ಮಹಿಳೆಯರ ಅಭಿವೃದ್ಧಿಗೆ ಗ್ರಾಮಾಭಿವೃದ್ಧಿ ಯೋಜನೆ ನೆರವು: ಜಿ ಎಚ್ ಶ್ರೀನಿವಾಸ್

| Published : Feb 13 2024, 12:47 AM IST

ಮಹಿಳೆಯರ ಅಭಿವೃದ್ಧಿಗೆ ಗ್ರಾಮಾಭಿವೃದ್ಧಿ ಯೋಜನೆ ನೆರವು: ಜಿ ಎಚ್ ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಾಯ ಹಸ್ತ ನೀಡಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

- ಗೋಪಾಲಕಾಲೋನಿ ಗ್ರಾಮದಲ್ಲಿ ಶ್ರೀ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಹಿಳೆಯರ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಾಯ ಹಸ್ತ ನೀಡಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ತರೀಕೆರೆ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಎಂಸಿ ಹಳ್ಳಿ ವಲಯ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಸಮಿತಿ ಎಂ ಸಿ ಹಳ್ಳಿ ವಲಯ, ವಿವಿಧ ಸಂಘ ಸಂಸ್ಥೆಗಳು ಜನಪ್ರತಿನಿಧಿಗಳ ಸಂಯುಕ್ತಾಶ್ರಯದಲ್ಲಿ ಗೋಪಾಲಕಾಲೋನಿಯಲ್ಲಿ ಏರ್ಪಡಿಸಿದ್ದ ಶ್ರೀ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ನವಜೀವನೋತ್ಸವ ಒಕ್ಕೂಟ ಪದಗ್ರಹಣ ಕಾರ್ಯಕ್ರಮ ಉದ್ಘಾಟನೆಯಲ್ಲಿ ಮಾತನಾಡಿದರು.

ಯೋಜನೆ ಅನೇಕ ಸಮಾಜಮುಖಿ ಕೆಲಸಗಳನ್ನು ನಿರ್ವಹಿಸುತ್ತಿದೆ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸ್ವ ಸಹಾಯ ಸಂಘಗಳು ದುರ್ಬಲರಿಗೆ ಬದುಕು ಕಟ್ಚಿಕೊಳ್ಳಲು ಅವಕಾಶ ಕಲ್ಪಿಸಿವೆ. ಸಮುದಾಯ ಅಭಿವೃದ್ಧಿಗೆ ಪೂರಕವಾಗಿ ಕ್ಷೇತ್ರದಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಹುಣಸಘಟ್ಟ ತಪೋಕ್ಷೇತ್ರ ಶ್ರೀ ಹಾಲುಸ್ವಾಮಿ ಮಠ ಷ.ಭ್ರ.ಶ್ರೀ ಗುರುಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಆಶೀರ್ವಚನ ನೀಡಿದರು. ಪೂಜೆ ಪುನಸ್ಕಾರಗಳು ದೇವರ ಒಲುಮೆಗೆ ಪಾತ್ರರಾಗಲು ಇರುವ ಸುಲಭ ಮಾರ್ಗಗಳು, ನಂಬಿಕೆಯೇ ದೇವರು ಆದ್ದರಿಂದ ದೇವರ ನಂಬಿಕೆ ಕಳೆದುಕೊಳ್ಳದಿರಿ. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸಿ ಎಂದು ಹೇಳಿದರು.

ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರಿಸಿ ಮಾತನಾಡಿ ರಾಜ್ಯಾದ್ಯಂತ ಗ್ರಾಮಾಭಿವೃದ್ಧಿ ಯೋಜನೆ 6 ಲಕ್ಷ ಸಂಘಗಳನ್ನು ಹೊಂದಿದ್ದು, 54 ಲಕ್ಷ ಸದಸ್ಯರ ಒಳಗೊಂಡಿವೆ. ಸಮಾಜದ ಪ್ರತಿಯೊಬ್ಬ ಪ್ರಜೆ ಅಭಿವೃದ್ಧಿಗೂ ಆರ್ಥಿಕ ನೆರವಿನ ಅವಶ್ಯಕತೆ ಇದೆ, ಆದ್ದರಿಂದ ನಮಗೆ ಸಂಘಗಳು ಬೇಕು ಎಂದು ತಿಳಿಸಿದರು.

ಸಾಮೂಹಿಕ ಸತ್ಯನಾರಾಯಣ ಪೂಜೆಯಂತಹ ಧಾರ್ಮಿಕ ಕಾರ್ಯಕ್ರಮಗಳು ನಮ್ಮ ಜೀವನದ ಸನ್ನಡತೆಗೆ ದಾರಿ ದೀಪವಾಗಿದೆ ಎಂದರು. ಇಂದಿನ ಕಾಲದಲ್ಲಿ ಸಂಸ್ಕಾರ ಸಂಪ್ರದಾಯ ಮರೆತು ಹೋಗಿದ್ದಾರೆ ನಮ್ಮ ಪೂರ್ವಜರ ಕಾಲದಲ್ಲಿ ನವಗ್ರಹ ಪೂಜೆಗಳನ್ನು ಸಲ್ಲಿಸುತ್ತಿದ್ದರು. ಗ್ರಹಗಳ ಬಗ್ಗೆ ಗ್ರಹಣಗಳ ಬಗ್ಗೆ ತಿಳಿದುಕೊಂಡಿದ್ದರು, ಇಂದು ವಿಜ್ಞಾನಿಗಳು ಪ್ರತಿ ಯೊಂದು ಕಂಡು ಹಿಡಿದಿದ್ದಾರೆ. ಹಿಂದಿನ ಕಾಲದ ಸಂಪ್ರದಾಯಗಳನ್ನು ನಾವು ಈಗ ಉಳಿಸಿಕೊಂಡು ಹೋಗಬೇಕು, ಮಕ್ಕಳಿಗೆ ಸಂಪ್ರದಾಯ ಸಂಸ್ಕಾರಗಳ ಬಗ್ಗೆ ತಿಳಿಸಿಕೊಡುವ ಕೆಲಸ ಮಾಡಬೇಕು ಎಂದರು.

ಜನಜಾಗೃತಿ ಯೋಜನಾಧಿಕಾರಿ ನಾಗರಾಜ್ ಕುಲಾಲ್ ಅವರು ನವ ಜೀವನೋತ್ಸವ ಕಾರ್ಯಕ್ರಮ ನೆರವೇರಿಸಿ ಪಾನಮುಕ್ತ ಸದಸ್ಯರನ್ನು ಅಭಿನಂದಿಸಿ ದುಶ್ಚಟಗಳಿಂದ ದೂರವಿರಬೇಕು ಎಂದು ಹೇಳಿದರು.

ಪ್ರಗತಿಪರ ರೈತರಾದ ಜಿ.ಎಂ.ಪ್ರಕಾಶ್ ಸಮಾರಂಭದ ಅದ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ಕುಸುಮಾಧರ್ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಟಿ.ಆರ್.ಶ್ರೀಧರ್, ಜ್ಞಾನವಿಕಾಸ ಸಮನ್ವಯ ಅಧಿಕಾರಿ ನಂದಿನಿ,ಸೇವಾ ಪ್ರತಿನಿಧಿ ರಂಗನಾಥ್ ನವ ಜೀವನ ಸಮಿತಿ ಸದಸ್ಯರು, ಪೂಜಾ ಸಮಿತಿಯ ಅಧ್ಯಕ್ಷರು, ವಲಯದ ಎಲ್ಲಾ ಸಂಘದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಗ್ರಾಪಂ ಅಧ್ಯಕ್ಷರು ಸದಸ್ಯರು, ಊರಿನ ಮುಖ್ಯಸ್ಥರು, ವಲಯದ ಮೇಲ್ವಿಚಾರಕ ರಮೇಶ್ ವಲಯದ ಎಲ್ಲ ಸೇವಾ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.12ಕೆಟಿಆರ್.ಕೆ.6ಃ

ತರೀಕೆರೆ ಸಮೀಪದ ಗೋಪಾಲಕಾಲೋನಿ ಗ್ರಾಮದಲ್ಲಿ ಏರ್ಪಡಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ನವಜೀವನೋತ್ಸವ ಒಕ್ಕೂಟ ಪದಗ್ರಹಣ ಕಾರ್ಯಕ್ರಮವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ಹುಣಸಘಟ್ಟ ತಪೋಕ್ಷೇತ್ರ ಶ್ರೀ ಹಾಲುಸ್ವಾಮಿ ಮಠ ಷ. ಭ್ರ. ಶ್ರೀ ಗುರುಮೂರ್ತಿ ಶಿವಾಚಾರ್ಯ ಮಹಾಸ್ವಾಮಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಟಿ.ಆರ್.ಶ್ರೀಧರ್, ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್, ತಾ.ಯೋಜನಾಧಿಕಾರಿ ಕುಸುಮಾಧರ್ ಮತ್ತಿತರರು ಇದ್ದರು.