ರೋಟರಾಕ್ಟ್ ಸಂಸ್ಥೆಯು ಕೇವಲ ಯುವಕರ ಅನುಕೂಲಕ್ಕಾಗಿ ಸ್ಥಾಪಿಸಿದ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ ಎಂದು ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷ ಬಿ.ಎನ್. ರವೀಂದ್ರ ಹೇಳಿದರು.

ಮಂಗಳೂರು: ರೋಟರಾಕ್ಟ್ ಸಂಸ್ಥೆಯು ಕೇವಲ ಯುವಕರ ಅನುಕೂಲಕ್ಕಾಗಿ ಸ್ಥಾಪಿಸಿದ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ಯುವಕರ ನಾಯಕತ್ವ ಗುಣಗಳ ಬೆಳವಣಿಗೆ, ವ್ಯಕ್ತಿತ್ವ ವಿಕಸನಗಳನ್ನು ರೂಪಿಸುವ ಸಂಸ್ಥೆಯಾಗಿದ್ದು, ಯುವಕರು ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸಮಾಜ ಸೇವಾ ಚಟುವಟಿಕೆಗಳಲ್ಲಿ ಒಗ್ಗಟ್ಟಾಗಿ ಶ್ರಮಿಸಿ ಯಶಸ್ಸು ಸಾಧಿಸಬೇಕು ಎಂದು ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷ ಬಿ.ಎನ್. ರವೀಂದ್ರ ಹೇಳಿದರು.

ಅವರು ನಗರದ ಖಾಸಗಿ ಹೋಟೇಲ್ ಸಭಾಂಗಣದಲ್ಲಿ ನಡೆದ ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.ಸಂಸ್ಥೆಯ ಸಭಾಪತಿ ಡಾ.ದೇವದಾಸ್ ರೈ ನೂತನ ತಂಡಕ್ಕೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.ನೂತನ ಅಧ್ಯಕ್ಷ ರಕ್ಷಣ್ ಮಾತನಾಡಿ, ಅಧಿಕಾರಾವಧಿಯಲ್ಲಿ ಆರೋಗ್ಯ ರಕ್ಷಣೆ, ಶಿಕ್ಷಣ ಕ್ಷೇತ್ರ, ಪರಿಸರ ಸಂರಕ್ಷಣೆ, ವಸತಿ ಮತ್ತು ಸಮಾಜದ ಮೂಲಭೂತ ಸೌಕರ್ಯಗಳ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸದಸ್ಯರ ಸಹಕಾರ ಕೋರಿದರು.

ನೂತನ ಸದಸ್ಯರಾದ ದೀಪ್ತಿ, ಹರ್ಷಿತಾ, ನಿಶಾಂತ್ ಮತ್ತು ರಂಜನ್‌ ಅವರನ್ನು ಸಂಸ್ಥೆಗೆ ಸೇರ್ಪಡಿಸಲಾಯಿತು. ಸಂಸ್ಥೆಯ ಸ್ಥಾಪನಾ ಅಧ್ಯಕ್ಷ ಜಯಪ್ರಕಾಶ್ ರಾವ್‌ ಸಂಸ್ಥೆ ಮೂರು ದಶಕಗಳಲ್ಲಿ ಸಾಧಿಸಿದ ಸಾಧನೆಗಳ ಮಾಹಿತಿ ನೀಡಿದರು.

ನಿರ್ಗಮನ ಅಧ್ಯಕ್ಷ ಅಕ್ಷಯ್ ರೈ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ವಿವೇಕ್ ರಾವ್ ವಾರ್ಷಿಕ ವರದಿ ಮಂಡಿಸಿದರು. ಅಲ್ಮಾ ಪಿಂಟೋ ಮತ್ತು ಡೆರಿಲ್ ಸ್ಟೀವನ್ ಡಿಸೋಜ ನಿರೂಪಿಸಿದರು. ನೂತನ ಕಾರ್ಯದರ್ಶಿ ಮುಕೇಶ್ ವಂದಿಸಿದರು.

ಮಣಿಕಂಠ (ಸಂಸ್ಥೆ ಸೇವೆ), ಶಮನ್ (ವೃತ್ತಿಪರ ಸೇವೆ), ವಿವೇಕ್ ರಾವ್ (ಅಂತಾರಾಷ್ಟ್ರೀಯ ಸೇವೆ), ಶ್ರದ್ಧಾ ಕೇಶವ್ (ಸಮುದಾಯ ಸೇವೆ), ಕದ್ರಿ ವಿಕ್ರಮ್ (ಯುವಜನ ಸೇವೆ), ಪ್ರತೀಕ್ ಶೆಟ್ಟಿ (ಕೋಶಾಧಿಕಾರಿ), ಮಹಮ್ಮದ್ ಮನ್ಸೂರ್ (ದಂಡಾಧಿಕಾರಿ)ಇವರು ನಿರ್ದೇಶಕರಾಗಿ ನೇಮಕಗೊಂಡರು.