ಸಾರಾಂಶ
ಹೂವಿನಹಡಗಲಿ: ನಿತ್ಯ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಪತ್ರಿಕೆಗಳಲ್ಲಿ ವರದಿ ಮಾಡುತ್ತಾ, ಸರ್ಕಾರವನ್ನು ಎಚ್ಚರಿಸುವಲ್ಲಿ ಪತ್ರಕರ್ತರ ಪಾತ್ರ ಅನನ್ಯ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಇಲ್ಲಿನ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸಮಾಜ ಸುಧಾರಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಪತ್ರಕರ್ತರನ್ನು ಸರ್ಕಾರ ಇಂದಿಗೂ ಕಡೆಗಣಿಸುತ್ತಿದೆ. ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಕಳೆದ ಹಲವು ವರ್ಷಗಳ ಬೇಡಿಕೆ. ಆದರೆ ಇನ್ನುವರೆಗೂ ಈಡೇರಿಲ್ಲ. ಆದರೆ ಬಜೆಟ್‌ನಲ್ಲಿ ಘೋಷಿಸಿದ್ದರೂ ಈವರೆಗೆ ಅನುಷ್ಠಾನವಾಗಿಲ್ಲ. ಪತ್ರಕರ್ತರ ಕುಂದು-ಕೊರತೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮಕ್ಕೆ ಆಗ್ರಹಿಸುತ್ತೇನೆಂದು ಹೇಳಿದರು.
ಪಟ್ಟಣದಲ್ಲಿರುವ ಪತ್ರಿಕಾ ಭವನದ ನವೀಕರಣಕ್ಕೆ ಶಾಸಕರ ಅನುದಾನದಲ್ಲಿ ಹಣ ಮೀಸಲಿಟ್ಟು ಅಭಿವೃದ್ಧಿ ಮಾಡುತ್ತೇನೆಂದು ಭರವಸೆ ನೀಡಿದರು.ಜಿಬಿಆರ್ ಕಾಲೇಜಿನ ಪ್ರಾಚಾರ್ಯ ಪ್ರೊ.ಎಸ್.ಎಸ್. ಪಾಟೀಲ್ ಮಾತನಾಡಿ, ದೇಶದಲ್ಲಿ ತುರ್ತು ಪರಿಸ್ಥಿತಿ, ಭೂ ಸುಧಾರಣೆ ಕಾಯಿದೆಯಲ್ಲಿ ಮಾಧ್ಯಮಗಳು ಬಹುಮುಖ್ಯ ಪಾತ್ರ ವಹಿಸಿದ್ದವು. ಈ ಕುರಿತು ವರದಿ ಮಾಡುತ್ತಾ ಅಂದಿನ ಸರ್ಕಾರಗಳ ಕಣ್ಣು ತೆರೆಸುವ ಕೆಲಸ ಮಾಡಿವೆ. ವಿವಿಧ ವಿಷಯಗಳ ಕುರಿತು ರಾಜ್ಯ ರಾಜಕಾರಣದಲ್ಲಿ ತಲ್ಲಣ ಕೂಡ ಮೂಡಿಸಿರುವ ಕೀರ್ತಿ ಪತ್ರಿಕೆಗಳಿಗೆ ಸಲ್ಲುತ್ತದೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ಇತಿಹಾಸದಲ್ಲಿ ದೇಶದ ರಚನಾತ್ಮಕ ಬದಲಾವಣೆ, ಬೆಳವಣಿಗೆ, ಬರವಣಿಗೆಗಳಲ್ಲಿ ಪತ್ರಿಕೆಗಳು ತಮ್ಮದೇ ಆದ ಕೊಡುಗೆ ಕೊಟ್ಟಿವೆ. ಇತ್ತೀಚೆಗೆ ಡಾ.ನಂಜುಂಡಪ್ಪ ವರದಿ ಜಾರಿ, 371ಜೆ ಕಲಂ, ಸಿಂಗಟಾಲೂರು ನೀರಾವರಿ ಯೋಜನೆ, ಗದಗ-ಹರಪನಹಳ್ಳಿ ರೈಲ್ವೆ ಸಂಪರ್ಕ ಸೇರಿದಂತೆ ಪತ್ರಕರ್ತರು ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದಾರೆ. ಜತೆಗೆ ತಮ್ಮ ವರದಿಗಳ ಮೂಲಕ ಸರ್ಕಾರ ಹಾಗೂ ಆಳುವ ವರ್ಗಗಳ ಗಮನ ಸೆಳೆದಿರುವುದು ಶ್ಲಾಘನೀಯ ಎಂದರು.ದೇಶದ ಪತ್ರಿಕೋದ್ಯಮ ಇತಿಹಾಸದಲ್ಲಿ ಈ ಭಾಗದ ಹಿರಿಯ ಪತ್ರಕರ್ತ, ಲೇಖಕ ಮಹಾಬಲೇಶ್ವರ ಕಾಟ್ರಹಳ್ಳಿಯವರ ಹೊಸತನದ ಕೊಡುಗೆ ಮೆಚ್ಚುವಂತದ್ದು. ಹಾಗಾಗಿ ಪತ್ರಿಕೋದ್ಯಮದಲ್ಲಿ ಜಿಲ್ಲೆಯ ಪಶ್ಚಿಮ ತಾಲೂಕುಗಳು ತಮ್ಮದೇ ಕೊಡುಗೆ ನೀಡಿವೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸತ್ಯನಾರಾಯಣ ಮಾತನಾಡಿ, ಪತ್ರಕರ್ತರ ಕಾರ್ಯಕ್ರಮಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಅಸಡ್ಡೆ ತೋರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾ, ಪತ್ರಕರ್ತರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಸ್ಪಂದಿಸುವ ಗುಣ ಹೊಂದಬೇಕಿದೆ ಎಂದರು.ಪತ್ರಕರ್ತರಿಗೆ ಆಗಸ್ಟ್ ತಿಂಗಳಲ್ಲಿ ಉಚಿತ ಬಸ್ ಪಾಸ್‌ಗೆ ಚಾಲನೆ ಸಿಗಲಿದೆ ಎಂದು ವಾರ್ತಾ ಇಲಾಖೆ ಆಯುಕ್ತರು ಹೇಳಿದ್ದಾರೆಂದ ತಿಳಿಸಿದರು.
ತಾಪಂ ಇಒ ಉಮೇಶ, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ವೆಂಕೋಬ ನಾಯಕ ಮಾತನಾಡಿದರು. ಪ್ರಾಚಾರ್ಯ ಪ್ರೊ.ಎಸ್.ಎಸ್. ಪಾಟೀಲ್, ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಎಂಪಿಎಂ ಅಶೋಕ, ಶಾಂತಿಬಾಯಿ, ರುದ್ರಗೌಡ, ಪೌರ ಕಾರ್ಮಿಕ ಮೈಲಾರಪ್ಪ ಅವರನ್ನು ಸನ್ಮಾನಿಸಲಾಯಿತು.ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರು ಕೊಂಚಿಗೇರಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ, ವೆಂಕಟೇಶ ಇದ್ದರು. ಪತ್ರಕರ್ತ ವಿಶ್ವನಾಥ ಹಳ್ಳಿಗುಡಿ, ಎಂ.ಪಿ.ಎಂ. ಶಿವಪ್ರಕಾಶ, ಮಧುಸೂದನ್ ಎಚ್. ಚಂದ್ರಪ್ಪ ನಿರ್ವಹಿಸಿದರು.