ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಈ ನಾಡಿನ ಬೆಳವಣಿಗೆಯಲ್ಲಿ ಹಿಂದಿನಿಂದಲೂ ಮಹಿಳೆಯರ ಪಾತ್ರ ಹಿರಿದು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಮಹಿಳಾ ಮೋರ್ಚಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಪಕ್ಷ ಸಂಘಟನೆ ಗಟ್ಟಿ ಇರಬೇಕಾದರೆ ಮಹಿಳಾ ಮೋರ್ಚಾ ಮುಖ್ಯ. ಪಕ್ಷವು ಇನ್ನಷ್ಟು ದೊಡ್ಡದಾಗಿ ಬೆಳೆಯಬೇಕು. ಲಕ್ಷ್ಮಮ್ಮಣ್ಣಿ ಅವರ ಕಾಲದಿಂದಲೂ ಈ ನಾಡನ್ನು ನೋಡಿದ್ದೇವೆ. ಬ್ರಿಟಿಷರು ಅವರನ್ನು ಬಂಧಿಸಿದ್ದರೂ, ಅವರ ಸಹಕಾರವನ್ನೇ ಪಡೆದು ಮತ್ತೆ ಆಳ್ವಿಕೆ ನಡೆಸಿದ್ದರು. ಈಗ ನಮ್ಮ ಕೈಗೆ ಆಡಳಿತ ಬರದಿದ್ದರೆ ರಾಜ್ಯ ಇಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿರಲಿಲ್ಲ ಎಂದರು.ಆ ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ಅವಧಿಯನ್ನು ನಾವು ಸುವರ್ಣ ಯುಗ ಎಂದು ಕರೆಯುತ್ತೇವೆ. ಆದರೆ ಅದರ ಹಿಂದಿನ ಪರಿಶ್ರಮ ವಾಣಿವಿಲಾಸ ಸನ್ನಿಧಾನ ಅವರದ್ದು. ನಾಲ್ವಡಿ ಅವರ ಸುವರ್ಣ ಯುಗದ ಬೀಜ ಹಾಕಿದ್ದು ವಾಣಿವಿಲಾಸ ಸನ್ನಿಧಾನ ಅವರು. ಆದ್ದರಿಂದ ಮಹಿಳೆಯ ಪಾತ್ರ ದೊಡ್ಡದು ಎಂದು ಅವರು ಹೇಳಿದರು.
ಲಕ್ಷ್ಮಮ್ಮಣ್ಣಿ ಮತ್ತು ವಾಣಿವಿಲಾಸ ಸನ್ನಿಧಾನ ಅವರು ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಈಗ ನಾವು ಕೋವಿಡ್ಎಂದು ಹೇಳುತ್ತೇವೆ. ಆಗಲೇ ಮಲೇರಿಯಾ, ಕಾಲರಾಕ್ಕೆ ಔಷಧ ನೀಡಿದ್ದು, ಆಸ್ಪತ್ರೆಗಳನ್ನು ನಿರ್ಮಿಸಿದ್ದು ಮೈಸೂರು ರಾಜವಂಶದ ಮಹಿಳೆಯರು ಎಂದರು.ನಾನು ನನ್ನ ಗೆಲುವನ್ನೂ ಕೂಡ ಚಾಮುಂಡೇಶ್ವರಿಗೆ ಮತ್ತು ಕಾವೇರಿ ಮಾತೆಗೆ ಅರ್ಪಿಸಿದ್ದೇನೆ. ಆಧುನಿಕ ಕಾಲದಲ್ಲಿಯೂ ಮಹಿಳೆಯರಿಂದ ಒಳ್ಳೆಯ ಕೆಲಸ ನಡೆದಿದೆ ಎಂದರು.
ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಸಾರ್ವಜನಿಕರು ಬಿಜೆಪಿ ಕಚೇರಿಗೆ ಬರುವುದು ಪಕ್ಷದ ಮೇಲೆ ಇರುವ ನಂಬಿಕೆ ಮತ್ತು ಗೌರವದ ಕಾರಣ. ಈ ಸಂಖ್ಯೆ ಮಹಿಳೆಯರನ್ನು ನೋಡಿದರೆ ಪಕ್ಷಕ್ಕೆ ಮತ್ತಷ್ಟು ಬಲ ಬರುತ್ತದೆ. ಈ ಕಾರ್ಯಕ್ರಮದ ಮೂಲಕ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ. ದುಡ್ಡು ಆಸ್ತಿ ಮಾಡಿದರೆ ಕಳುವಾಗುತ್ತದೆ, ಮುಟ್ಟುಗೋಲು ಮಾಡಿಕೊಳ್ಳುತ್ತಾರೆ. ಆದರೆ ವಿದ್ಯೆಯನ್ನು ಹಾಗೆ ಕಸಿಯಲು ಸಾಧ್ಯವಿಲ್ಲ ಎಂದರು.ಕಳೆದ ವರ್ಷ ನಾನು ಸರ್ಕಾರಿ ಪ್ರೌಢಶಾಲೆಗಳಿಗೆ ಭೇಟಿ ನೀಡಿದ್ದಾಗ ಪರೀಕ್ಷೆಗೆ ಹಾಜರಾಗಿದ್ದ 4 ಸಾವಿರ ವಿದ್ಯಾರ್ಥಿಗಳ ಪೈಕಿ ಇಬ್ಬರು ಮಾತ್ರ 600ಕ್ಕಿಂತ ಹೆಚ್ಚು ಅಂಕ ಪಡೆದಿದ್ದರು. ಆ ನಂತರ ವಿಶೇಷ ತರಗತಿ, ಪುನಶ್ಚೇತನ ಕಾರ್ಯಕ್ರಮಗಳ ಮೂಲಕ ಈ ಬಾರಿ 119 ಮಂದಿ 600ಕ್ಕೂ ಹೆಚ್ಚು ಅಂಕಗಳಿಸಿದ್ದಾರೆ ಎಂದು ಅವರು ಹೇಳಿದರು.
ಅನೇಕರು ಆರ್ಥಿಕ ಸಮಸ್ಯೆಯಿಂದ ಓದಲು ಆಗುತ್ತಿಲ್ಲ. ವರುಣ ಕ್ಷೇತ್ರದಲ್ಲಿ ಪೋಷಕರಿಬ್ಬರು ತಮ್ಮ ಮಗಳ ಓದಿಗಾಗಿ ಭಿಕ್ಷ ಬೇಡಿದ್ದರೆ, ಚಾಮರಾಜನಗರದಲ್ಲಿ ಓರ್ವ ತಾಯಿ ತನ್ನ ಕಿಡ್ನಿ ಮಾರಲು ಮುಂದಾಗಿದ ಘಟನೆಯೂ ನಡೆದಿದೆ ಎಂದು ಅವರು ತಿಳಿಸಿದರು.ಮಾಜಿ ಮೇಯರ್ ಸಂದೇಶ್ ಸ್ವಾಮಿ,ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ, ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ರಾಜು, ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಕಲಾ, ಮಮತಾ ಶೆಟ್ಟಿ, ಮಾಜಿ ಉಪ ಮೇಯರ್ ಡಾ.ಜಿ. ರೂಪಾ ಮೊದಲಾದವರು ಇದ್ದರು.