ಭಾರತ ದೇಶ ಕೇವಲ ಕಲ್ಲು, ಮಣ್ಣು, ಭೂಮಿ ಹೊಂದಿರುವ ಜಡ ವಸ್ತುವಲ್ಲ. ಜನ್ಮನೀಡಿದ ತಾಯಿಗೆ ಸರಿಸಮಾನವಾಗಿರುವ ಭಾರತಾಂಭೆಯನ್ನು ಪೂಜಿಸುವ, ಪ್ರೀತಿಸುವ ಬಹು ಮಹತ್ವದ ಕಾರ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತೊಡಗಿಸಿಕೊಂಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಶಿಕಾರಿಪುರ: ಭಾರತ ದೇಶ ಕೇವಲ ಕಲ್ಲು, ಮಣ್ಣು, ಭೂಮಿ ಹೊಂದಿರುವ ಜಡ ವಸ್ತುವಲ್ಲ. ಜನ್ಮನೀಡಿದ ತಾಯಿಗೆ ಸರಿಸಮಾನವಾಗಿರುವ ಭಾರತಾಂಭೆಯನ್ನು ಪೂಜಿಸುವ, ಪ್ರೀತಿಸುವ ಬಹು ಮಹತ್ವದ ಕಾರ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತೊಡಗಿಸಿಕೊಂಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಭಾನುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷಾಚರಣೆ ಅಂಗವಾಗಿ ಮನೆಮನೆಗೆ ರಾ.ಸ್ವಂ.ಸೇ ಸಂಘದ ವಿಚಾರಧಾರೆಯ ಕರಪತ್ರ ಪುಸ್ತಕ ವಿತರಣೆಯ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ರಾಷ್ಟ್ರೀಯ ವಿಚಾರಧಾರೆಗಳನ್ನು ಹೊಂದಿರುವ ರಾ.ಸ್ವಂ.ಸೇ ಸಂಘ ಪ್ರತಿಯೊಬ್ಬರಲ್ಲಿ ರಾಷ್ಟ್ರ ಪ್ರಜ್ಞೆಯನ್ನು ಜಾಗೃತಿಗೊಳಿಸಲು ಪ್ರಯತ್ನಿಸುತ್ತಿದ್ದು, ಈ ದಿಸೆಯಲ್ಲಿ ಶತಮಾನೋತ್ಸವದ ಅಂಗವಾಗಿ ಸಂಘದ ಮೂಲಕ ಪ್ರತಿಯೊಂದು ಮನೆಮನೆಗೆ ಸಂಘದ ಧ್ಯೇಯೋದ್ದೇಶ, ರಾಷ್ಟ್ರೀಯ ವಿಚಾರಧಾರೆಗಳನ್ನು ಅಂಜದೆ ತಲುಪಿಸಲು ಸಂಘದ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ ಎಂದರು.ದೇಶ ಕಾಯುವ ಯೋಧ ಜಾತಿ, ಧರ್ಮದ ಭೇದವಿಲ್ಲದೆ ಪ್ರತಿಯೊಬ್ಬರ ನೆಮ್ಮದಿಯ ಬದುಕಿಗಾಗಿ ತನ್ನ ಜೀವನವನ್ನು ಮೀಸಲಿಟ್ಟಿದ್ದು, ಇದೇ ಮಾದರಿಯಲ್ಲಿ ರಾ.ಸ್ವಂ.ಸೇ ಸಂಘ ಶ್ರಮಿಸುತ್ತಿದೆ. ಪ್ರತಿಯೊಬ್ಬರೂ ಸಂಘದ ವಿಚಾರಧಾರೆಗಳಲ್ಲಿ ಪಾಲ್ಗೊಳ್ಳುವ ಮೂಲಕ ದೇಶ ಸೇವೆಗೆ ದೊರೆತ ಅವಕಾಶ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಸಮರ್ಪಣೆಗೈದ ಹಲವರ ರಕ್ತಸಿಕ್ತ ಬದುಕು, ಹುತಾತ್ಮರಾದವರ ಜೀವನದ ಮೌಲ್ಯವನ್ನು ಜನತೆಗೆ ತಲುಪಿಸಲು ರಾ.ಸ್ವಂ.ಸೇ ಸಂಘ ನಿರಂತರವಾಗಿ ಶ್ರಮಿಸುತ್ತಿದ್ದು, ಈ ಸಂಘವನ್ನು ಹೆಮ್ಮರವಾಗಿ ಕಟ್ಟಲು ಕೈಜೋಡಿಸುವಂತೆ ಕರೆ ನೀಡಿದರು.ಶತಮಾನೋತ್ಸವದ ಅಂಗವಾಗಿ ಪಥಸಂಚಲನ, ಮನೆಮನೆ ಸಂಪರ್ಕ, ಪ್ರತಿ ಗ್ರಾಮದಲ್ಲಿ ಹಿಂದೂ ಸಮಾಜೋತ್ಸವದ ಗುರಿ ಹೊಂದಲಾಗಿದ್ದು, ಇವುಗಳನ್ನು ಯಶಸ್ವಿಗೊಳಿಸುವ ಮೂಲಕ ಭಾರತಾಂಬೆಯ ಸೇವೆ ಸಲ್ಲಿಸೋಣ ಎಂದು ಹೇಳಿದರು.
ಹಿರಿಯ ಸ್ವಯಂ ಸೇವಕ ಸಚ್ಚಿದಾನಂದ ಮಠದ್ ಮಾತನಾಡಿ, ಸಮಾಜ ಬಲಿಷ್ಠವಾಗಿದ್ದಲ್ಲಿ ಮಾತ್ರ ನಾವು ನೆಮ್ಮದಿಯಾಗಿರಲು ಸಾಧ್ಯ. ಈ ದಿಸೆಯಲ್ಲಿ ಶತಮಾನೋತ್ಸವ ಫಲಶ್ರುತಿಯಿಂದ ಭವಿಷ್ಯದ ಚುನಾವಣೆಯಲ್ಲಿ ಹಿಂದೂ ಸಮಾಜದ ಉದ್ಧಾರಕ್ಕೆ ಶ್ರಮಿಸುವ ವ್ಯಕ್ತಿಯ ಆಯ್ಕೆಯಾಗಬೇಕು. ಹಿಂದೂ ಧರ್ಮ, ಸಂಸ್ಕೃತಿ ಸಮಾಜದ ಏಳ್ಗೆಯಿಂದ ಮಾತ್ರ ನಾವು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು. ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಮಾತನಾಡಿ, ರಾ.ಸ್ವಂ.ಸೇ ಸಂಘದ ಜಾಗೃತಿ ಅಭಿಯಾನದಿಂದಾಗಿ ದೇಶದೆಲ್ಲೆಡೆ ಹಿಂದೂತ್ವದ ವಾತಾವರಣ ನಿರ್ಮಾಣವಾಗಿದೆ. ವಿರೋಧಿಗಳ ಟೀಕೆಗೆ ಮಾನ್ಯತೆ ನೀಡದೆ ಮನಪರಿವರ್ತನೆ ಮೂಲಕ ಅಭಿಯಾನ ಯಶಸ್ವಿಗೊಳಿಸುವಂತೆ ಹೇಳಿದರು.ಈ ಸಂದರ್ಭದಲ್ಲಿ ಮಾಳೇರಕೇರಿಯಲ್ಲಿನ ಮನೆಮನೆಗೆ ಭೇಟಿ ನೀಡಿ ಸಂಪರ್ಕ ಅಭಿಯಾನಕ್ಕೆ ಸಂಸದ ರಾಘವೇಂದ್ರ ಚಾಲನೆ ನೀಡಿದರು.
ರಾ.ಸ್ವಂ.ಸೇ ಸಂಘದ ತಾ.ಭೌದ್ದಿಕ್ ಪ್ರಮುಖ ಶರತ್, ನಗರ ಕಾರ್ಯವಾಹ ಉಮೇಶ್, ತಾ.ವ್ಯವಸ್ತಾ ಪ್ರಮುಖ್ ವೀರಣ್ಣ, ವಿಶ್ವನಾಥ್, ಟಿಎಪಿಸಿಎಂಎಸ್ ನಿರ್ದೇಶಕ ಡಾ.ಭೂಕಾಂತ್, ಸುಧೀರ ಮಾರವಳ್ಳಿ, ವೀರನಗೌಡ, ಪಿಳಿಪಿಳಿ ಗಿಡ್ಡಪ್ಪ, ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಸ್.ಎಸ್.ರಾಘವೇಂದ್ರ, ಮಂಜು ಸಿಂಗ್, ಯೋಗೀಶ್ ಮಡ್ಡಿ, ಗುರುರಾಜ ಜಗತಾಪ್, ಲೀಲಾವತಿ ಮತ್ತಿತರರಿದ್ದರು.