ಕೈಗಾ ನಿರಾಶ್ರಿತರ ಬೇಡಿಕೆ ಈಡೇರಿಕೆಗೆ ರೂಪಾಲಿ ನಾಯ್ಕ ಆಗ್ರಹ

| Published : Sep 26 2024, 09:50 AM IST

ಸಾರಾಂಶ

ಕೈಗಾ ಯೋಜನೆಯಲ್ಲಿ ನಿವೃತ್ತರಾದ ನಿರಾಶ್ರಿತ ಉದ್ಯೋಗಿಗಳ ಮಕ್ಕಳಿಗೆ ಉದ್ಯೋಗ ನೀಡುವಂತಾಗಬೇಕು. ಸಿ ಮತ್ತು ಡಿ ದರ್ಜೆಯ ನೌಕರರ ಆಯ್ಕೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು.

ಕಾರವಾರ: ತಾಲೂಕಿನ ಮಲ್ಲಾಪುರದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಯಿತು. ಈ ವೇಳೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಅವರು ಕೈಗಾ ಸುತ್ತಮುತ್ತಲಿನ ಸಮಸ್ಯೆಗಳ ಬಗ್ಗೆ ವಿವರಿಸಿ, ಜನತೆಯ ಬೇಡಿಕೆಗಳನ್ನು ಈಡೇರಿಸುವಂತೆ ಸಂಸದರಿಗೆ ಮನವಿ ಮಾಡಿದರು. ಕೈಗಾದಲ್ಲಿ ಅಣು ವಿದ್ಯುತ್ ಘಟಕಗಳ ನಿರ್ಮಾಣಕ್ಕೆ ಮುನ್ನ ಸ್ಥಳೀಯರಿಗೆ ನೀಡಿದ ಭರವಸೆಗಳನ್ನು ಈಡೇರಿಸಿ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ರೂಪಾಲಿ ಎಸ್. ನಾಯ್ಕ ಮನವಿ ಮಾಡಿದರು. ಕೈಗಾ ಯೋಜನೆಯಲ್ಲಿ ನಿವೃತ್ತರಾದ ನಿರಾಶ್ರಿತ ಉದ್ಯೋಗಿಗಳ ಮಕ್ಕಳಿಗೆ ಉದ್ಯೋಗ ನೀಡುವಂತಾಗಬೇಕು. ಸಿ ಮತ್ತು ಡಿ ದರ್ಜೆಯ ನೌಕರರ ಆಯ್ಕೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು.

ಕೈಗಾವಾಡ ನಿರಾಶ್ರಿತರ ಕೇಂದ್ರಕ್ಕೆ ನಿರಂತರ ವಿದ್ಯುತ್, ಉಚಿತ ನೀರು ಒದಗಿಸಬೇಕು. ಶಾಪಿಂಗ್ ಕಾಂಪ್ಲೆಕ್ಸ್‌ಗಳನ್ನು ನಿರಾಶ್ರಿತರಿಗೆ ಹಂಚಿಕೆ ಮಾಡಬೇಕು. ನಿರಾಶ್ರಿತರಿಗೆ ಹಂಚಿಕೆಯಾದ ಜಮೀನಿನ ಪೋಡಿ ಮಾಡಿಕೊಡಬೇಕು. ಕೈಗಾದಲ್ಲಿ ಕಾರ್ಮಿಕರು, ಗುತ್ತಿಗೆದಾರರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವಂತೆ ಆಗ್ರಹಿಸಿದರು. ಕದ್ರಾ ಅಣೆಕಟ್ಟಿನ ಕೆಳಗಡೆ ಇರುವ ಸೇತುವೆ ಕೆಳಮಟ್ಟದಲ್ಲಿ ಇರುವುದರಿಂದ ಹೊಸ ಸೇತುವೆ ಮುಳುಗಡೆಯಾಗದಂತೆ ಎತ್ತರದಲ್ಲಿ ನಿರ್ಮಿಸಬೇಕು. ಜತೆಗೆ ಮಲ್ಲಾಪುರದಿಂದ ಬೋರೆಯನ್ನು ಸಂಪರ್ಕಿಸಲು ಸೇತುವೆ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು. ಪಕ್ಷದ ಕಾರ್ಯಕರ್ತರು, ಜನತೆ ಸಹ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸಂಸದರಿಗೆ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಸಂಸದರು ಎಲ್ಲ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು. ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ್ ಗುನಗಿ, ಗ್ರಾಮೀಣ ಪ್ರಭಾರಿ ಗಜಾನನ ಗುನಗ, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ, ಮಂಡಲ ಉಪಾಧ್ಯಕ್ಷ ದತ್ತಾರಾಮ ಬಾಂದೇಕರ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಕೇಶ ಬಾಂದೇಕರ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ ಗಾಂವಕರ, ಮಲ್ಲಾಪುರ ಹಾಗೂ ಕದ್ರಾ ಗ್ರಾಪಂ ಬಿಜೆಪಿ ಬೆಂಬಲಿತ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.