ಸಾರಾಂಶ
- ರಾಜ್ಯ, ಜಿಲ್ಲೆ , ತಾಲೂಕು, ವಿಭಾಗೀಯಮಟ್ಟದಲ್ಲಿ ಹಬ್ಬದ ಕಳೆ ಕಟ್ಟುತ್ತಿದ್ದ ಮೇಳ । ಅವಕಾಶಗಳೆ ಇಲ್ಲದೆ ಸೊರಗಿದೆ
ಯಡಗೆರೆ ಮಂಜುನಾಥ್,ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಒಂದು ಕಾಲದಲ್ಲಿ ಗ್ರಾಮೀಣ ಭಾಗದ ಯುವಕ, ಯುವತಿಯರಿಗಾಗಿ ಹಳ್ಳಿಗಳಲ್ಲಿ ಪ್ರತಿಭಾ ಪ್ರದರ್ಶನದ ಉತ್ತಮ ವೇದಿಕೆ ಯಾಗಿದ್ದ ಯುವಜನ ಮೇಳಗಳು ಇದೀಗ ಮರೀಚಿಕೆಯಾಗಿ ಇತಿಹಾಸದ ಪುಟಕ್ಕೆ ಸೇರಿರುವುದು ನಾಡಿನ ಸೊಗಡು ಬಿಂಬಿಸುವ ಕಲೆಗಳು ಹಾಗೂ ಯುವ ಜನರಿಗೆ ಸೂಕ್ತ ಅವಕಾಶ ಸಿಗದೆ ಮೂಲೆಗುಂಪಾಗುತ್ತಿವೆ.ಹಬ್ಬದಂತೆ ನಡೆಸಲಾಗುತ್ತಿದ್ದ ಈ ಯುವಜನ ಮೇಳಗಳು ನಡೆಯದೆ ಯುವ ಪ್ರತಿಭಾನ್ವಿತರಿಗೆ ನಿರಾಶೆ ಮೂಡಿಸಿದೆ. ಟಿ.ವಿ, ಮೊಬೈಲ್, ವಾಟ್ಸಾಪ್, ಪೇಸ್ ಬುಕ್ ಬಂದ ನಂತರ ಸಹಜವಾಗೇ ಆಧುನಿಕ ತಂತ್ರಜ್ಞಾನದಲ್ಲಿ ಮುಳುಗಿರುವ ಯುವಕ, ಯುವತಿಯರು ತಮ್ಮಲ್ಲಿರುವ ಪ್ರತಿಭೆ ಹೊರಹಾಕಲು ಅವಕಾಶಗಳು ಕಡಿಮೆಯಾಗಿವೆ.
ಕಳೆದ 40 ವರ್ಷಗಳ ಹಿಂದಿನಿಂದಲೂ ಯುವಜನ ಸಬಲೀಕರಣ ಮತ್ತು ಕ್ರಿಡಾ ಇಲಾಖೆ ಮೂಲಕ ಸರ್ಕಾರ ಯುವಜನ ಮೇಳ, ಗ್ರಾಮೀಣ ಕ್ರೀಡಾ ಕೂಟ ಹಾಗೂ ದಸರ ಕ್ರೀಡಾ ಕೂಟ ನಡೆಸುತ್ತಿತ್ತು. ಇದಕ್ಕಾಗಿ ತಾಲೂಕು ಮಟ್ಟದಲ್ಲಿ ಒಬ್ಬ ಅಧಿಕಾರಿಯನ್ನು ಸಹ ನೇಮಿಸಿತ್ತು. ಅವರ ಮೂಲಕ ಗ್ರಾಮೀಣ ಭಾಗದಲ್ಲಿ ಯುವಕ ಸಂಘ, ಯುವತಿ ಮಂಡಳಿಯನ್ನು ಹುಟ್ಟು ಹಾಕಿ ಯುವ ಪ್ರತಿಭೆ ಅನಾವರಣಕ್ಕೆ ಸೂಕ್ತ ಅವಕಾಶ ಕಲ್ಪಿಸಿತ್ತು.ಪ್ರತಿ ವರ್ಷ ನವೆಂಬರ್, ಡಿಸಂಬರ್ ತಿಂಗಳಲ್ಲಿ ಯುವಜನ ಮೇಳ ತಾಲೂಕು, ಜಿಲ್ಲಾ ಮಟ್ಟ, ವಿಭಾಗೀಯ ಹಾಗೂ ರಾಜ್ಯ ಮಟ್ಟದ ಯುವಜನ ಮೇಳ ನಡೆಯುತ್ತಿತ್ತು. ಇದರಲ್ಲಿ ಗ್ರಾಮೀಣ ಭಾಗದ ಜಾನಪದ ಸೊಗಡಿನ ಸಾಂಸ್ಕೃತಿಕ ಸ್ಪರ್ಧೆಗಳಾದ ಸೋಬಾನೆ ಹಾಡು, ಅಂಟಿಗೆ-ಪಿಂಟಿಗೆ, ನೆಟ್ಟಿ ಹಾಡು, ಜಾನಪದಗೀತೆ, ಭಾವಗೀತೆ, ವೀರಗಾಸೆ, ಡೊಳ್ಳು ಕುಣಿತ, ಹುಲಿ ವೇಷ, ಜಾನಪದ ನೃತ್ಯ, ಭರತ ನಾಟ್ಯ, ಏಕ ಪಾತ್ರಾಭಿನಯ, ನಾಟಕ, ಗೀಗೀ ಪದ, ಲಾವಣಿ ಸ್ಪರ್ಧೆ ನಡೆಸಿ ಬಹುಮಾನ ನೀಡಲಾಗುತ್ತಿತ್ತು. ಇದರಲ್ಲಿ ಗೆದ್ದ ತಂಡಗಳು ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದವು. ಅಲ್ಲಿ ಗೆದ್ದವರು ವಿಭಾಗೀಯ ಮಟ್ಟ ಹಾಗೂ ರಾಜ್ಯ ಮಟ್ಟಕ್ಕೆ ಸ್ಪರ್ಧಿಸುತ್ತಿದ್ದರು.
ಯುವಜನ ಮೇಳದಿಂದ ಗ್ರಾಮೀಣ ಭಾಗದ ಈ ಕಲೆಗಳು ಜೀವಂತವಾಗಿದ್ದವು. ಯುವಜನಮೇಳ ನಡೆಯುವುದಕ್ಕಿಂತ 1 ತಿಂಗಳ ಮುಂಚೆಯೇ ಯುವಕ, ಯುವತಿಯರು ಸ್ಥಳೀಯವಾದ ಕಲೆಗಳ ಅಭ್ಯಾಸದಲ್ಲಿ ನಿರತರಾಗುತ್ತಿದ್ದರು. ಇದರಿಂದ ಗ್ರಾಮೀಣ ಭಾಗದ ಹಳ್ಳಿ, ಹಳ್ಳಿಗಳಲ್ಲಿ ಜಾನಪದದ ಸೊಗಡು ಸದಾ ಮಾರ್ಧನಿಸುತ್ತಿತ್ತು.ಅಲ್ಲದೆ 18 ವರ್ಷದ ಮೇಲ್ಪಟ್ಟ ಯುವಕ,ಯುವತಿಯರಿಗೆ ಗ್ರಾಮೀಣ ಕೀಡಾ ಕೂಟ ಆಯೋಜಿಸುತ್ತಿದ್ದರಿಂದ ಇದರಲ್ಲಿ ಕಬಡ್ಡಿ, ಖೋಖೋ, ವಾಲಿಬಾಲ್, ರನ್ನಿಂಗ್ ರೇಸ್, ಹೈ ಜಂಪ್, ಲಾಂಗ್ ಜಂಪ್ ಮುಂತಾದ ಕ್ರೀಡೆಗಳು ಸಾಹಸ, ಸಾಮರ್ಥ್ಯ ಪ್ರದರ್ಶನದ ವೇದಿಕೆಯಾಗಿ ಎಲ್ಲರ ಸಹಭಾಗಿತ್ವದಿಂದ ಎಲ್ಲೆಡೆ ಯುವಜನರ ಕಲೆ, ಕ್ರೀಡಾ ಕಾರ್ಯಕ್ರಮಗಳು ಮೇಳೈಸುತ್ತಿದ್ದವು.
ಇತಿಹಾಸ: ಹತ್ತಾರು ವರ್ಷಗಳ ಹಿಂದೆಯೇ ತಾಲೂಕು ಮಟ್ಟದ ಯುವಜನ ಸೇವಾ ಕ್ರೀಡಾಧಿಕಾರಿಯನ್ನು ತೆಗೆಯಲಾಯಿತು. ತಾಲೂಕು ದೈಹಿಕ ಪರಿವೀಕ್ಷಕ ಅಧಿಕಾರಿಯೇ ಯುವಜನ ಮೇಳ ನೋಡಿಕೊಳ್ಳುತ್ತಿದ್ದರು. ನಂತರದ ವರ್ಷಗಳಲ್ಲಿ ತಾಲೂಕು ಮಟ್ಟದ ಯುವಜನ ಮೇಳ ನಿಂತು ಹೋಯಿತು. ನೇರವಾಗಿ ಜಿಲ್ಲಾ ಮಟ್ಟದಿಂದಲೇ ಯುವಜನ ಮೇಳ ನಡೆಯುತ್ತಿತ್ತು. ಆದರೆ, ಈಗ 2 ವರ್ಷಗಳಿಂದ ಜಿಲ್ಲಾ, ವಿಭಾಗೀಯ ಹಾಗೂ ರಾಜ್ಯ ಮಟ್ಟದ ಯುವಜನ ಮೇಳಗಳು ಸಹ ನಿಂತು ಹೋಗಿವೆ. ದಸರಾ ಕ್ರೀಡಾ ಕೂಟ ಕಳೆದ 2 ವರ್ಷದವರೆಗೆ ತಾಲೂಕು ಮಟ್ಟದಲ್ಲಿ ನಡೆಯುತ್ತಿತ್ತು. ಆದರೆ, ಈಗ ಅದೂ ನಿಂತು ಹೋಗಿದೆ.-- ಬಾಕ್ಸ್ ---
ಯುವಜನೋತ್ಸವಕ್ಕೆ ಆಗ್ರಹಗ್ರಾಮೀಣ ಭಾಗದ ಅನೇಕ ಯುವಕ, ಯುವತಿಯರು ಸರ್ಕಾರಿ ಉದ್ಯೋಗಕ್ಕೆ ಹೋಗದೆ ಕೃಷಿಯನ್ನೇ ಉದ್ಯೋಗ ಮಾಡಿ ಕೊಂಡು ಹಳ್ಳಿಯಲ್ಲೇ ನೆಲೆಸಿದ್ದಾರೆ. ಅವರಲ್ಲೂ ಹಲವಾರು ಪ್ರತಿಭೆಗಳಿದ್ದು ಸೂಕ್ತ ವೇದಿಕೆ ಇಲ್ಲದೆ ಪ್ರತಿಭೆಗಳು ಅರಳದೆ ಮುರುಟುತ್ತಿವೆ. ಸರ್ಕಾರ ಈ ಹಿಂದೆ ಇದ್ದಂತೆ ಗ್ರಾಮೀಣ ಭಾಗದ ಯುವಕ, ಯುವತಿ ಮಂಡಳಿಗೆ ಮತ್ತೆ ಜೀವ ನೀಡಿ ವರ್ಷ ವಿಡೀ ಯುವಜನ ಸೇವಾ ಕ್ರೀಡಾ ಇಲಾಖೆ ಮುಖಾಂತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಪ್ರತಿ ವರ್ಷ ಯುವಜನ ಮೇಳ ನಡೆಸಿ ಯುವಜನರಿಗೆ ಸೂಕ್ತ ವೇದಿಕೆ, ಅವಕಾಶ ಕಲ್ಪಿಸಿದರೆ ಸದಾ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಗ್ರಾಮೀಣ ಭಾಗದ ಯುವ ಜನರಿಗೆ ನವ ಚೈತನ್ಯ, ಉತ್ಸಾಹ ಭರಲಿದೆ. ಸರ್ಕಾರ ಈ ಬಗ್ಗೆ ತಕ್ಷಣ ಸ್ಪಂಧಿಸಿ ಮತ್ತೆ ಯುವಜನ ಮೇಳ ನಡೆಸಬೇಕು ಎಂಬುದು ಗ್ರಾಮೀಣ ಭಾಗದ ಯುವಜನ ಆಗ್ರಹವಾಗಿದೆ.
--- ಕೋಟ್--ನಾನು 6 ವರ್ಷ ಯುವಜನ ಒಕ್ಕೂಟದ ಅಧ್ಯಕ್ಷನಾಗಿ ಕೆಲಸ ಮಾಡಿದ್ದು ಪ್ರತಿ ವರ್ಷ ಒಂದೊಂದು ಗ್ರಾಮೀಣ ಭಾಗದಲ್ಲಿ ಯುವಜನ ಮೇಳ ನಡೆಸಿದ್ದೇನೆ. ಯುವಜನ ಮೇಳದಿಂದ ಬೇರೆ, ಬೇರೆ ಭಾಗದ ಜಾನಪದ ಕಲೆ ಕಲಿಯಲು ಅವಕಾಶ ವಾಗುತ್ತಿತ್ತು. ಜಿಲ್ಲಾ , ವಿಭಾಗೀಯ ಮಟ್ಟದ ಸ್ಪರ್ಧೆಗೆ ಹೋದಾಗ ಬೇರೆ ಜಿಲ್ಲೆಗಳ ಜಾನಪದ ಸಂಸ್ಕೃತಿ ಕಲಿಯಲು ನಮಗೆ ಅವಕಾಶ ಸಿಕ್ಕಿತ್ತು. ಸರ್ಕಾರ ಹಿಂದಿನಂತೆ ಮತ್ತೆ ಯವಜನ ಮೇಳ ಪ್ರಾರಂಭಿಸಬೇಕು.
ಎನ್.ಎಂ.ಕಾಂತರಾಜ್,ತಾಲೂಕು ಯುವಜನ ಒಕ್ಕೂಟದ ಮಾಜಿ ಅಧ್ಯಕ್ಷ
ನರಸಿಂಹರಾಜಪುರ-- ಕೋಟ್--
ಯುವಜನ ಮೇಳ ಮುಂದುವರಿಸಲು ರಾಜ್ಯದ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಯಾವುದೇ ಆದೇಶ ಇಲ್ಲ. ತಾಲೂಕು ಮಟ್ಟದಲ್ಲಿ ಯುವಜನ ಸೇವಾ ಇಲಾಖೆಯಿಂದ ಅಧಿಕಾರಿಗಳನ್ನು ನೇಮಿಸಿಲ್ಲ. ಕಳೆದ 2 ವರ್ಷಗಳ ಹಿಂದಿನವರೆಗೆ ನೇರವಾಗಿ ಜಿಲ್ಲಾ ಮಟ್ಟದ ಯುವಜನ ಮೇಳ ನಡೆಸಲಾಗುತ್ತಿತ್ತು. 2 ವರ್ಷದಿಂದ ನಿಂತು ಹೋಗಿದೆ. ದಸರಾ ಕ್ರೀಡಾ ಕೂಟ ನಡೆಸಲಾಗುತ್ತಿತ್ತು. ಮಳೆಯ ಕಾರಣ ನಿಂತು ಹೋಯಿತು. ಶೀಘ್ರದಲ್ಲೇ ತಾಲೂಕು ಮಟ್ಟದ ಅಧಿಕಾರಿಯ ನೇಮಕ ಆಗಲಿದೆ.ಮಂಜುಳಾ,
ಉಪ ನಿರ್ದೇಶಕರು,ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,
ಚಿಕ್ಕಮಗಳೂರು-- ಕೋಟ್--
ತಾಲೂಕು ಮಟ್ಟದಲ್ಲಿ ಯುವಜನ ಮೇಳ ನಡೆಯದೆ ಹತ್ತಾರು ವರ್ಷಗಳೇ ಸಂದಿದೆ. ನಾನು ಕಳೆದ 30 ವರ್ಷಗಳ ಹಿಂದೆಯೇ ಸತತವಾಗಿ ಯುವಜನ ಮೇಳದಲ್ಲಿ ಭಾಗವಹಿಸಿ 12 ಕ್ಕೂ ಹೆಚ್ಚು ಬಾರಿ ಗೀಗೀ ಪದ, ಲಾವಣಿ, ಜಾನಪದ ಗೀತೆ, ಭಜನೆ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಹೋಗಿದ್ದೆ. ಗ್ರಾಮೀಣ ಭಾಗದ ಮಣ್ಣಿನ ಸೊಗಡಿನ ಜಾನಪದ ಕಲೆ ಯುವಜನ ಮೇಳದ ಮೂಲಕ ಅರಳುತ್ತಿತ್ತು. ಈಗ ಯುವಜನ ಮೇಳವಿಲ್ಲದೆ ಹಿರಿಯರಿಂದ ಜಾನಪದ ಕಲೆಯನ್ನು ಕಿರಿಯರಿಗೆ ಹಸ್ತಾಂತರ ಸಾಧ್ಯವಾಗುತ್ತಿಲ್ಲ.ಅಭಿನವ ಗಿರಿರಾಜ್,
ರಾಜ್ಯಮಟ್ಟದ ಯುವಜನ ಮೇಳದಲ್ಲಿ ಪ್ರಶಸ್ತಿ ಪಡೆದ ಕಲಾವಿದನರಸಿಂಹರಾಜಪುರ
- ದುರಸ್ತಿಗೆ ಬಂದು ಹಲವು ವರ್ಷ ವಾದರೂ ಸ್ಪಂಧನೆ ಇಲ್ಲ- ಗ್ರಾಮೀಣ ಭಾಗದ ಯುವಕ, ಯುವತಿಯರ ಪ್ರತಿಭಾ ಪ್ರದರ್ಶನಕ್ಕೆ ತಾಲೂಕು ಕ್ರೀಡಾಂಗಣ