ಗ್ರಾಮೀಣ ಪ್ರದೇಶದ ಮಕ್ಕಳು ನಗರಗಳಿಗೆ ಸಮಾನವಾದ ಶಿಕ್ಷಣ ಪಡೆಯುವವರೆಗೆ ಅಭಿವೃದ್ಧಿ ಹೊಂದಿದ ಭಾರತದ ಕನಸು ನನಸಾಗುವುದಿಲ್ಲ. ಶಿಕ್ಷಣವು ಕೇವಲ ಪಾಠ ಪುಸ್ತಕಗಳಿಗೆ ಸೀಮಿತವಾಗದೆ, ಮಕ್ಕಳಲ್ಲಿ ಜೀವನ ಮೌಲ್ಯಗಳು ಹಾಗೂ ಸಂಸ್ಕಾರಗಳನ್ನು ಬೆಳೆಸುವಂತಿರಬೇಕು. ಆಗ ಮಾತ್ರ ಅವರು ಪರಿಪೂರ್ಣ ವ್ಯಕ್ತಿತ್ವ ಹೊಂದಿದ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಆಲೂರು
ಗ್ರಾಮೀಣ ಭಾಗದ ಮಕ್ಕಳಿಗೂ ನಗರ ಮಕ್ಕಳಿಗೆ ದೊರೆಯುವ ಮಟ್ಟದ ಗುಣಮಟ್ಟದ ಶಿಕ್ಷಣ ಸಿಗಬೇಕು. ಅವರ ಭವಿಷ್ಯವನ್ನು ಭದ್ರಗೊಳಿಸುವುದೇ ಶಿಕ್ಷಣ ಸಂಸ್ಥೆಗಳ ಮೂಲ ಉದ್ದೇಶವಾಗಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ತಾಲೂಕಿನ ಪಾಳ್ಯ ಸಮೀಪದ ದಿಂಢಘಟ್ಟ (ಪಾಳ್ಯ) ಗ್ರಾಮದಲ್ಲಿ ಪ್ರೇರಣಾ ಎಜುಕೇಶನ್ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ಪಂಚವಟಿ ಪಬ್ಲಿಕ್ ಶಾಲೆಯ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳು ನಗರಗಳಿಗೆ ಸಮಾನವಾದ ಶಿಕ್ಷಣ ಪಡೆಯುವವರೆಗೆ ಅಭಿವೃದ್ಧಿ ಹೊಂದಿದ ಭಾರತದ ಕನಸು ನನಸಾಗುವುದಿಲ್ಲ. ಶಿಕ್ಷಣವು ಕೇವಲ ಪಾಠ ಪುಸ್ತಕಗಳಿಗೆ ಸೀಮಿತವಾಗದೆ, ಮಕ್ಕಳಲ್ಲಿ ಜೀವನ ಮೌಲ್ಯಗಳು ಹಾಗೂ ಸಂಸ್ಕಾರಗಳನ್ನು ಬೆಳೆಸುವಂತಿರಬೇಕು. ಆಗ ಮಾತ್ರ ಅವರು ಪರಿಪೂರ್ಣ ವ್ಯಕ್ತಿತ್ವ ಹೊಂದಿದ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮನುಷ್ಯನು ಹುಟ್ಟುವಾಗ ಬಡವನಾಗಿರಬಹುದು. ಆದರೆ ಜೀವನದಲ್ಲಿ ಸಾಧನೆ ಮಾಡಿ, ಸಾಯುವಾಗ ಇತಿಹಾಸ ನಿರ್ಮಿಸುವಷ್ಟು ಹೆಸರು ಮಾಡಬೇಕು. ಆಗ ಮಾತ್ರ ಜೀವನ ಸಾರ್ಥಕವಾಗುತ್ತದೆ” ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳನ್ನಾಡಿದರು. ಸಂವಿಧಾನದ ಮೂಲಕ ದೇಶದಲ್ಲಿ ಮಹಿಳೆಯರಿಗೆ ಸಮಾನತೆ ತಂದುಕೊಟ್ಟ ಮಹಾನ್ ವ್ಯಕ್ತಿ ಡಾ. ಬಿ. ಆರ್. ಅಂಬೇಡ್ಕರ್ ಎಂದು ಸ್ಮರಿಸಿದ ಅವರು, ಇಂದು ಮಹಿಳೆಯರಿಗೆ ಆಸ್ತಿಯಲ್ಲಿ ಸಮಪಾಲು, ಉದ್ಯೋಗದಲ್ಲಿ ಸಮಾನ ಅವಕಾಶ ದೊರೆಯುತ್ತಿರುವುದು ಸಂವಿಧಾನದ ಕೊಡುಗೆ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು. ನಿಷ್ಠೆಯಿಂದ ಅಭ್ಯಾಸ ಮಾಡಿದರೆ ಯಾವುದೇ ಹುದ್ದೆಯನ್ನಾದರೂ ಅಲಂಕರಿಸಬಹುದು. ಗುರುಗಳ ಮಾರ್ಗದರ್ಶನ ಹಾಗೂ ನಿರಂತರ ಕಠಿಣ ಪರಿಶ್ರಮದಿಂದ ಗುರಿ ಸಾಧನೆ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಪಂಚವಟಿ ಪಬ್ಲಿಕ್ ಶಾಲೆಯ ಉಮೇಶ್, ಮಂಜುನಾಥ್, ಹರೀಶ್, ಸಕಲೇಶಪುರ ಪುರಸಭೆಯ ಮಾಜಿ ಸದಸ್ಯ ಸುರೇಶ್, ಶೋಭಾ ಸುರೇಶ್, ದೂರವಾಣಿ ಇಲಾಖೆಯ ಕಾಂತರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.