ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಕಲಿಕೆಯಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ನಿವೃತ್ತ ಶಿಕ್ಷಕ ಚಂದ್ರೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.ದಳವಾಯಿ ಕೋಡಿಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಕೊಠಡಿ ಉದ್ಘಾಟಿಸಿ ಮಾತನಾಡಿ, ಶಾಲೆಯಲ್ಲಿ 12 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿದ್ದೇನೆ. ನನ್ನ ಅವಧಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇತ್ತು, ಈಗ ಕಡಿಮೆಯಾಗಿದೆ ಎಂದು ವಿಷಾದಿಸಿದರು.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಪಡೆಯುವುದಕ್ಕೆ ಉತ್ತೇಜನ ಸಿಗಬೇಕಾದರೆ ಈಗ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಉನ್ನತ ಅಂಕಗಳನ್ನು ಪಡೆದು ತೇರ್ಗಡೆಯಾಗಬೇಕು. ವಿದ್ಯಾರ್ಥಿಗಳ ಪೋಷಕರು ನಿಮ್ಮ ಮಕ್ಕಳ ವ್ಯಾಸಂಗಕ್ಕೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.ವಿದ್ಯಾರ್ಥಿಗಳು ಶಾಲೆಗೆ ಬರದಿದ್ದರೆ ಶಿಕ್ಷಕರು ಅವರ ಪೋಷಕರಿಗೆ ವಿಷಯ ತಿಳಿಸಿ, ಹಾಜರಾತಿಯ ಬಗ್ಗೆ ಗಮನ ಹರಿಸಬೇಕು. ಆಸಕ್ತಿ ವಹಿಸಿ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದು ಪೂರ್ಣ ಪ್ರಮಾಣದಲ್ಲಿ ತೇರ್ಗಡೆಯಾದರೆ, ಆಗ ಮಾತ್ರ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ಎ.ಎಸ್.ದೇವರಾಜು ಮಾತನಾಡಿ, ಗಣಿತ ವಿಷಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ವೈಯಕ್ತಿಕವಾಗಿ ನಾನು ವಾಚನ್ನು ಬಹುಮಾನವಾಗಿ ಕೊಡುವುದಾಗಿ ಭರವಸೆ ನೀಡಿದರು.ಇದೇ ವೇಳೆ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ, ವಿವಿಧ ವಿಷಯದಲ್ಲಿ ಅತಿಹೆಚ್ಚು ಅಂಕ ಪಡೆದವರು. ಶಾಲೆಗೆ ದಿನನಿತ್ಯ ಹಾಜರಾತಿ ಆಗುವವರಿಗೆ ಪ್ರತಿಭಾ ಪುರಸ್ಕಾರ ನೀಡುವ ಬಗ್ಗೆ ಸದಸ್ಯರು ತಿಳಿಸಿದರು.
ಶಿಕ್ಷಕ ಜಯರಾಮ್ ಮಾತನಾಡಿದರು. ಮುಖ್ಯ ಶಿಕ್ಷಕಿ ನಾಗವೇಣಿ ಮತ್ತು ಸಹ ಶಿಕ್ಷಕರಾದ ರುಷಿದಾಖಾನ್, ಮೈತ್ರಿ, ಕುಮಾರಿ ರಂಜಿತ, ಅವರಿಗೆ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಿದ್ದೇಗೌಡ, ಜಯರಾಮು, ಹಿರಿಯ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷ ತಮ್ಮಣ್ಣೇಗೌಡ, ಉಪಾಧ್ಯಕ್ಷ ರವೀಶ ,ಕಾರ್ಯದರ್ಶಿ ಶಿವರಾಜು ,ಗೌರವಾಧ್ಯಕ್ಷ ರಾಜೇಶ್ವರ, ಸಂಘದ ಸಂಘಟನೆಗಾರ ಶ್ರೀನಿವಾಸ ಮತ್ತು ಸದಸ್ಯರಾದ ಪ್ರವೀಣ, ಮಹೇಶ, ಬಸವಲಿಂಗ ,ತೇಜಸ್ಸು, ಸೇರಿ ಇತರರು ಇದ್ದರು.