಹೆಜ್ಜೆಯಾಗಿದೆ. ಮೈಸೂರಿನಲ್ಲೇ ಇದು ವಿಶ್ವ ದರ್ಜೆಯ ಆರೈಕೆಯಾಗಿದೆ ಎಂದು ಮಾಹಿತಿ ನೀಡಿದರು.ಡಾ.ವಿನ್ಸಿ ವ್ಯವಸ್ಥೆಯಲ್ಲಿ ನಿಖರತೆ ಇದೆ. ಆಕ್ರಮಣಕಾರಿ ಕಡಿಮೆ ಇದೆ. ಶಸ್ತ್ರಚಿಕಿತ್ಸೆಯು ಕನಿಷ್ಠ ನೋವು, ತ್ವರಿತ ಚೇತರಿಕೆಯನ್ನು ನೀಡುತ್ತದೆ. ಶಸ್ತ್ರಚಿಕಿತ್ಸೆ ನಡೆದ ಕೇವಲ ಮೂರು ದಿನಗಳ ನಂತರ ಮನೆಗೆ ಮರಳಬಹುದು. ಕುಟುಂಬದವರೊಂದಿಗೆ ಕಾಲ ಕಳೆಯಬಹುದು. ದೈನಂದಿನ ಚಟುವಟಿಕೆಗಳನ್ನು ಸುಧಾರಿಸಿಕೊಳ್ಳಬಹುದು ಎಂದರು.
ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವ ಕುರಿತು ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಜೊತೆಗೆ ಜನರೂ ಕೂಡ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. 40 ವರ್ಷ ವಯಸ್ಸಾದ ಬಳಿಕ ಮಹಿಳೆಯರು ಮತ್ತು ಪುರುಷರು 800 ರು.ನಿಂದ 1200 ರು.ವರೆಗಿನ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಕ್ಯಾನ್ಸರ್‌ನ್ನು ಪತ್ತೆ ಹಚ್ಚಬಹುದು. ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡುವುದಕ್ಕೆ ಅನುಕೂಲವಾಗಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಭಾರತ್ ಆಸ್ಪತ್ರೆ ಮತ್ತು ಅಂಕೋಲಾಜಿ ಸಂಸ್ಥೆ ಸಿಇಒ ಗೌತಮ್ ಧಮೇರ್ಲಾ, ಮಾರ್ಕೆಟಿಂಗ್ ವಿಭಾಗದ ಸಹಾಯಕ ವ್ಯವಸ್ಥಾಪಕ ಸುನಿಲ್ ಉಪಸ್ಥಿತರಿದ್ದರು.