ಮುಂದಿನ ದಶಕಗಳನ್ನು ರೋಬೋಟ್‌, ಎಐ ಆಳುತ್ತವೆ: ಡಾ। ಮಂಜುನಾಥ್‌

| Published : May 11 2024, 01:35 AM IST / Updated: May 11 2024, 05:53 AM IST

Dr. CN Manjunath
ಮುಂದಿನ ದಶಕಗಳನ್ನು ರೋಬೋಟ್‌, ಎಐ ಆಳುತ್ತವೆ: ಡಾ। ಮಂಜುನಾಥ್‌
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಸ್ಥ ಟೆಕ್ನಾಲಜೀಸ್‌ ಕಂಪನಿಯ ‘ಸ್ಮಾರ್ಟ್ ಬಿಎಂಐ ಮಷೀನ್’ ಸೇರಿದಂತೆ ವಿವಿಧ ವೈದ್ಯಕೀಯ ಉಪಕರಣಗಳನ್ನು ಜಯದೇವ ಆಸ್ಪತ್ರೆಯ ನಿವೃತ್ತ ಮುಖ್ಯಸ್ಥ ಡಾ। ಸಿ.ಎನ್. ಮಂಜುನಾಥ ಬಿಡುಗಡೆ ಮಾಡಿದರು.

 ಬೆಂಗಳೂರು :  ಮುಂದಿನ ಮೂರ್ನಾಲ್ಕು ದಶಕಗಳಲ್ಲಿ ವೈದ್ಯಕೀಯ ಕ್ಷೇತ್ರ ಸೇರಿದಂತೆ ಅನೇಕ ವಲಯಗಳನ್ನು ಕೃತಕ ಬುದ್ಧಿಮತ್ತೆ(ಎಐ), ರೊಬೋಟಿಕ್ಸ್ ಮತ್ತು ಮಷೀನ್ ಲರ್ನಿಂಗ್ ಆಳುತ್ತವೆ ಎಂದು ಜಯದೇವ ಆಸ್ಪತ್ರೆಯ ನಿವೃತ್ತ ಮುಖ್ಯಸ್ಥ ಡಾ.ಸಿ.ಎನ್. ಮಂಜುನಾಥ ಹೇಳಿದರು.

ಶುಕ್ರವಾರ ನಗರದ ಭಾರತೀಯ ವಿದ್ಯಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಸ್ಥ ಟೆಕ್ನಾಲಜೀಸ್‌ ಕಂಪನಿಯ ‘ಸ್ಮಾರ್ಟ್ ಬಿಎಂಐ ಮಷೀನ್’ ಸೇರಿದಂತೆ ವಿವಿಧ ವೈದ್ಯಕೀಯ ಉಪಕರಣಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಆರೋಗ್ಯ, ಕೃಷಿ, ಇ ಕಾಮರ್ಸ್, ರೋಬೋಟಿಕ್ಸ್ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಎಐ ಭಾರಿ ಕ್ರಾಂತಿ ಮಾಡಲಿವೆ. ಆರೋಗ್ಯ ಕ್ಷೇತ್ರದಲ್ಲಿ ಕಾರ್ಡಿಯಾಲಜಿ ಮತ್ತು ರೇಡಿಯಾಲಜಿಯಲ್ಲಿ ಬಹುಮುಖ್ಯ ಪಾತ್ರ ವಹಿಸಲಿವೆ ಎಂದರು.

ನಮ್ಮ ದೇಶದಲ್ಲಿ 14 ಕೋಟಿ ಜನರಿಗೆ ಡಯಾಬಿಟೀಸ್ ಹಾಗೂ ಇನ್ನೂ 14 ಕೋಟಿ ಪ್ರಿ ಡಯಾಬಿಟೀಸ್ ಇದೆ. ಈ ಆರೋಗ್ಯ ಸಮಸ್ಯೆಯು ಎಲ್ಲ ಕಾಯಿಲೆಗಳಿಗೆ ಮೂಲವಾಗಿದೆ. ಬೇಗ ಪತ್ತೆ ಮಾಡಿ, ಆರೋಗ್ಯ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಡಯಾಬಿಟೀಸ್, ರಕ್ತದೊತ್ತಡ, ಕಿಡ್ನಿ, ಹೃದಯ, ಕ್ಯಾನ್ಸರ್ ರೋಗಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಭಾರತದ ಜನಸಂಖ್ಯೆ ಹೆಚ್ಚು ಇರುವ ಕಾರಣ ತ್ವರಿತವಾಗಿ, ನಿಖರವಾಗಿ ಆರೋಗ್ಯ ತಪಾಸಣೆ ಮಾಡಿ ವರದಿ ನೀಡುವ ಎಐ ಆಧಾರಿತ ವೈದ್ಯಕೀಯ ಉಪಕರಣಗಳು ಅತ್ಯಂತ ಉಪಯುಕ್ತವಾಗುತ್ತವೆ ಎಂದು ಅವರು ಹೇಳಿದರು.

ಯಂತ್ರ, ಉಪಕರಣಗಳಿಂದ ಸಮಯ ಉಳಿತಾಯವಾಗುತ್ತದೆ. ಅಗತ್ಯ ವೈದ್ಯಕೀಯ ಸಿಬ್ಬಂದಿ, ಆಸ್ಪತ್ರೆಗಳು ಇಲ್ಲದಿರುವ ಪ್ರದೇಶಗಳಲ್ಲಿ ಹಾಗೂ ಹೆಚ್ಚು ಜನ ವಾಸಿಸುವ ವಸತಿ ಸಮುಚ್ಛಯಗಳಲ್ಲಿ ಎಐ ಆಧಾರಿತ ಆರೋಗ್ಯ ತಪಾಸಣೆ ವೈದ್ಯಕೀಯ ಉತ್ಪನ್ನಗಳು ಉಪಯುಕ್ತವಾಗುತ್ತವೆ. ಟೆಸ್ಟಿಂಗ್ ಮಾಡಿಸಿಕೊಂಡ ಬಳಿಕ ಟೆಲಿ ಮೆಡಿಸಿನ್ ಮೂಲಕ ಅಗತ್ಯ ವೈದ್ಯಕೀಯ ಸಲಹೆ ಪಡೆದುಕೊಳ್ಳಬಹುದು, ಆದರೆ, ಉಪಕರಣಗಳು ನಿಖರವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಡಾ. ಮಂಜುನಾಥ್ ಹೇಳಿದರು.

ಬ್ರಿಗೇಡಿಯರ್ ಸಂಜೀವ್ ಚೋಪ್ರಾ, ಆರ್‌ಜಿಯುಎಚ್‌ಎಸ್‌ ವಿಶ್ರಾಂತ ಉಪಕುಲಪತಿ ಡಾ. ಸಚ್ಚಿದಾನಂದ, ಲೆಪ್ರೋಸ್ಕೋಪಿಕ್ ಸರ್ಜನ್ ಡಾ. ರಮೇಶ್ ಮಾಕಂ, ಮನೋರೋಗ ತಜ್ಞೆ ಡಾ. ಅರ್ಚನಾ ಜಯದೇವ್ ಉಪಸ್ಥಿತರಿದ್ದರು.