ಸ್ವಾತಂತ್ರ್ಯ ಸಂಗ್ರಾಮ, ಏಕೀಕರಣದಲ್ಲಿ ಪತ್ರಿಕೆಗಳ ಪಾತ್ರ ಪ್ರಮುಖ

| Published : Oct 12 2025, 01:00 AM IST

ಸ್ವಾತಂತ್ರ್ಯ ಸಂಗ್ರಾಮ, ಏಕೀಕರಣದಲ್ಲಿ ಪತ್ರಿಕೆಗಳ ಪಾತ್ರ ಪ್ರಮುಖ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯ ಸಂಗ್ರಾಮ, ಕರ್ನಾಟಕ ಏಕೀಕರಣ ಚಳವಳಿಗಳ ಯಶಸ್ಸಿಗೆ ಪತ್ರಿಕೆಗಳ ಪಾತ್ರ ಪ್ರಮುಖವಾಗಿದೆ

ಹುಬ್ಬಳ್ಳಿ: ಮೊದಲಿನಿಂದಲೂ ಸ್ವಾತಂತ್ರ್ಯ ಸಂಗ್ರಾಮ, ಕರ್ನಾಟಕ ಏಕೀಕರಣ, ಜನರಲ್ಲಿ ಬೇರೂರಿದ್ದ ಅಸ್ಪೃಶ್ಯತೆ ನಿವಾರಿಸುವಲ್ಲಿ ಪತ್ರಿಕೆಗಳ ಪಾತ್ರ ಪ್ರಮುಖವಾಗಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿನ ವಿದ್ಯಾ ನಗರದಲ್ಲಿರುವ ಸ್ಟೆಲ್ಲರ್ ಮಾಲ್‌ನಲ್ಲಿ ಲೋಕ ಶಿಕ್ಷಣ ಟ್ರಸ್ಟ್‌ನ ಸಂಯುಕ್ತ ಕರ್ನಾಟಕ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕದ ಏಕೀಕರಣ ಹೋರಾಟ ನಡೆಸುವಲ್ಲಿ ಉತ್ತರ ಕರ್ನಾಟಕ ಜನತೆಯ ಕೊಡುಗೆ ಅಪಾರವಾಗಿದೆ. ಅಂದಿನ ಪತ್ರಿಕೆಗಳು ಬೆನ್ನಲುಬಾಗಿ ನಿಲ್ಲುವ ಮೂಲಕ ತಮ್ಮ ಬದ್ಧತೆ ಕಾಯ್ದುಕೊಂಡಿರುವುದನ್ನು ಸ್ಮರಿಸಬೇಕಿದೆ. ಬದಲಾದ ಕಾಲಘಟ್ಟದಲ್ಲಿ ಸ್ಪರ್ಧೆಯ ಕಾರಣದಿಂದ ಪತ್ರಿಕೆಗಳನ್ನು ನಡೆಸುವುದೇ ಕಷ್ಟಕರವಾಗಿದೆ. ಹಿಂದಿನ ಕಾಲದಲ್ಲಿ ಇಷ್ಟೊಂದು ಸ್ಪರ್ಧೆ ಇರಲಿಲ್ಲ. ಇಂದಿಗೂ ಪತ್ರಿಕೆಗಳು ಗುಣಮಟ್ಟದೊಂದಿಗೆ ಪತ್ರಿಕಾ ಸ್ವಾತಂತ್ರ್ಯಕ್ಕೆ ದಕ್ಕೆಯಾಗದಂತೆ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿರುವುದು ಅಭಿನಂದನಾರ್ಹ ಎಂದರು.

ಸಚಿವ ಎಚ್‌.ಕೆ.ಪಾಟೀಲ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮ, ಕರ್ನಾಟಕ ಏಕೀಕರಣ ಚಳವಳಿಗಳ ಯಶಸ್ಸಿಗೆ ಪತ್ರಿಕೆಗಳ ಪಾತ್ರ ಪ್ರಮುಖವಾಗಿದೆ. ಸ್ವಾತಂತ್ರ ಸಂಗ್ರಾಮದ ವೇಳೆ ಎಲ್ಲ ಚಟುವಟಿಕೆಗಳು ನಡೆದಿರುವುದು ಮುಂಬೈ ಕರ್ನಾಟಕ ಭಾಗದಲ್ಲೆ. ಕರ್ನಾಟಕ ಏಕೀಕರಣದಲ್ಲೂ ಮುಂಬೈ ಕರ್ನಾಟಕ ಮುಂಚೂಣಿಯಲ್ಲಿತ್ತು. ಈ ವೇಳೆ ಹೆಚ್ಚು ಹೋರಾಟಗಳು ನಡೆದದ್ದೇ ಉತ್ತರ ಕರ್ನಾಟಕ ಭಾಗದಲ್ಲಿ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಮೇಲೆಯೂ ಅಂದಿನಿಂದ ಇಂದಿನವರೆಗೂ ಉತ್ತರ ಕರ್ನಾಟಕದ ಜನತೆ ಹೋರಾಟದ ಹಾದಿಯಲ್ಲಿಯೇ ಸಾಗುತ್ತಿದ್ದೇವೆ. ತನ್ನ ಬದ್ಧತೆ ಕಾಯ್ದುಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಪತ್ರಿಕೆಗಳು ಮತ್ತಷ್ಟು ಶ್ರಮಿಸುವ ಕಾರ್ಯ ಕೈಗೊಳ್ಳಲಿ ಎಂದು ಸಲಹೆ ನೀಡಿದರು.

ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಕರ್ನಾಟಕದ ಆಗು- ಹೋಗುಗಳನ್ನು ಅರಿತುಕೊಳ್ಳಲು ಪತ್ರಿಕೆಗಳ ಪಾತ್ರ ಪ್ರಮುಖವಾಗಿದೆ. ರಾಜಕಾರಣಿಗಳು ಹಾಗೂ ಮಾಧ್ಯಮಕ್ಕೆ ಅವಿನಾಭಾವ ಸಂಬಂಧವಿದೆ. ರಾಜಕಾರಣಿಗಳಿಲ್ಲದೇ ಪತ್ರಿಕೆಗಳಿಲ್ಲ,ಪತ್ರಿಕೆಗಳಿಲ್ಲದೇ ರಾಜಕಾರಣಿಗಳಿಲ್ಲ. ಇಬ್ಬರದು ಪತಿ-ಪತ್ನಿಯ ಸಂಬಂಧದಂತೆ ಅನ್ಯೋನ್ಯತೆಯೊಂದಿಗೆ ಇಂದಿಗೂ ಮುಂದುವರೆದಿದೆ ಎಂದರು.

ಪ್ರೊ. ಜಿ.ಬಿ.ಶಿವರಾಜ ಹಾಗೂ ಮನೋಜಕುಮಾರ ಪಾಟೀಲ ಉಪನ್ಯಾಸ ನೀಡಿದರು. ಸರ್ಕಾರದ ಮುಖ್ಯ ಸಚೇತಕ ಸಲೀಂಅಹ್ಮದ್‌, ಅಧ್ಯಕ್ಷತೆ ವಹಿಸಿದ್ದ ಲೋಕ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಅಶೋಕ ಹಾರನಹಳ್ಳಿ ಮಾತನಾಡಿದರು.

ಈ ವೇಳೆ ಪದ್ಮಶ್ರೀ ಎಂ.ಎಂ.ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಡಿ.ಆರ್‌.ಪಾಟೀಲ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ವಿಪ ಮಾಜಿ ಸದಸ್ಯ ಯು.ಬಿ.ವೆಂಕಟೇಶ, ಉದ್ಯಮಿ ಕೇಶವ ದೇಸಾಯಿ, ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಸೇರಿದಂತೆ ಹಲವರಿದ್ದರು. ಸಿಇಒ ಮೋಹನ ಹೆಗಡೆ ವಂದಿಸಿದರು.