ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ / ಸಾಗರ
ರಾಷ್ಟ್ರದ ಅಭಿವೃದ್ಧಿಯಲ್ಲಿ ಕಾರ್ಮಿಕರ ಕೊಡುಗೆ ಅಪಾರವಾಗಿದೆ. ಅವರ ಹಿತವನ್ನು ಕಾಪಾಡುವುದು ಮಾಲಿಕರ ಜವಾಬ್ದಾರಿಯಾಗಿದೆ ಎಂದು ಸಮಾಜ ಸೇವಕ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್ ಹೇಳಿದರು. ಬುಧವಾರ ಪಟ್ಟಣದ ರಾಜೀವ್ ನಗರದ ಓಂ ಪಿಕಲ್ಸ್‌ನ ಆವರಣದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಪ್ರಯುಕ್ತ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಓಂ ಪಿಕಲ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಾರ್ಮಿಕ ಮತ್ತು ಮಾಲಿಕರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಕಾರ್ಮಿಕರು ದುಡಿದಾಗ ಮಾತ್ರ ಮಾಲಿಕನು ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯ. ದೇಶದ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಅಪಾರವಾಗಿದೆ. ಕಾರ್ಮಿಕರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಮಾಲಿಕರು ಸ್ಪಂದಿಸಬೇಕು. ಕಾರ್ಮಿಕರು ಆರೋಗ್ಯ, ಶಿಕ್ಷಣ, ವಸತಿಗೆ ಸಂಬಂಧಿಸಿದಂತೆ ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಮಸ್ಯೆಗಳ ಪರಿಹಾರಕ್ಕೆ ಮಾಲಿಕರು ಮುಂದಾಗಬೇಕು ಎಂದ ಅವರು ಮಾಲಿಕರು ಕಾರ್ಮಿಕರ ಮೇಲೆ ನಂಬಿಕೆ, ವಿಶ್ವಾಸ ಹೊಂದಿರುತ್ತಾರೆ. ಅವರ ನಡುವಿನ ಸಂಬಂಧ ವಿಶ್ವಾಸಾರ್ಹತೆಯಿಂದ ಕೂಡಿರಬೇಕು ಎಂದರು. ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ೧೮೮೬ ರಿಂದ ೧೯೨೬ರವರೆಗೆ ಅವಿರತವಾಗಿ ಹೋರಾಡುತ್ತಾ ಬಂದಿದ್ದು, ಅವರ ಹೋರಾಟದ ಫಲಶೃತಿಯಾಗಿ ಇಂದು ದೇಶಾದ್ಯಂತ ಕಾರ್ಮಿಕ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.ಅಸಂಘಟಿತ ಕಾರ್ಮಿಕರ ಸಂಘಟನೆಯ ರಾಜ್ಯಾಧ್ಯಕ್ಷ ಕೇಶವಮೂರ್ತಿ ಪೇಟ್ಕರ್ ಮಾತನಾಡಿ, ಕಾರ್ಮಿಕರು ತಮ್ಮ ಜೀವನದ ಭದ್ರತೆಗಾಗಿ ಹೋರಾಟದ ಮೂಲಕ ಸವಲತ್ತು ಗಳನ್ನು ಪಡೆಯಬೇಕಾಗಿದೆ. ಅವರು ಮಾಡುವ ಕೆಲಸದಲ್ಲಿ ಕೀಳರಿಮೆ ಹೊಂದಿರಬಾರದು ಎಂದ ಅವರು, ಮಾಲಿಕರು ಕಾರ್ಮಿಕರ ಜೀವನವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದಾಗ ಮಾತ್ರ ಕಾರ್ಮಿಕರ ಬದುಕು ಹಸನಾಗಲು ಸಾಧ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಓಂ ಪಿಕಲ್‌ನ ಮಾಲಿಕ ಗಣೇಶ್ ವಹಿಸಿ ಮಾತನಾಡಿ, ಸೊರಬ ತಾಲೂಕಿನಲ್ಲಿ ಅತಿ ಹೆಚ್ಚು ಕಾರ್ಮಿಕರು ಇದ್ದು ಅವರ ಶ್ರೇಯೋಭಿವೃದ್ಧಿಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಬೇಕು ಎಂದರು.ಈ ಸಂದರ್ಭದಲ್ಲಿ ಕಾರ್ಮಿಕರಾದ ರೇಣುಕಾ, ಪುಷ್ಪ, ಕಲಾವತಿ, ಮಂಜು, ವಿಜಯ್, ಗುಪ್ತ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಲಕ್ಷ್ಮಣ ಸಾಗರ್, ಶ್ರೀಧರ್ ಮೂರ್ತಿ ನಡಹಳ್ಳಿ, ಗಣಪತಿ ಓಟೂರು, ರೇಷ್ಮಾ ಡಿಸೋಜಾ, ಸಂಪತ್ ಕುಮಾರ್, ವಿನಯ್ ಸೇರಿದಂತೆ ಮೊದಲಾದವರಿದ್ದರು. ಕಲಾವತಿ ಪ್ರಾರ್ಥಿಸಿದರು, ರಾಘವೇಂದ್ರ ನಿರೂಪಿಸಿದರು, ಮಂಜುನಾಥ್ ಸ್ವಾಗತಿಸಿದರು.ಕಾರ್ಮಿಕರು ದೇಶದ ಆಸ್ತಿ, ಅವರ ರಕ್ಷಣೆ ಸರ್ಕಾರದ ಹೊಣೆ: ಸಿದ್ದಪ್ಪಸಾಗರ: ಕಾರ್ಮಿಕರು ದೇಶದ ಆಸ್ತಿಯಾಗಿದ್ದು ಅವರನ್ನು ಸಂರಕ್ಷಣೆ ಮಾಡಬೇಕಾದದ್ದು ಎಲ್ಲ ಸರ್ಕಾರಗಳ ಜವಾಬ್ದಾರಿ ಎಂದು ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷ ಕೆ.ಸಿದ್ದಪ್ಪ ಅಭಿಪ್ರಾಯಪಟ್ಟರು.ಕಾರ್ಮಿಕರ ದಿನಾಚರಣೆ ಅಂಗವಾಗಿ ಪಟ್ಟಣದ ಜೆ.ಪಿ.ನಗರದಲ್ಲಿ ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಮಿಕ ಮಂಡಳಿ ಮೂಲಕ ಅನೇಕ ಯೋಜನೆ ಜಾರಿಗೆ ತಂದಿದ್ದು, ಕಾರ್ಮಿಕರು ಇದರ ಮಾಹಿತಿ ಪಡೆದು ಸೌಲಭ್ಯ ಪಡೆಯುವತ್ತ ಗಮನ ಹರಿಸಬೇಕು ಎಂದು ಹೇಳಿದರು.ಈ-ಶ್ರಮ ಕಾರ್ಡ್ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಇದು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಪೂರಕವಾಗಿದೆ. ೬೦ ವರ್ಷ ದಾಟಿದ ಕಾರ್ಮಿಕರಿಗೆ ಮಾಸಿಕ ೩ ಸಾವಿರ ರು. ಪಿಂಚಣಿ ನೀಡಲಾಗುತ್ತದೆ. ಪೆನ್ಸನ್ ಪಡೆಯುವ ಕಾರ್ಮಿಕ ಮೃತಪಟ್ಟರೆ ಅವಲಂಬಿತರಿಗೆ ಪೆನ್ಸನ್ ಹಣ ಸಿಗುತ್ತದೆ. ಕಾರ್ಮಿಕ ಮೃತಪಟ್ಟರೆ ೨ ಲಕ್ಷ ರು. ಪರಿಹಾರದ ಜೊತೆಗೆ ಶವ ಸಂಸ್ಕಾರಕ್ಕೆ ೧೦ ಸಾವಿರ ರು. ಸಹಾಯಧನ ನೀಡಲಾಗುತ್ತದೆ. ಕಾರ್ಮಿಕರಿಗೆ ಸಾಕಷ್ಟು ಯೋಜನೆಗಳಿದ್ದಾಗ್ಯೂ ಅದನ್ನು ಸರಿಯಾಗಿ ತಲುಪಿಸುವ ಕೆಲಸ ಮಾಡುತ್ತಿಲ್ಲ. ಇಲಾಖೆಯ ಅಧಿಕಾರಿಗಳು ಅಸಂಘಟಿತ ಕಾರ್ಮಿಕರ ಬಗ್ಗೆ ನಿರಾಸಕ್ತಿ ವಹಿಸಬಾರದು ಎಂದು ಹೇಳಿದರು.
ಅಸಂಘಟಿತ ಕಾರ್ಮಿಕ ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಿ ಬೇಸೂರು ಮಾತನಾಡಿ, ಅಸಂಘಟಿತ ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ಕೊಡಿಸಲು ನಮ್ಮ ಘಟಕ ನಿರಂತರ ಪ್ರಯತ್ನ ನಡೆಸುತ್ತಿದೆ. ಕಾರ್ಮಿಕರ ಬದುಕು ಹಸನುಗೊಳಿಸುವ ಯೋಜನೆಗಳು ನಿರರ್ಥಕವಾಗಲು ಬಿಡಬಾರದು ಎಂದು ಹೇಳಿದರು.ಹಿರಿಯ ಕಾರ್ಮಿಕರಾದ ಪ್ರಕಾಶ್ ಆರ್., ಕೆಂಚಪ್ಪ, ದುರ್ಗಮ್ಮ, ಸರಸಮ್ಮ, ಕುಪ್ಪಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ನಗರಸಭೆ ಮಾಜಿ ಸದಸ್ಯೆ ಸಬಾನಾ ಬಾನು, ಘಟಕದ ಉಪಾಧ್ಯಕ್ಷ ಉಮೇಶ್ ಸೂರನಗದ್ದೆ, ಇಂಧುಮತಿ, ಗೋಪಾಲ್ ಹಾಜರಿದ್ದರು.