ಹಗರಿಬೊಮ್ಮನಹಳ್ಳಿ: ಮನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ನಿರಂತರ ನೂರು ದಿನಗಳ ಉದ್ಯೋಗ ದೊರಕುತ್ತಿಲ್ಲ. ಈ ಹಿಂದಿನಂತೆ ನಿಗದಿತ ಆವಧಿಯಲ್ಲಿ ಕೂಲಿ ಕಾರ್ಮಿಕರಿಗೆ ಕೂಲಿ ಮೊತ್ತ ಪಾವತಿಯಾಗುತ್ತಿಲ್ಲ ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಂಚಾಲಕಿ ಎಸ್. ಅಕ್ಕಮಹಾದೇವಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಬನ್ನಿಕಲ್ಲು ಗ್ರಾಮದಲ್ಲಿ ಮಂಗಳವಾರ ಮನರೇಗಾ ಯೋಜನೆಯಡಿ ಹೊಸ ಕಾಮಗಾರಿಗಳಿಗೆ ಒತ್ತಾಯಿಸಿ ಮತ್ತು ಬಾಕಿ ಕೂಲಿ ಮೊತ್ತ ಪಾವತಿಗೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ವತಿಯಿಂದ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.ಯೋಜನೆಯಡಿ ಕೂಲಿ ಕೆಲಸಕ್ಕೆ ಅವಕಾಶ ನೀಡದಿರುವುದೇ ಸಮಸ್ಯೆಯ ಮೂಲವಾಗಿದೆ. ಕೂಲಿಕಾರರ ಬದುಕು ಅತಂತ್ರವಾಗಿದೆ. ಕೂಡಲೇ ಗೋಕಟ್ಟೆ, ಕೆರೆ ಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸಿಬೇಕು. ಕೆಲಸ ನಿರ್ವಹಿಸುವ ಸ್ಥಳದಲ್ಲಿ ಕುಡಿಯುವ ನೀರು ಮತ್ತು ಕೂಲಿ ಕಾರ್ಮಿಕರ ಶುಶ್ರೂಷೆ ನಿರ್ವಹಿಸಲು ಆ್ಯಂಬುಲೆನ್ಸ್ ಸಹಿತ ಕಿರಿಯ ಆರೋಗ್ಯ ಸಹಾಯಕ-ಸಹಾಯಕಿಯರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.ಕೂಲಿ ಕಾರ್ಮಿಕರಾದ ಶಕುಂತಲಾ ಮಾತನಾಡಿ, ಬೇಸಿಗೆಯ ಅತಿಯಾದ ತಾಪಮಾನದ ಹಿನ್ನೆಲೆಯಲ್ಲಿ ಕೆಲಸದ ಪ್ರಮಾಣದಲ್ಲಿ ಶೇ. 30ರಷ್ಟು ರಿಯಾಯಿತಿ ನೀಡುವ ಮೂಲಕ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಕೂಲಿ ಕಾರ್ಮಿಕರಾದ ಜಂಬಣ್ಣ, ರಷ್ಮೀ, ಲಲಿತಾ, ಮಂಗಳಾ, ಕೊಟ್ರೇಶ್, ನಿಂಗಪ್ಪ, ವೀರಸಂಗಯ್ಯ, ಮಂಜುನಾಥ್, ಪವಿತ್ರಾ, ಗಂಗಮ್ಮ, ಶಾರದಮ್ಮ, ಪದ್ಮಾವತಿ, ಹನುಮಂತಪ್ಪ, ರೇಣುಕಮ್ಮ, ಲೋಕೇಶ್ ಹಾಗೂ ಸಿದ್ದೇಶ್ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.