ಹಿರಿಯೂರು ನಗರದ ಗುರುಭವನದಲ್ಲಿ ಶಾಲಾಶಿಕ್ಷಣ ಇಲಾಖೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಹುಲುಗಲಕುಂಟೆ ಗ್ರಾಮದ ಸಮೀಪ 40 ಕೋಟಿ ರು. ವೆಚ್ಚದಲ್ಲಿ ಕಾರ್ಮಿಕ ಶಾಲೆ ಆರಂಭಿಸಲು ಮಂಜೂರಾತಿ ದೊರೆತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ಗುರುಭವನದಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಮತ್ತು ಹಿರಿಯೂರು ತಾಲೂಕಿನ ಪ್ರಾಚೀನ ಸ್ಮಾರಕಗಳು ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

2008ರಲ್ಲಿ ಕ್ಷೇತ್ರದ ಶಾಸಕನಾದ ಸಮಯದಲ್ಲಿ ದೇವರಕೊಟ್ಟ ಗ್ರಾಮದ ಸಮೀಪ ವಸತಿ ಶಿಕ್ಷಣ ಸಮುಚ್ಛಯ ಪ್ರಾರಂಭಿಸಿದ್ದರಿಂದ ಎಲ್ಲಾ ಜಾತಿ, ವರ್ಗದ ಬಡಮಕ್ಕಳಿಗೆ ಗುಣಮಟ್ಟದ ಉಚಿತ ಶಿಕ್ಷಣ ಪಡೆಯಲು ಅನುಕೂಲವಾಯಿತು. ಈಗ ಕಾರ್ಮಿಕ ವಸತಿ ಶಾಲೆ ಆರಂಭಗೊಂಡರೆ ದುಡಿಯುವ ವರ್ಗದವರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಲಿದ್ದು ಭವಿಷ್ಯದಲ್ಲಿ ಅವರೆಲ್ಲ ಸಮಾಜದ ಮುಖ್ಯ ವಾಹಿನಿಗೆ ಬರಲು ನೆರವಾಗಲಿದೆ.ನನ್ನ ಅಧಿಕಾರದ ಅವಧಿಯಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಸದಾ ಒತ್ತು ನೀಡುತ್ತಾ ಬಂದಿದ್ದೇನೆ.

ಪ್ರಾಥಮಿಕ ಶಾಲಾ ಹಂತದಲ್ಲಿ ಶಿಕ್ಷಕರು ಮಕ್ಕಳ ಓದಿನ ಜೊತೆಗೆ ಅವರಲ್ಲಿನ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಬೇಕು. ವಿಶೇಷವಾಗಿ ಬಡ ಮಕ್ಕಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಸಿಗುವುದು ಕಷ್ಟ. ಹೀಗಾಗಿ ಸರ್ಕಾರ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮವನ್ನು ಆರಂಭಿಸಿತು. ಮಕ್ಕಳು ಓದಿನ ಕಡೆ ಹೆಚ್ಚು ಗಮನ ಕೊಡಬೇಕು. ಬಿಡುವಿದ್ದಾಗ ಸಂಗೀತ, ನೃತ್ಯ, ಜಾನಪದ ಕಲೆ, ನಾಟಕದ ಬಗ್ಗೆ ಅನುಭವ ಗಳಿಸಿಕೊಳ್ಳಬೇಕು. ಮನೆಯಲ್ಲಿ ಮತ್ತು ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಓದಿನ ಪರಿಸರ ಸೃಷ್ಟಿಸಿಕೊಡುವುದು ಶಿಕ್ಷಕರ ಮತ್ತು ಪೋಷಕರ ಜವಾಬ್ದಾರಿಯಾಗಿದೆ. ಮಕ್ಕಳ ದೈನಂದಿನ ಚಟುವಟಿಕೆಗಳ ಬಗ್ಗೆ ಪೋಷಕರು ಸದಾ ಗಮನ ಹರಿಸಬೇಕು. ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಬೇಕು. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಮ್ಮ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆಯುವಂತಾಗಬೇಕು. ಆ ನಿಟ್ಟಿನಲ್ಲಿ ಶಿಕ್ಷಕರ ಮತ್ತು ಪೋಷಕರ ಜವಾಬ್ದಾರಿ ಹೆಚ್ಚಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಮಾತನಾಡಿ, ತಾಲೂಕಿನ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಪ್ರಾಚೀನ ಸ್ಮಾರಕಗಳು ಪುಸ್ತಕವನ್ನು 35 ಶಿಕ್ಷಕರ ಸಹಕಾರದೊಂದಿಗೆ ಸಂಶೋಧನೆ ನಡೆಸಿ ಹೊರತರಲಾಗಿದೆ. ನಮ್ಮಲ್ಲಿನ ಐತಿಹಾಸಿಕ ಸ್ಮಾರಕಗಳು ನಶಿಸಬಾರದು. ನಮ್ಮ ಮಕ್ಕಳಿಗೆ ತಮ್ಮೂರಿನ ಇತಿಹಾಸ ತಿಳಿದಿರಬೇಕು ಎಂಬುದು ನಮ್ಮೆಲ್ಲರ ಆಶಯ. 91 ಗ್ರಾಮ, 309 ಛಾಯಾಚಿತ್ರಗಳನ್ನು ಒಳಗೊಂಡಿರುವ 228 ಪುಟದ ಪುಸ್ತಕವನ್ನು ಅಚ್ಚು ಹಾಕಿಸುವುದು ಸವಾಲಿನ ಕೆಲಸವಾಗಿತ್ತು. ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸಚಿವ ಸುಧಾಕರ್ ಅವರು ಪುಸ್ತಕ ಅಚ್ಚು ಹಾಕಿಸುವ ಸಂಪೂರ್ಣ ಜವಾಬ್ದಾರಿ ಹೊತ್ತ ಕಾರಣಕ್ಕೆ ತಾಲೂಕಿನ ಇತಿಹಾಸವನ್ನು ದಾಖಲಿಸುವ ಸುಂದರ ಪುಸ್ತಕ ಹೊರಬಂದಿದೆ ಎಂದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್. ಮಂಜುನಾಥ್, ಅಭಿವೃದ್ಧಿ ವಿಭಾಗದ ಉಪನಿರ್ದೇಶಕ ಎಂ.ನಾಸಿರುದ್ದೀನ್, ಆರ್.ರಮೇಶ್, ವಿ.ಭಾಗ್ಯ, ಕೆ.ಆರ್. ತಿಪ್ಪೇಸ್ವಾಮಿ, ಎಂ.ಲೋಹಿತ್, ಎಚ್.ಅಶೋಕ್, ಲೋಕಮ್ಮ, ಶಿವಲಿಂಗಪ್ಪ, ಆರ್.ಟಿ.ಎಸ್.ಶ್ರೀನಿವಾಸ್, ಮಹೇಶ್ವರರೆಡ್ಡಿ, ಆರ್.ಟಿ. ರವೀಂದ್ರನಾಯ್ಕ, ಮುಖಂಡರಾದ ಖಾದಿ ರಮೇಶ್, ಈರಲಿಂಗೇಗೌಡ, ಕಂದಿಕೆರೆ ಸುರೇಶ್ ಬಾಬು,ಈ. ಮಂಜುನಾಥ್, ಜಿ.ಎಲ್. ಮೂರ್ತಿ, ಕಲ್ಲಟ್ಟಿ ಹರೀಶ್, ದಿಂಡಾವರ ಮಹೇಶ್, ಜ್ಞಾನೇಶ್, ವಿ. ಶಿವಕುಮಾರ್, ಸಿ ಶಿವಾನಂದ್ ಮುಂತಾದವರು ಉಪಸ್ಥಿತರಿದ್ದರು.