ಗ್ರಾಮೀಣ ಪ್ರತಿಭೆ ಹಾಲಮ್ಮ ಅಸುಗೋಡ್ 8ನೇ ಟಾಪರ್‌

| Published : Apr 12 2024, 01:06 AM IST

ಗ್ರಾಮೀಣ ಪ್ರತಿಭೆ ಹಾಲಮ್ಮ ಅಸುಗೋಡ್ 8ನೇ ಟಾಪರ್‌
Share this Article
  • FB
  • TW
  • Linkdin
  • Email

ಸಾರಾಂಶ

ಮೂಲತಃ ಹರಪನಹಳ್ಳಿ ತಾಲೂಕಿನ ಹಾಲದಹಳ್ಳಿ ಗ್ರಾಮದ ರೈತ ನಾಗೇಂದ್ರಪ್ಪ ಹಾಗೂ ಟೈಲರಿಂಗ್‌ ಕೆಲಸ ಮಾಡುತ್ತಿರುವ ಕೊಟ್ರಮ್ಮ ದಂಪತಿಯ ಪುತ್ರಿ ಹಾಲಮ್ಮ ಅಹರ್ನಿಶಿ ವಿದ್ಯಾಭ್ಯಾಸ ಮಾಡಿ ಈ ರ್‍ಯಾಂಕ್‌ ಪಡೆದಿದ್ದಾರೆ.

ಜಿ.ಸೋಮಶೇಖರ

ಕೊಟ್ಟೂರು: ಈ ಸಲದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಪಟ್ಟಣದ ಗೊರ್ಲ ಶರಣಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಬಡ ಕೃಷಿಕ ಕುಟುಂಬದ ಹಾಲಮ್ಮ ಅಸುಗೋಡ್ 600ಕ್ಕೆ 588 ಅಂಕಗಳನ್ನು ಪಡೆದು ಖಾಸಗಿ ಕಾಲೇಜುಗಳಿಗಿಂತ ನಾವೇನೂ ಕಡಿಮೆ ಇಲ್ಲ ಎಂಬಂತೆ ಸಾಬೀತು ಪಡಿಸಿದ್ದಾಳೆ.

ಮೂಲತಃ ಹರಪನಹಳ್ಳಿ ತಾಲೂಕಿನ ಹಾಲದಹಳ್ಳಿ ಗ್ರಾಮದ ರೈತ ನಾಗೇಂದ್ರಪ್ಪ ಹಾಗೂ ಟೈಲರಿಂಗ್‌ ಕೆಲಸ ಮಾಡುತ್ತಿರುವ ಕೊಟ್ರಮ್ಮ ದಂಪತಿಯ ಪುತ್ರಿ ಹಾಲಮ್ಮ ಅಹರ್ನಿಶಿ ವಿದ್ಯಾಭ್ಯಾಸ ಮಾಡಿ ಈ ರ್‍ಯಾಂಕ್‌ ಪಡೆದಿದ್ದಾರೆ. ಜತೆಗೆ ವ್ಯವಸಾಯದಲ್ಲಿ ತಂದೆಗೂ ಸಹಾಯ ಮಾಡುತ್ತಿದ್ದಳು. ಹಾಲಮ್ಮ ಸರ್ಕಾರಿ ಕಾಲೇಜಿನ ಪ್ರವೇಶದ ಲಾಭ ಪಡೆದು ಸಾಧನೆ ತೋರಿದ್ದಾರೆ.

ಕೊಟ್ಟೂರಿನ ಗೊರ್ಲಿ ಶರಣಪ್ಪ ಸರ್ಕಾರಿ ಕಾಲೇಜಿಗೆ ತನ್ನ ಊರಾದ ಹಾಲದಹಳ್ಳಿ ಗ್ರಾಮದಿಂದ ನಿತ್ಯ ಬಸ್‌ನಲ್ಲಿ ಸಂಚರಿಸಿ ಕಾಲೇಜಿನ ತರಗತಿಯಲ್ಲಿ ಸಿಗುತ್ತಿದ್ದ ಉಪನ್ಯಾಸಕರ ಪಾಠ ಆಲಿಸಿ, ಪರೀಕ್ಷೆ ಬರೆದು ಸಾಧನೆ ಮಾಡಿದ್ದಾರೆ. ಬಡತನ ತನ್ನ ವಿದ್ಯಾಭ್ಯಾಸಕ್ಕೆ ಎಂದೂ ಅಡ್ಡಿಯಾಗದು ಎಂಬುದು ಹಾಲಮ್ಮ ಅವರಿಂದ ಪ್ರೇರಣೆಯಾಗಲಿದೆ.

ಕೊಟ್ಟೂರಿನ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಕಲಿಕೆಗೆ ಬೇಕಾಗುವ ಎಲ್ಲ ಬಗೆಯ ಸಹಕಾರ ಸಿಗುತ್ತದೆ. ಪ್ರಾಚಾರ್ಯ ಮತ್ತು ಉಪನ್ಯಾಸ ಬಳಗದಿಂದ ಉತ್ತಮ ಸ್ಪಂದನೆ ಇದೆ. ಹೀಗಾಗಿ ಸುಲಭವಾಗಿ ಪರೀಕ್ಷೆಯಲ್ಲಿ ಸಾಧನೆ ತೋರಲು ಸಾಧ್ಯವಾಯಿತು. ಬಿ.ಎಡ್‌ ಮಾಡಿ ಶಿಕ್ಷಕಿಯಾಗುವ ಕನಸು ಹೊಂದಿರುವೆ ಎನ್ನುತ್ತಾರೆ ಪಿಯುಸಿ 8ನೇ ಟಾಪರ್‌ ಹಾಲಮ್ಮ ಅಸುಗೋಡ್.

ವಿದ್ಯಾರ್ಥಿನಿ ಹಾಲಮ್ಮ ಅಸುಗೋಡ್‌ ಕಲಿಕೆಯ ಮನಸು ಅರಿತು ನಮ್ಮ ಮಹಾವಿದ್ಯಾಲಯದಲ್ಲಿ ಸಿಗುತ್ತಿದ್ದ ಎಲ್ಲ ಬಗೆಯ ನೆರವು ನೀಡಿದೆವು. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಹಾಲಮ್ಮ ಈ ಸಲದ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ 8ನೇ ಟಾಪರ್‌ ಆಗಿ ಉತ್ತೀರ್ಣಗೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎನ್ನುತ್ತಾರೆ ಕೊಟ್ಟೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ.ಜಿ.ಸೋಮಶೇಖರ.