ಸಾರಾಂಶ
ಕ್ಷೇತ್ರದ ಜನತೆ ಗ್ಯಾರಂಟಿಗಳಿಗೆ ಮಾರುಹೋಗದೇ ನನಗೆ ಮತ ಹಾಕಿ ಗೆಲ್ಲಿಸಿದರೆ ನೆಲಮಂಗಲ ಕ್ಷೇತ್ರದಲ್ಲಿ ಇಎಸ್‌ಐ ಆಸ್ಪತ್ರೆ, ಎತ್ತಿನಹೊಳೆ ನೀರು ತಂದು ಕೆರೆಗಳಿಗೆ ತುಂಬಿಸುವ ಕೆಲಸದ ಜೊತೆಗೆ ಶಿವಗಂಗೆ ಬೆಟ್ಟಕ್ಕೆ ರೋಪ್ ವೇ ಮಾಡಿಯೇ ತೀರುತ್ತೇನೆ - ಡಾ.ಕೆ.ಸುಧಾಕರ್
ದಾಬಸ್‌ಪೇಟೆ : ಕ್ಷೇತ್ರದ ಜನತೆ ಗ್ಯಾರಂಟಿಗಳಿಗೆ ಮಾರುಹೋಗದೇ ನನಗೆ ಮತ ಹಾಕಿ ಗೆಲ್ಲಿಸಿದರೆ ನೆಲಮಂಗಲ ಕ್ಷೇತ್ರದಲ್ಲಿ ಇಎಸ್‌ಐ ಆಸ್ಪತ್ರೆ, ಎತ್ತಿನಹೊಳೆ ನೀರು ತಂದು ಕೆರೆಗಳಿಗೆ ತುಂಬಿಸುವ ಕೆಲಸದ ಜೊತೆಗೆ ಶಿವಗಂಗೆ ಬೆಟ್ಟಕ್ಕೆ ರೋಪ್ ವೇ ಮಾಡಿಯೇ ತೀರುತ್ತೇನೆ ಎಂದು ಎನ್‌ಡಿಎ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.
ದಾಬಸ್‌ಪೇಟೆ ಪಟ್ಟಣದ ಹೊರವಲಯದ ಮೈದಾನದಲ್ಲಿ ಆಯೋಜಿಸಿದ್ದ ಸಮನ್ವಯ ಸಭೆ ಹಾಗೂ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೇಶದ ಜನತೆಗೆ ಶಾಶ್ವತವಾದ ಬದುಕು ಕಟ್ಟಿಕೊಡುವ ಕೆಲಸ ಕೇಂದ್ರ ಸರ್ಕಾರ 10 ವರ್ಷದಲ್ಲಿ ಮಾಡಿದ್ದರೆ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ತಾತ್ಕಾಲಿಕ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷವೂ ರಕ್ಷಾರಾಮಯ್ಯನವರ ಬ್ಯಾಂಕ್ ಅಕೌಂಟ್ ನೋಡಿ ಕಾಂಗ್ರೆಸ್ ಟಿಕೆಟ್ ನೀಡಿದೆ. ಪ್ರಧಾನಿ ಹಾಗೂ ಮಾಜಿ ಪ್ರಧಾನಿಗಳ ಸಮಾಗಮದಿಂದ ಹೊಸ ರಾಜಕೀಯ ಇತಿಹಾಸ ರಾಜ್ಯದಲ್ಲಿ ಪ್ರಾರಂಭವಾಗಿದೆ. ಕೇಂದ್ರ ಸರ್ಕಾರದಲ್ಲಿ 11 ಕೋಟಿ ಮಹಿಳೆಯರಿಗೆ ಶೌಚಾಲಯ, 10 ಕೋಟಿ ಮಹಿಳೆಯರಿಗೆ ಉಜ್ವಲ ಗ್ಯಾಸ್ ನೀಡಿದೆ, ರೈತರಿಗೆ ಕೃಷಿ ಸಮ್ಮಾನ್ ಯೋಜನೆಯಡಿ 6 ಸಾವಿರ ನೀಡುತ್ತಿದೆ. ಫಸಲ್ ಭೀಮಾ ಯೋಜನೆ ಚಿಕ್ಕಬಳ್ಳಾಪುರ ದ್ರಾಕ್ಷಿ ಬೆಳೆಗಾರರ ಜೀವನವನ್ನೇ ಬದಲಿಸಿದ್ದು ಮೈತ್ರಿ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿ ನಿಮ್ಮ ಮನೆಯ ಮಗನಾಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ ಎಂದರು.
ಮಾಜಿ ಶಾಸಕ ಎಂ.ವಿ.ನಾಗರಾಜು ಮಾತನಾಡಿ, ನಮ್ಮ ಅಭ್ಯರ್ಥಿಗೆ 50 ಸಾವಿರ ಲೀಡ್ ಅನ್ನು ಕಾರ್ಯಕರ್ತರು ನೀಡಬೇಕು, ಅಭಿವೃದ್ಧಿಗಾಗಿ ಮೈತ್ರಿ ಅಭ್ಯರ್ಥಿ ಗೆಲ್ಲಿಸಬೇಕು, ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಡಾ.ಕೆ.ಸುಧಾಕರ್ ಪ್ರಮುಖ ಸ್ಥಾನಕ್ಕೆ ಹೋಗುತ್ತಾರೆ. ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ 40 ಸಂಸದರು ಆಯ್ಕೆಯಾಗವುದು ಕಷ್ಟ ಇದೆ, ಆದ್ದರಿಂದ ಮೈತ್ರಿ ಅಭ್ಯರ್ಥಿ ಮೊದಲ ಆದ್ಯತೆಯಾಗಬೇಕು ಎಂದರು.
ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ನಮ್ಮ ಪಕ್ಷದ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಜೊತೆಗೂಡಿ ನೆಲಮಂಗಲ ಅಭಿವೃದ್ಧಿಗೆ ಮೈತ್ರಿ ಪಕ್ಷವನ್ನು ಬೆಂಬಲಿಸಿ ಮತ ಹಾಕುವಂತೆ ಪ್ರಚಾರ ಮಾಡಬೇಕು ಎಂದರು.
ಸೇರ್ಪಡೆ:
ಬಿಜೆಪಿ-ಜೆಡಿಎಸ್ ಸಮ್ಮಿಲನದ ಭಾಗವಾಗಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ರಾಯರಪಾಳ್ಯ ಮಹೇಶ್ ನೇತೃತ್ವದಲ್ಲಿ ಹೋಬಳಿಯ ಸುಮಾರು 50ಕ್ಕೂ ಕಾರ್ಯಕರ್ತರು ಅನ್ಯಪಕ್ಷಗಳನ್ನು ತೊರೆದು ಮೈತ್ರಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಮಾಜಿ ಎಂಎಲ್‌ಸಿ ಇ.ಕೃಷ್ಣಪ್ಪ, ತಾಲೂಕು ಅಧ್ಯಕ್ಷರಾದ ಜಗದೀಶ್ ಚೌಧರಿ ತಿಮ್ಮರಾಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ ಸಪ್ತಗಿರಿ ಶಂಕರ್ ನಾಯಕ್, ಜೆಡಿಎಸ್ ಹೋಬಳಿ ಅಧ್ಯಕ್ಷ ಮೋಹನ್‌ಕುಮಾರ್, ಯುವಘಟಕದ ವೀರಸಾಗರ ಮಂಜುನಾಥ್, ಬಿಜೆಪಿ ಹೋಬಳಿ ಅಧ್ಯಕ್ಷ ಮುರಳೀಧರ್, ಕರವೇ ಮಂಜುನಾಥ್, ಭವಾನಿ ಶಂಕರ್ ಬೈರೇಗೌಡ್ರು, ಮಾಚನಹಳ್ಳಿ ಜಯಣ್ಣ, ಉಮಾಶಂಕರ್, ಪಂಚಾಕ್ಷರಿ, ಪರಮೇಶ್, ಗಂಗಣ್ಣ, ಪುಟ್ಟಗಂಗಯ್ಯ, ಯುವ ಮೋರ್ಚಾ ಮಹೇಶ್, ಬಿ.ಎಂ.ಶ್ರೀನಿವಾಸ್, ಜಗಜ್ಯೋತಿ ಬಸವೇಶ್ವರ, ಮಹಿಳಾ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು. ಫೋಟೋ 2 :
ದಾಬಸ್‌ಪೇಟೆ ಪಟ್ಟಣದ ಹೊರವಲಯದ ಮೈದಾನದಲ್ಲಿ ಆಯೋಜಿಸಿದ್ದ ಎನ್‌ಡಿಎ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರನ್ನು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಸನ್ಮಾನಿಸಿದರು.