ರೋಟರಿ ಸಂಸ್ಥೆಯು ಸಮಾಜ ಸೇವಾ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ತಮ್ಮ ಸುತ್ತಮುತ್ತಲ ವಾತಾವರಣವನ್ನು ಹಸನುಗೊಳಿಸುವ ಸ್ವಚ್ಛ ಸಮಾಜ ನಿರ್ಮಾಣಕ್ಕೆ ಮಹತ್ವದ ಸ್ಥಾನ ನೀಡಿದೆ ಎಂದು ಜಿಲ್ಲಾ ರಾಜ್ಯಪಾಲ ಪಿ.ಕೆ. ರಾಮಕೃಷ್ಣ ಹೇಳಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ರೋಟರಿ ಸಂಸ್ಥೆಯು ಸಮಾಜ ಸೇವಾ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ತಮ್ಮ ಸುತ್ತಮುತ್ತಲ ವಾತಾವರಣವನ್ನು ಹಸನುಗೊಳಿಸುವ ಸ್ವಚ್ಛ ಸಮಾಜ ನಿರ್ಮಾಣಕ್ಕೆ ಮಹತ್ವದ ಸ್ಥಾನ ನೀಡಿದೆ ಎಂದು ಜಿಲ್ಲಾ ರಾಜ್ಯಪಾಲ ಪಿ.ಕೆ. ರಾಮಕೃಷ್ಣ ಹೇಳಿದರು.ಕುಶಾಲನಗರದ ರೋಟರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಪಂಚದ ದೇಶಗಳ ಮಟ್ಟದಲ್ಲಿ ಸ್ವಚ್ಛ ಪರಿಸರ ನಿರ್ಮಾಣದಲ್ಲಿ ಭಾರತ ಉತ್ತಮ ಸ್ಥಾನ ಹೊಂದಿದೆ. ಕುಶಾಲನಗರದ ರೋಟರಿ ‘ಕ್ಲೀನ್ ಸಿಟಿ’ ಘೋಷವಾಕ್ಯದ ಮೂಲಕ ನಗರದ ಪ್ರವೇಶ ಭಾಗದಿಂದ ಪುರಸಭೆ ವ್ಯಾಪ್ತಿ ಮತ್ತು ಪ್ರವಾಸಿ ತಾಣಗಳಾದ ದುಬಾರೆ, ಚಿಕ್ಲಿಹೊಳೆ, ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ ವ್ಯಾಪ್ತಿಯಲ್ಲಿ ಕಸ ನಿರ್ವಹಣೆಗಾಗಿ ಉತ್ತಮ ವ್ಯವಸ್ಥೆ ಮಾಡಿದ್ದಾರೆ. ಕಸ ನಿರ್ವಹಣೆಗಾಗಿ ಉತ್ತಮ ಯೋಜನೆಯನ್ನು ರೋಟರಿ ಸುವರ್ಣ ಸಂಭ್ರಮ ಸಂದರ್ಭದಲ್ಲಿ ಪುರಸಭೆ ಸಹಯೋಗದಲ್ಲಿ ದಾನಿಗಳ ಸಹಕಾರದೊಂದಿಗೆ ಯಶಸ್ವಿ ಕಾರ್ಯಕ್ರಮವನ್ನು ಮಾಡಲಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಕುಶಾಲನಗರ ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯ ಸದಸ್ಯರು, ಕುಶಾಲನಗರ ಪುರಸಭೆ, ಕ್ಷೇತ್ರದ ಶಾಸಕರು ಮತ್ತು ಎಸ್ಎಲ್ಎನ್ ಸಂಸ್ಥೆ ಸೇರಿದಂತೆ ಹಲವು ಸಂಘ ಸಂಸ್ಥೆಗಳು ರೋಟರಿಯ ಸುವರ್ಣ ಸಂಭ್ರಮದ ಯೋಜನೆ ಯಶಸ್ಸಿಗೆ ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಎಲ್ಲರಿಗೂ ಕೃತಜ್ಞತೆಗಳು. ಕಾವೇರಿ ನದಿಗೆ ಕಸ ಮತ್ತಿತರ ವಸ್ತುಗಳನ್ನು ಎಸೆಯದಂತೆ ಎತ್ತರದ ಗ್ರಿಲ್ ನಿರ್ಮಾಣ ಮಾಡಿ ರೋಟರಿ ಸಂಸ್ಥೆ ಉತ್ತಮ ಕೆಲಸ ಮಾಡಿದೆ ಎಂದರು.
ಈ ಸಂದರ್ಭ ವಿವೇಕಾನಂದ ಯೂತ್ ಮೂವ್‌ಮೆಂಟ್ ನ ನಿರ್ವಾಹಕರಾದ ಸುನಿತಾ ಅವರ ಕಾರ್ಯದಕ್ಷತೆ, ಸೇವಾ ಯೋಜನಾ ಕಾರ್ಯಕ್ರಮವನ್ನು ಗುರುತಿಸಿ ಗೌರವಿಸಲಾಯಿತು. ರೋಟರಿ ಸಂಸ್ಥೆಯ ಸದಸ್ಯರಾಗಿರುವ ಸಂತೋಷ್ ಲಕ್ಷ್ಮಣ್ ಸುಮಾರು 53 ಬಾರಿ ರಕ್ತದಾನ ಮಾಡುವ ಮೂಲಕ ಸಮಾಜ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ರೋಟರಿ ಉಪ ರಾಜ್ಯಪಾಲ ಉಲ್ಲಾಸ್ ಕೃಷ್ಣ, ರುದ್ರೇಶ್ ಪಟೇಲ್, ಎಚ್.ಪಿ. ಮಂಜುನಾಥ್, ಎಸ್.ಕೆ. ಸತೀಶ್, ಎಂ.ಡಿ. ರಂಗಸ್ವಾಮಿ, ಮಹೇಶ್ ನಾಲ್ವಡೆ, ಡಾ. ಹರಿ ಶೆಟ್ಟಿ, ಡಾ. ಧರಣೇಂದ್ರ, ಎ.ಎ. ಚೆಂಗಪ್ಪ, ರಾಣಿ ಉಲ್ಲಾಸ್, ಆರತಿ ಶೆಟ್ಟಿ, ರೋಟರಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು.