ರೋಹಿಣಿ ಮಳೆ ಆರ್ಭಟ, ಬಿತ್ತನೆಗೆ ಹಿನ್ನಡೆ

| Published : Jun 06 2024, 12:30 AM IST

ರೋಹಿಣಿ ಮಳೆ ಆರ್ಭಟ, ಬಿತ್ತನೆಗೆ ಹಿನ್ನಡೆ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರ ರಾತ್ರಿ ೧೨ ಗಂಟೆಯಾದರೂ ಹಳ್ಳದ ನೀರು ರಸ್ತೆ ಮೇಲೆ ರಭಸವಾಗಿ ಹರಿಯುತ್ತಿತ್ತು. ವಾಹನ ಸಂಚಾರ ಸ್ಥಗಿತಗೊಂಡಿತ್ತು

ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ

ತಾಲೂಕಿನಾದ್ಯಂತ ರೋಹಿಣಿ ಮಳೆ ಆರ್ಭಟಿಸುತ್ತಿದೆ. ಎರಡು-ಮೂರು ದಿನಗಳಿಂದ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ಸೋಮವಾರ ಸಂಜೆಯಿಂದ ಸತತವಾಗಿ ಬಿರುಗಾಳಿ, ಗುಡುಗು, ಸಿಡಿಲಿನ ಆರ್ಭಟದೊಂದಿಗೆ ರಭಸದ ಮಳೆ ಸುರಿಯುತ್ತಿದೆ. ಹೊಲದಲ್ಲಿ ಕೆರೆಯಂತೆ ನೀರು ನಿಂತು ಬಿತ್ತನೆಗೆ ಹಿನ್ನಡೆಯಾಗುತ್ತಿದೆ ಎಂದು ರೈತರು ಚಿಂತಿಸತೊಡಗಿದ್ದಾರೆ.

ಸೋಮವಾರ ಸಂಜೆ ಒಮ್ಮೆಲೆ ಧಾರಾಕಾರ ಮಳೆ ಸುರಿಯಲಾರಂಭಿಸಿದ್ದರಿಂದ ಸೊರಟೂರ, ಹಂಗನಕಟ್ಟಿ ಹಳ್ಳಗಳು ತುಂಬಿ ಹರಿಯುತ್ತಿವೆ. ಸೋಮವಾರ ರಾತ್ರಿ ೧೨ ಗಂಟೆಯಾದರೂ ಹಳ್ಳದ ನೀರು ರಸ್ತೆ ಮೇಲೆ ರಭಸವಾಗಿ ಹರಿಯುತ್ತಿತ್ತು. ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಕೆಲವು ರೈತರು ಭಾನುವಾರ ಮತ್ತು ಸೋಮವಾರ ಹೆಸರು ಬಿತ್ತನೆ ಮಾಡಿದ್ದಾರೆ. ರಭಸದ ಮಳೆ ಸುರಿದಿದ್ದರಿಂದ ಮೊಳಕೆಯೊಡೆಯುವ ಮೊದಲೆ ಹೊಲದಲ್ಲಿ ನೀರು ನಿಂತು ಬಿತ್ತನೆ ಬೀಜ, ಗೊಬ್ಬರ ತೇಲಿಕೊಂಡು ಹೋಗಿದ್ದು, ರೈತರು ಕಂಗಾಲಾಗಿದ್ದಾರೆ. ಕೆಲವು ರೈತರ ಹೊಲದಲ್ಲಿಯ ಬದುವು ಒಡೆದು ಫಲವತ್ತಾದ ಹೊಲದ ಮಣ್ಣು ಹರಿದು ಹೋಗಿದ್ದು, ಬಿತ್ತನೆಗೆ ಬಾರದಂತಾಗಿದೆ.

ಒಂದು ವಾರದಿಂದ ಮೋಡ ಕವಿದ ವಾತಾವರಣ ಹಾಗೂ ಆಗಾಗ್ಗೆ ಜಿಟಿಜಿಟಿ ಮಳೆ ಸುರಿಯುತ್ತಿತ್ತು.

ಶಿರಹಟ್ಟಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಂಗವಾರ ಬೆಳಗ್ಗೆಯಿಂದ ಬಿಟ್ಟುಬಿಟ್ಟದೆ ಮಳೆ ಸುರಿಯುತ್ತಿದೆ. ತಂಗಾಳಿ ಹಾಗೂ ಮಳೆಯಿಂದ ರೈತರು, ಕೂಲಿಕಾರರು ಕೆಲಸಕ್ಕೆ ಹೋಗಲು ಸಾಧ್ಯವಾಗಿಲ್ಲ.

ಚರಂಡಿಗಳು ತುಂಬಿ ರಸ್ತೆ ಮೇಲೆಲ್ಲ ನೀರು ಹರಿದಿದ್ದು, ರೈತರ ಹೊಲಗಳಲ್ಲಿ ದೊಡ್ಡ ದೊಡ್ಡ ನೀರಿನ ಹೊಂಡಗಳೇ ನಿರ್ಮಾಣವಾಗಿವೆ. ತೇವಾಂಶ ಹೆಚ್ಚಾಗಿ ಹೊಲದಲ್ಲಿ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿವೆ.

ಮಳೆ ಒಂದೆಡೆ ರೈತರಿಗೆ ಸಂತಸ ಸಂದಿದ್ದರೆ ಇನ್ನೊಂದೆಡೆ ಆತಂಕ ನಿರ್ಮಾಣ ಮಾಡಿದೆ. ತೀವ್ರ ಬರಗಾಲದಿಂದ ತತ್ತರಿಸಿದ್ದ ರೈತರು ಕಳೆದ ವರ್ಷ ಮಳೆ ಕೊರತೆ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟ ಎದುರಿಸಿದ್ದರು. ಅನೇಕ ರೈತರು ಕೃಷಿ ಬಿಟ್ಟು ದೂರದ ಊರುಗಳಿಗೆ ಗುಳೆ ಹೋಗಿದ್ದರು. ಮಳೆಗಾಗಿ ಕಾದು ಕಾದು ನಿರಾಶರಾಗಿದ್ದರು, ದೇವರ ಮೊರೆ ಹೋಗಿದ್ದರು. ಅಂತಹ ರೈತರಿಗೆ ಈಗ ಸಮಾಧಾನವಾಗಿದೆ.

ಮಳೆ ರಭಸಕ್ಕೆ ಕೆಲವೆಡೆ ರೈತ ಸಂಪರ್ಕ ರಸ್ತೆಗಳು ಸಂಪೂರ್ಣ ಕೊಚ್ಚಿಹೋಗಿದ್ದು, ಹೊಲದ ಒಡ್ಡುಗಳು ಕಿತ್ತು ಹೋಗಿವೆ.

ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಖರೀದಿಸಿದ ಹೆಸರು, ಗೋವಿನ ಜೋಳ, ಶೇಂಗಾ, ಸೂರ್ಯಕಾಂತಿ ಬೀಜಗಳನ್ನು ಮನೆಯಲ್ಲಿ ಹಾಗೆ ಇಟ್ಟಿದ್ದೇವೆ. ಮಳೆ ಪ್ರಮಾಣ ಹೆಚ್ಚಾಗಿ ಭೂಮಿಯಲ್ಲಿ ಹೆಚ್ಚಿನ ತೇವಾಂಶ ಕಾಣಿಸಿಕೊಂಡಿದೆ. ಹೊಲದಲ್ಲಿ ಹೆಜ್ಜೆ ಇಡಲಾರದಷ್ಟು ಮಳೆ ಸುರಿಯುತ್ತಿದೆ. ಸದ್ಯ ಒಂದು ವಾರಗಳ ವರೆಗೆ ಮಳೆ ಬಿಡುವು ಕೊಟ್ಟರೆ ಬಿತ್ತನೆ ಕಾರ್ಯ ಮಾಡಲಿದ್ದೇವೆ ಎಂದು ಗ್ರಾಮದ ರೈತರಾದ ತೋಟಪ್ಪ ಸೊನ್ನದ, ತಿಪ್ಪಣ್ಣ ಕೊಂಚಿಗೇರಿ ಕಡಕೋಳ ತಿಳಿಸಿದ್ದಾರೆ.