ಸಾರಾಂಶ
ಬೆಂಗಳೂರು : ಬೆಂಗಳೂರು ನಗರದ ಎಚ್‌ಆರ್‌ಬಿಆರ್ ಬಡಾವಣೆ ಸುತ್ತಮುತ್ತಲಿನ ವಿದ್ಯುತ್ ಪೂರೈಕೆ ಸುಧಾರಿಸಲು 5.18 ಕಿ.ಮೀ. ಉದ್ದದ ಭೂಗತ ಕೇಬಲ್ ಅಳವಡಿಕೆ ಸೇರಿದಂತೆ ಹೊಸ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಇಂಧನ ಸಚಿವ ಕೆ.ಜೆ. ಜಾರ್ಜ್ ಶುಕ್ರವಾರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, 39.05 ಕೋಟಿ ರು. ವೆಚ್ಚದ ಈ ಯೋಜನೆಯಿಂದ ಗುಣಮಟ್ಟದ ವಿದ್ಯುತ್ ಪೂರೈಕೆ ಜತೆಗೆ ವಾರ್ಷಿಕವಾಗಿ 17.60 ದಶಲಕ್ಷ ಯುನಿಟ್ ವಿದ್ಯುತ್ ಉಳಿತಾಯ ಆಗಲಿದೆ ಎಂದು ಹೇಳಿದರು.
ಬೆಂಗಳೂರಿನ ಕೇಂದ್ರ ಭಾಗಗಳಾದ ಸರ್ವಜ್ಞನಗರ, ಎಚ್‌ಆರ್‌ಬಿಆರ್ ಲೇಔಟ್, ಬಾಣಸವಾಡಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಗುಣಮಟ್ಟದ ವಿದ್ಯುತ್ ಒದಗಿಸಲು 220/60 ಕೆವಿ ಸಾಮರ್ಥ್ಯದ ಎಚ್‌ಬಿಆರ್ ವಿದ್ಯುತ್ ಕೇಂದ್ರದಿಂದ ಪಾಟರಿ ರಸ್ತೆಯ 66 ಕೆ.ವಿ. ವಿದ್ಯುತ್ ಉಪ ಕೇಂದ್ರಕ್ಕೆ ಸುಮಾರು 5.18 ಕಿ.ಮೀ. ಭೂಗತ ಕೇಬಲ್ ಅಳವಡಿಕೆ ಮಾಡಲಾಗಿದೆ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದರು.
ಇನ್ನು ಈಗಿರುವ 66 ಕೆವಿ ಪಾಟರಿ ರಸ್ತೆ ವಿದ್ಯುತ್ ಉಪಕೇಂದ್ರಕ್ಕೆ 66 ಕೆವಿ ಐಟಿಐ ವಿದ್ಯುತ್ ಉಪಕೇಂದ್ರದಿಂದ ದ್ವಿಮಾರ್ಗ ಪ್ರಸರಣ ಮಾರ್ಗ ಸಂಪರ್ಕವಿದೆ. ಇದರಿಂದ ವಿದ್ಯುತ್ ಪೂರೈಸುವ ಸರ್ವಜ್ಞನಗರ, ಪುಲಿಕೇಶಿನಗರ, ದಂಡು ರೈಲ್ವೆ ನಿಲ್ದಾಣ ಸುತ್ತಮುತ್ತ ಪ್ರದೇಶಗಳಲ್ಲಿ ಕೈಗಾರಿಕೆ, ವಾಣಿಜ್ಯ ಹಾಗೂ ಗೃಹ ಬಳಕೆ ವಿದ್ಯುತ್ ಹೊರೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್‌ಬಿಆರ್ ವಿದ್ಯುತ್ ಕೇಂದ್ರದಿಂದ 80 ಮೆಗಾ ವ್ಯಾಟ್‌ನಷ್ಟು ವಿದ್ಯುತ್ ಪ್ರಸರಣ ಸಾಮರ್ಥ್ಯದ 66 ಕೆ.ವಿ. ಭೂಗತ ಕೇಬಲ್ ಹೊಸದಾಗಿ ಅಳಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.