ಸಾರಾಂಶ
ಪರಿಸರ ರಕ್ಷಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿ ದಿನ ನಾವು ಪರಿಸರ ಕಾಳಜಿ ಗಮನದಲ್ಲಿಟ್ಟಿಕೊಂಡು ಸಮುದಾಯದಲ್ಲಿ ಮನೆಗೊಂದು ಗಿಡ ನೆಡುವಂತೆ ಜಾಗೃತಿ ಮೂಡಿಸಿ, ಪ್ರಕೃತಿಯೊಂದಿಗೆ ಸಾಮರಸ್ಯದ ಬದುಕು ಕಟ್ಟಿಕೊಳ್ಳಬೇಕಿದೆ.
ಕನ್ನಡಪ್ರಭ ವಾರ್ತೆ ರಾಮನಗರ
ವಿಶ್ವ ಪರಿಸರ ದಿನಾಚರಣೆಯು ಹಸಿರಿನ ಮಹತ್ವವನ್ನು ಜಗತ್ತಿನಲ್ಲೆಡೆ ಸಾರುವ ದಿನವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್ ಹೇಳಿದರು.ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ರಾಮನಗರ ಟೌನಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ), ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯ ಕಾರ್ಯಕ್ರಮದಡಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರ ರಕ್ಷಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿ ದಿನ ನಾವು ಪರಿಸರ ಕಾಳಜಿ ಗಮನದಲ್ಲಿಟ್ಟಿಕೊಂಡು ಸಮುದಾಯದಲ್ಲಿ ಮನೆಗೊಂದು ಗಿಡ ನೆಡುವಂತೆ ಜಾಗೃತಿ ಮೂಡಿಸಿ, ಪ್ರಕೃತಿಯೊಂದಿಗೆ ಸಾಮರಸ್ಯದ ಬದುಕು ಕಟ್ಟಿಕೊಳ್ಳಬೇಕಿದೆ ಎಂದು ತಿಳಿಸಿದರು.ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಶಶಿಧರ್ ಮಾತನಾಡಿ, ವರ್ಷದಿಂದ ವರ್ಷಕ್ಕೆ ತೀವ್ರವಾಗಿ ಏರುತ್ತಿರುವ ತಾಪಮಾನ, ನಿರಂತರ ವಾಯುಮಾಲಿನ್ಯ, ಜಲಮಾಲಿನ್ಯ, ಭೂ ಮಾಲಿನ್ಯವನ್ನು ಪರಿಸರ ಎದುರಿಸುತ್ತಿದೆ ಎಂದು ಹೇಳಿದರು.
ಇಂದಿನ ಮಕ್ಕಳು ನಮ್ಮ ಸುತ್ತಮುತ್ತಲಿನ ಯಾವುದಾದರೂ ಕನಿಷ್ಠ ಐದು ಸಸ್ಯಗಳ ಹೆಸರುಗಳನ್ನು ಕೂಡಾ ಹೇಳುವಲ್ಲಿ ಅಸಮರ್ಥರಾಗುವುದನ್ನು ನೋಡುತ್ತಿದ್ದೇವೆ. ಅಂದರೆ ಪರಿಸರದೊದಿಗೆ, ಪರಿಸರ ಸ್ನೇಹಿಯಾಗಿ ಬೆಳೆದು ದೊಡ್ಡವರಾಗಬೇಕಿದ್ದ ಮಕ್ಕಳು, ತಂತ್ರಜ್ಞಾನದೊಂದಿಗೆ ಬೆಳೆಯುತ್ತಿದ್ದಾರೆ. ಹೀಗಾಗಿ, ಮಕ್ಕಳಲ್ಲಿ ಪರಿಸರ ಕಾಳಜಿ ಕ್ಷೀಣಿಸುತ್ತಿದೆ. ಭವಿಷ್ಯದಲ್ಲಿ ಭೂಮಿಯ ರಕ್ಷಣೆಯಾಗಬೇಕೆಂದರೆ ಇಂದಿನ ಮಕ್ಕಳಲ್ಲಿಯೇ ಗಿಡ-ಮರಗಳ ಕುರಿತು ಆಸಕ್ತಿ ಹಾಗೂ ಪರಿಸರ ಪ್ರಜ್ಞೆಯನ್ನು ಬೆಳೆಸುವ ಕಾರ್ಯ ಆಗಬೇಕಿದೆ ಎಂದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಜೆ.ಅರ್ಪಿತಾ ಮಾತನಾಡಿದರು.
ಜಿಲ್ಲಾ ಆರ್.ಸಿ.ಎಚ್.ಒ ಡಾ. ರಾಜು, ಡಿ.ಎಲ್.ಒ ಡಾ. ಮಂಜುನಾಥ್, ಡಿ.ಟಿ.ಒ ಡಾ. ಕುಮಾರ್, ಶಾಲಾ ಮುಖ್ಯೋಪಾಧ್ಯಾಯರು ಶಿವಸ್ವಾಮಿ, ಆರೋಗ್ಯ ಮೇಲ್ವಿಚಾರಕ ವಿಶ್ವೇಶ್ವರಯ್ಯ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜೇಂದ್ರ, ಜಿಲ್ಲಾ ಕೀಟಶಾಸ್ತ್ರಜ್ಞೆ ಸೌಮ್ಯ, ಆರೋಗ್ಯ ಸಿಬ್ಬಂದಿ, ಶಾಲೆಯ ಮಕ್ಕಳು ಹಾಗೂ ಇತರರು ಭಾಗವಹಿಸಿದ್ದರು.