ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿರಾಷ್ಟ್ರೀಯ ಸೇವಾ ಯೋಜನಾ ಘಟಕವು ವಿದ್ಯಾರ್ಥಿಗಳ ಜೀವನದಲ್ಲಿ ಬಹು ದೊಡ್ಡ ಕೊಡುಗೆಯನ್ನು ಕೊಡುವ ವೇದಿಕೆ. ಸೇವಾ ಮನೋಭಾವದೊಂದಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಉನ್ನತೀಕರಣಗೊಳ್ಳಲು ಇಂಥ ಶಿಬಿರಗಳು ಅದ್ಭುತವಾದ ಅವಕಾಶವನ್ನು ಮಾಡಿಕೊಡುತ್ತವೆ ಎಂದು ಇರ್ವತ್ತೂರು ಮಹತೋಭಾರ ಶ್ರೀ ಲಕ್ಷ್ಮಿ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಯೋಗೀಶ್ ಮಲ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಅವರು ಶ್ರೀ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿದರು.ಮುಖ್ಯ ಅಭ್ಯಾಗತರಾಗಿ ಕಡ್ತಲ ಪಂಚಾಯಿತಿ ಅಧ್ಯಕ್ಷ ಸುಕೇಶ್ ಹೆಗ್ಡೆ, ಪಂಚಾಯತ್ ಸದಸ್ಯರಾದ ದೇವೇಂದ್ರ ಕಾಮತ್, ಗ್ರಾಮವಿಕಾಸ ಜಿಲ್ಲಾ ಸಂಯೋಜಕ ಬಿ. ಗುರುಪ್ರಸಾದ್ ಕಿಣಿ, ಕಾಲೇಜಿನ ಉಪ ಪ್ರಾಂಶುಪಾಲ ವಿನಾಯಕ್ ಪೈ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಸುಕನ್ಯಾ ಮೇರಿ ಜೆ. ಅವರು ವಹಿಸಿಕೊಂಡಿದ್ದರು.* ಬದುಕಿನ ಭರವಸೆ ಬಹಳ ಮುಖ್ಯ
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿದ್ದ, ಕಾಂತಾರ ಚಲನಚಿತ್ರ ಖ್ಯಾತಿಯ ಹಿರಿಯ ರಂಗ ಕಲಾವಿದ ಸತೀಶ್ ಆಚಾರ್ಯ ಪೆರ್ಡೂರು ಮಾತನಾಡಿ, ನಾವು ಇಡುವ ಪ್ರತಿಯೊಂದು ನಡೆಯಲ್ಲೂ ನಮಗೆ ಅಪಾರವಾದ ನಂಬಿಕೆ ಇರಬೇಕು. ದೇವರೇ ಎಲ್ಲ, ನಾವೇನೂ ಅಲ್ಲ ಎಂಬ ಭಾವನೆ ಬಂದಾಗ ಬದುಕಿನ ಭಾರವನ್ನೆಲ್ಲಾ ಆ ಶಕ್ತಿ ಹಗುರಾಗಿಸಿ ಕೈ ಹಿಡಿದು ನಡೆಸುವುದು ಎಂದು ಕಿವಿಮಾತು ಹೇಳಿದರು.ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಸಿಎ ಟಿ.ಪ್ರಶಾಂತ್ ಹೊಳ್ಳ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಡಾ. ಸುಕನ್ಯಾ ಮೇರಿ ಜೆ. ವಹಿಸಿದ್ದರು. ಯೋಜನಾಧಿಕಾರಿಗಳಾದ ಚಿರಂಜನ್ ಕೆ. ಶೇರಿಗಾರ್ ಮತ್ತು ಡಾ. ಪ್ರಜ್ಞಾ ಮಾರ್ಪಳ್ಳಿ ಉಪಸ್ಥಿತರಿದ್ದರು.ವಿದ್ಯಾರ್ಥಿ ನಾಯಕರಾದ ದೀಪಕ್ ಕಾಮತ್, ಚೈತನ್ಯ ಹೆಗಡೆ, ಶ್ರೀಜಾ, ದಿಶಾ, ಸ್ವಪ್ನಾ ರಾಜಾರಾಂ ಉಪ್ಪುಂದ, ಸ್ವಯಂಸೇವಕಿ ಭಾವನಾ ಕಾರ್ಯಕ್ರಮ ಸಂಯೋಜಿಸಿದರು.