ಉಕ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಹಿರಿದು: ಸಚಿವ ಕೆ.ಎನ್.ರಾಜಣ್ಣ

| Published : Jun 24 2024, 01:31 AM IST

ಸಾರಾಂಶ

ಬಾಗಲಕೋಟೆ ನವನಗರದ ಸೆಕ್ಟರ್ ಸಂಖ್ಯೆ 25ರಲ್ಲಿ ನೂತನವಾಗಿ ನಿರ್ಮಿಸಿರುವ ಬಾಪೂಜಿ ಸಹಕಾರಿ ಸಂಘದ ಕೇಂದ್ರ ಕಚೇರಿ ಸಹಕಾರಿ ಉದ್ಘಾಟನಾ ಸಮಾರಂಭವನ್ನು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್‌ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಉತ್ತರ ಕರ್ನಾಟಕದ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಬೆಳವಣಿಗೆಯಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಹಿರಿದಾಗಿದೆ. ಮುಖ್ಯವಾಗಿ ಸಕ್ಕರೆ ಕಾರ್ಖಾನೆಗಳ ಸ್ಥಾಪನೆಯಲ್ಲಿ ಸಹಕಾರಿ ಸಂಘಗಳ ಕೊಡುಗೆ ಮಹತ್ತರವಾಗಿದೆ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ನವನಗರದ ಸೆಕ್ಟರ್ ಸಂಖ್ಯೆ 25ರಲ್ಲಿ ನೂತನವಾಗಿ ನಿರ್ಮಿಸಿರುವ ಬಾಪೂಜಿ ಸಹಕಾರಿ ಸಂಘದ ಕೇಂದ್ರ ಕಚೇರಿಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕ್‌ ಗಳಲ್ಲಿ ಕಾಗದ ಪತ್ರ ಹೊಂದಿಸಿ ನೀಡಿದರೂ ಸಾಲ ದೊರೆಯುವುದಿಲ್ಲ. ಸಹಕಾರಿ ಸಂಘಗಳಲ್ಲಿ ಬೇಗ ಸಾಲ ದೊರೆಯುತ್ತದೆ. ಸಕಾಲಕ್ಕೆ ಸಾಲ ಮರುಪಾವತಿಯಾದಲ್ಲಿ ಬ್ಯಾಂಕಿನ ಅಭಿವೃದ್ಧಿ ಜೊತೆಗೆ ಸಾಮಾಜಿಕ ಭದ್ರತೆ ಹೆಚ್ಚಳವಾಗುತ್ತದೆ ಎಂದರು.

ದೇಶದ ಜಿಡಿಪಿ ಹೆಚ್ಚಿದೆ ಎಂದು ಬೆನ್ನು ತಟ್ಟಿಕೊಳ್ಳುವ ಹಂತದಲ್ಲಿ ನಾವಿಲ್ಲ. ದೇಶದಲ್ಲಿ 10 ಎಕರೆ ಹೊಂದಿರುವ ರೈತನಿಗಿಂತ ಬುಟ್ಟಿಯಲ್ಲಿ ಕಾಳು ಮಾರುವವರು ಹೆಚ್ಚು ಆದಾಯ ಪಡೆಯುತ್ತಿದ್ದಾರೆ. ದೇಶದ ಗ್ರಾಮೀಣ ಭಾಗದ ಜಿಡಿಪಿ 5 ರಿಂದ 6 ಆದಾಗ ಮಾತ್ರ ದೇಶದ ಜಿಡಿಪಿ ಉತ್ತಮವಾಗುತ್ತದೆ ಎಂದು ತಿಳಿಸಿದರು.

ಮಹಾರಾಷ್ಟ್ರದ ಕೊಲ್ಲಾಪುರದ ಕನ್ಹೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಜನರಿಂದ, ಜನರಿಗಾಗಿ ಹಾಗೂ ಜನರಿಗೋಸ್ಕರ ಇರುವುದೇ ಪ್ರಜಾಪ್ರಭುತ್ವ. ಆದರೆ, ಇಂದು ಹಣ ಎಲ್ಲ ರೂಪದಲ್ಲಿ ವ್ಯಾಪಿಸಿರುವುದರಿಂದ ಧನದಿಂದ ಧನಕ್ಕಾಗಿ ಧನವಂತರು ನಡೆಸುವ ವ್ಯವಸ್ಥೆ ಜಾರಿಗೆ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಜೀವನದ ಮೌಲ್ಯಗಳು ಕುಸಿದು ಹೋಗಿವೆ. ಹೀಗಾಗಿ ಮನುಷ್ಯ ದಿನದಿಂದ ದಿನಕ್ಕೆ ಅಗ್ಗವಾಗುತ್ತ ಹೋಗುತ್ತಿದ್ದಾನೆ. ಕಾಳುಗಳಿಗೆ ಇರುವ ಬೆಲೆಯೂ ಮನುಷ್ಯನಿಗೆ ಇಲ್ಲವಾಗಿದೆ. ಮೌಲ್ಯ ಅರ್ಥಪೂರ್ಣಗೊಳಿಸುವ ಕೆಲಸವಾಗಬೇಕಿದೆ. ಎಸ್.ಆರ್.ಪಾಟೀಲ ಈ ದಾರಿಯಲ್ಲಿ ಸಾಗುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾಮಫಲಕವನ್ನು ಸಂಸದ ಪಿ.ಸಿ.ಗದ್ದಿಗೌಡರ ಅನಾವರಣಗೊಳಿಸಿದರು. ಆಡಳಿತ ಮಂಡಳಿ ಸಭಾಭವನವನ್ನು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಉದ್ಘಾಟಿಸಿದರು. ಮಾಜಿ ಶಾಸಕ ವೀರಣ್ಣ ಚರಂತಿಮಠ ಸಭಾಭವನ ಉದ್ಘಾಟಿಸಿದರು. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಗಣಕಯಂತ್ರ ಉದ್ಘಾಟಿಸಿದರು. ಕ್ಯಾಶ್‌ ಕೌಂಟರ್‌ ಜಿ.ನಂಜನಗೌಡ ಉದ್ಘಾಟಿಸಿದರು.

ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಉಪಾಧ್ಯಕ್ಷ ಎ.ಆರ್. ಪ್ರಸನ್ನಕುಮಾರ, ರಾಜ್ಯ ಅಪೆಕ್ಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ದೇವರಾಜ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಶರಣಗೌಡ ಪಾಟೀಲ, ಸಂಸ್ಥೆಯ ಉಪಾಧ್ಯಕ್ಷ ಜಿ.ಎನ್. ಪಾಟೀಲ, ಬ್ಯಾಂಕ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಸಿ.ಮೋಟಗಿ, ನಿರ್ದೇಶಕರಾದ ಎಂ.ಎಸ್. ಪಾಟೀಲ, ಎಂ.ಟಿ. ಅರಳಿಕಟ್ಟಿ, ಎಸ್.ಬಿ. ಬೆಳಗಲಿ ಸೇರಿದಂತೆ ಅನೇಕರಿದ್ದರು.

ಎಸ್ಸಾರ್ಪಿ ನಿರಾಶರಾಗಬೇಡಿ: ಸಚಿವ ರಾಜಣ್ಣ

ಬಾಪೂಜಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಸ್.ಆರ್.ಪಾಟೀಲ ಹೆಸರು ಈ ಹಿಂದೆ ರಾಜ್ಯಸಭಾ ಹಾಗೂ ವಿಧಾನ ಪರಿಷತ್ ಸ್ಥಾನಕ್ಕೆ ಕೇಳಿ ಬಂದಿತ್ತು. ಆದರೆ, ಕೊನೆ ಹಂತದಲ್ಲಿ ಯಾವುದು ಸಿಕ್ಕಿಲ್ಲ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಕಾಂಗ್ರೆಸ್ ಬಹುದೊಡ್ಡ ಪಕ್ಷವಾಗಿದ್ದು, ಇಲ್ಲಿ ಎಲ್ಲವನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಹೈಕಮಾಂಡ್ ಮುಂದೆ ಹೋಗದೇ ನಮ್ಮಲ್ಲಿ ಏನೂ ಸಿಗಲಾರದು. ಎಸ್.ಆರ್.ಪಾಟೀಲರಿಗೆ ಹೈ ಕಮಾಂಡ್ ಹಂತದ ಎಲ್ಲ ನಾಯಕರು ಪರಿಚಯ ಇದ್ದಾರೆ. ಅವರಲ್ಲಿ ಮನವಿ ಮಾಡಿಕೊಳ್ಳಿ. ಕಣ್ಣಿಗೆ ಕಾಣದಿದ್ದರೆ ತಲೆಯಿಂದಲೇ ನಮ್ಮನ್ನು ತೆಗೆದು ಬಿಡುತ್ತಾರೆ. ಅಧಿಕಾರ ಹಾಗೂ ಐಶ್ವರ್ಯ ಯಾವಾಗ ಬರುತ್ತದೆ ಗೊತ್ತಿಲ್ಲ. ನಿರಾಶರಾಗಬೇಡಿ, ಮುಂದೆ ದೇವರ ಆಶೀರ್ವಾದ ಆಗುತ್ತದೆ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲರಿಗೆ ಸಲಹೆ ನೀಡಿದರು.

ಸಹಕಾರ ಸಂಘಗಳ ಯಶಸ್ಸಿನಲ್ಲಿ ನಿರ್ದೇಶಕ ಮಂಡಳಿ ಜೊತೆಗೆ ಸಿಬ್ಬಂದಿ ಪಾತ್ರವೂ ಅಡಗಿದೆ. ಗ್ರಾಹಕರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ಆಡಳಿತ ಮಂಡಳಿಯ ಜವಾಬ್ದಾರಿ. ಎಸ್.ಆರ್.ಪಾಟೀಲರು ಅತ್ಯಂತ ಯಶಸ್ವಿಯಾಗಿ ಈ ಕೆಲಸ ನಿಭಾಯಿಸಿದ್ದಾರೆ. ಬಾಪೂಜಿ ಬ್ಯಾಂಕ್ ರಾಜ್ಯದ ಎಲ್ಲೆಡೆ ತನ್ನ ಕಚೇರಿ ಸ್ಥಾಪಿಸಬಹುದು. ಹೊರ ರಾಜ್ಯದಲ್ಲಿ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಲು ಕೇಂದ್ರ ಸರ್ಕಾರದ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ರಾಜ್ಯದಲ್ಲಿ ಸಾಕಷ್ಟು ವಿಸ್ತರಣೆಗೆ ಅವಕಾಶವಿದ್ದು, ಈ ಬಗ್ಗೆ ಗಮನ ಹರಿಸಿದರೇ ಸೂಕ್ತ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಮಹಾರಾಷ್ಟ್ರದ ಕೊಲ್ಲಾಪುರದ ಕನ್ಹೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ರೈತರಿಗಾಗಿ 1905ರಲ್ಲಿ ಹುಟ್ಟಿಕೊಂಡ ಸಹಕಾರ ಕ್ಷೇತ್ರ ಇಂದು ಎಲ್ಲ ರಂಗದಲ್ಲೂ ಬಂದು ನಿಂತಿದೆ. ಸಹಕಾರ ಕ್ಷೇತ್ರದಲ್ಲಿ ಉತ್ತಮ ಆಡಳಿತಗಾರರ ಅವಶ್ಯಕತೆ ಇದೆ. ಆಡಳಿತದ ವೈಫಲ್ಯದಿಂದಲೇ ದೇಶದಲ್ಲಿ ಅನೇಕ ಸಹಕಾರಿ ಸಂಘಗಳು ನಷ್ಟವಾಗಿವೆ. ಮಾಜಿ ಸಚಿವ ಎಸ್.ಆರ್.ಪಾಟೀಲರ (ಗೌಡರು) ಮೇಲಿನ ವಿಶ್ವಾಸದಿಂದಲೇ ಇಂದು ಬಾಪೂಜಿ ಬ್ಯಾಂಕ್‌ನಲ್ಲಿ ಜನರು ₹1,000 ಕೋಟಿವರೆಗೆ ಠೇವಣಿ ಇಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ಗ್ರಾಹಕರ ಹೆಚ್ಚಿನ ಸೇವೆ ಮಾಡುತ್ತ ಉತ್ತುಂಗಕ್ಕೆ ಏರಲಿ ಎಂದು ಹಾರೈಸಿದರು.

ಸಕ್ಕರೆ ಕಾರ್ಖಾನೆಗೆ ಸಚಿವ ರಾಜಣ್ಣರ ಕೊಡುಗೆ:

2008ರಲ್ಲಿ 1702 ಸದಸ್ಯರು, ₹12.48 ಲಕ್ಷ ಷೇರು ಬಂಡವಾಳದೊಂದಿಗೆ ಆರಂಭವಾದ ಬಾಪೂಜಿ ಪತ್ತಿನ ಸಹಕಾರಿ ಬ್ಯಾಂಕ್‌ ಇಂದು 59,152 ಸದಸ್ಯರು, ₹6.72 ಕೋಟಿ ಷೇರು ಬಂಡವಾಳ ಹೊಂದಿ ಪ್ರಗತಿ ಪಥದಲ್ಲಿ ಸಾಗುತ್ತಿದೆ. ಬೇರೆ ರಾಜ್ಯಗಳಲ್ಲೂ ಶಾಖೆ ತೆರೆಯುವ ಉದ್ದೇಶ ಹೊಂದಲಾಗಿದೆ. ಮೇಲ್ಮನೆಯಲ್ಲಿ ತಾವು ಹಾಗೂ ಕೆ.ಎನ್.ರಾಜಣ್ಣ ಸದಾ ಜತೆಯಾಗಿರುತ್ತಿದ್ದೇವು. ಬೀಳಗಿ ಸಕ್ಕರೆ ಕಾರ್ಖಾನೆ ಆರಂಭಿಸುವ ಪ್ರಸ್ತಾಪವನ್ನು ಅವರ ಮುಂದೆ ಮಾಡಿದಾಗ ಅವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದರು. ತಾವೇ ಕರೆದುಕೊಂಡು ಹೋಗಿ ₹9 ಕೋಟಿ ಸಾಲ ನೀಡಿದರು. ಅವರು ಅಂದು ಸಾಲ ನೀಡಿದ್ದರಿಂದಾಗಿ ಸಕ್ಕರೆ ಕಾರ್ಖಾನೆ ತೆಲೆ ಎತ್ತಿದೆ ಎಂದು ಬಾಪೂಜಿ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌.ಪಾಟೀಲ ಹೇಳಿದರು.