ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮೊಬೈಲ್, ಟಿವಿ ಮೊದಲಾದ ಉಪಕರಣಗಳ ಬಳಕೆ ಮಕ್ಕಳ ವ್ಯಾಸಂಗಕ್ಕೆ ದೊಡ್ಡ ಅಡ್ಡಿಯುಂಟುಮಾಡುತ್ತಿವೆ. ಈ ತಂತ್ರಜ್ಞಾನಗಳ ಸವಾಲನ್ನು ಮೀರಿ ಮಕ್ಕಳು ಶಿಕ್ಷಣ ಪಡೆಯುವಂತೆ ಮಾಡಬೇಕಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಎಂದು ಹೇಳಿದರು. ಶ್ರೀ ಸಿದ್ದಗಂಗಾ ಹಳೆಯ ವಿದ್ಯಾರ್ಥಿ ಸಂಘದಿಂದ ಶುಕ್ರವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ಆಯೋಜಿಸಿದ್ದ, ಸಿದ್ಧಗಂಗಾ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಬಹಳ ಮುಖ್ಯ ಎಂದರು.ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಿ
ನಾವು ಓದುವಾಗ ಮೊಬೈಲ್, ಟಿವಿ ಯಾವುದೂ ಇಲ್ಲವಾದ್ದರಿಂದ ಶಿಕ್ಷಣಕ್ಕೆ ಅಡೆತಡೆಗಳು ಇರಲಿಲ್ಲ. ಈಗಿನ ಅಡೆ ತಡೆಗಳ ನಡುವೆ ಮಕ್ಕಳು ಶಿಕ್ಷಣದ ಕಡೆಗೆ ಹೆಚ್ಚು ಗಮನಹರಿಸುವಂತೆ ಮಾಡುವುದು ಪೋಷಕರ ಮುಂದಿರುವ ದೊಡ್ಡ ಸವಾಲಾಗಿದೆ. ಮೊಬೈಲ್‌ನ ಬಳಕೆಯನ್ನು ಕಡಿಮೆ ಮಾಡಿ ಮಕ್ಕಳು ಓದುವಂತೆ ಮಾಡಬೇಕಿದೆ. ಮಕ್ಕಳು ಎಲ್ಲ ಕ್ರೀಡೆಗಳನ್ನು ಫೋನ್‌ನಲ್ಲೇ ಆಡುತ್ತಿದ್ದಾರೆ. ಮಕ್ಕಳು ಮೈದಾನದಲ್ಲಿ ಆಟವಾಡಿ ದೈಹಿಕ ಹಾಗೂ ಮಾನಸಿಕವಾಗಿ ಸುದೃಢರಾಗಬೇಕಿದೆ. ಆಟ ಮತ್ತು ಪಾಠ ಎರಡೂ ಸಮತೋಲನದಿಂದ ಸಾಗಬೇಕು ಎಂದು ಸಲಹೆ ನೀಡಿದರು.ಶಿಕ್ಷಣ ಒಂದರಿಂದಲೇ ಸಮಾಜದ ಅಭಿವೃದ್ಧಿ ಹಾಗೂ ದೇಶದ ವಿಕಸನ ಸಾಧ್ಯ. ಶಿಕ್ಷಣದಿಂದಲೇ ಹಲವು ದೇಶಗಳು ಸಂಪೂರ್ಣ ಅಭಿವೃದ್ಧಿಯಾಗಿವೆ. ಬಡ ಮಕ್ಕಳಿಗೆ ಅನ್ನ, ಅಕ್ಷರ ಹಾಗೂ ಆಶ್ರಯವನ್ನು ನೀಡಿರುವ ಸಿದ್ದಗಂಗಾ ಮಠವು ವಿಶೇಷ ಸೇವೆಯನ್ನು ಮಾಡುತ್ತಿದೆ. ಈ ಸೇವೆಗೆ ಜಾತಿ ಅಥವಾ ಧರ್ಮ ಅಡ್ಡ ಬಂದಿಲ್ಲ. ಸಿದ್ದಗಂಗಾ ಮಠದಡಿಯ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತರು ಕೂಡ ವ್ಯಾಸಂಗ ಮಾಡುತ್ತಿದ್ದಾರೆ. ನಾನು ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದಾಗ ಮಠದ ವೈದ್ಯಕೀಯ ಕಾಲೇಜಿಗೆ ಪರವಾನಗಿ ಕೊಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ನನ್ನ ಪುಣ್ಯ ಎಂದು ಹೇಳಿದರು. ಸವಾಲು ಎದುರಿಸಿ ಗೆದ್ದವರುಡಾ.ಬಿ.ಆರ್.ಅಂಬೇಡ್ಕರ್ ಓದುವಾಗ ಅಮಾನುಷ ಸಾಮಾಜಿಕ ಪದ್ಧತಿಗಳಿಂದ ಅನೇಕ ಸವಾಲುಗಳನ್ನೆದುರಿಸಿದ್ದರು. ಆದರೂ ಅವರು ವ್ಯಾಸಂಗ ಪೂರ್ಣಗೊಳಿಸಿ ಸಂವಿಧಾನದ ಮೂಲಕ ಎಲ್ಲರಿಗೂ ಶಿಕ್ಷಣ ದೊರೆಯುವಂತೆ ಮಾಡಿದರು. ಮಹಾತ್ಮ ಗಾಂಧೀಜಿ ಸಹ ಕಷ್ಟದಲ್ಲೇ ಓದಿ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದರು. ಜ್ಯೋತಿಬಾ ಫುಲೆ ಅವರು ಪತ್ನಿಗೂ ಶಿಕ್ಷಣ ನೀಡುವ ಜೊತೆಗೆ ಅನೇಕ ಮಹಿಳೆಯರಿಗೆ ಶಿಕ್ಷಣ ನೀಡಿದರು. ಬೀದಿದೀಪದ ಕೆಳಗೆ ಓದಿದ ಸರ್ ಎಂ.ವಿಶ್ವೇಶ್ವರಯ್ಯ ವಿಶ್ವ ಪ್ರಸಿದ್ಧ ಎಂಜಿನಿಯರ್ ಆಗಿ ಬೆಳೆದರು ಎಂದರು. ಅನೇಕರು ಸಮಾಜಕ್ಕೆ ಕೊಡುವ ಬದಲು ಸಮಾಜದಿಂದ ಪಡೆಯುವುದರಲ್ಲೇ ನಿಸ್ಸೀಮರಾಗಿದ್ದಾರೆ. ಆದರೆ ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಸಂಘ ಸಮಾಜಕ್ಕೆ ಅನೇಕ ಕೊಡುಗೆ ನೀಡುತ್ತಿದೆ. ಅದೇ ರೀತಿ ಎಲ್ಲರೂ ಸಮಾಜಕ್ಕೆ ಕೊಡುಗೆ ಕೊಡಲು ಶ್ರಮಿಸುವಂತಾಗಬೇಕು. ತಾವು ಸಿದ್ದಗಂಗಾ ಮಠದ ದೊಡ್ಡ ಭಕ್ತ. ಮಠದ ಯಾವುದೇ ಕಾರ್ಯಗಳಿಗೆ ನೆರವು ನೀಡಲು ಸದಾ ಸಿದ್ಧ ಎಂದು ತಿಳಿಸಿದರು.ಈ ವೇಳೆ ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಆಹಾರ ಮತ್ತು ನಾಗರಿಕ ಪೋರೈಕೆ ಸಚಿವ ಕೆ.ಎಚ್.ಮುನಿಯಪ್ಪ, ಶ್ರೀ ಸಿದ್ಧಗಂಗಾ ಹಳೆಯ ವಿದ್ಯಾರ್ಥಿ ಸಂಘದಿಂದ ಪದಾಧಿಕಾರಿಗಳು, ಮತ್ತಿತರರು ಇದ್ದರು.