ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಎಚ್.ಡಿ. ಕೋಟೆ ಕ್ಷೇತ್ರದಲ್ಲಿ ಮತ್ತೆ ಜೆಡಿಎಸ್ ಬಲಪಡಿಸಲು ಶಾಸಕ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್ ಹಾಗೂ ಮುಖಂಡ ಕೃಷ್ಣನಾಯಕ ಅವರು ಚರ್ಚಿಸಿ ಒಮ್ಮತಕ್ಕೆ ಬರುವಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಿವಿಮಾತು ಹೇಳಿದರು.ನಗರದ ಸಾ.ರಾ. ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಎಚ್.ಡಿ. ಕೋಟೆ ತಾಲೂಕು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಎಚ್.ಡಿ. ಕೋಟೆ ಕ್ಷೇತ್ರದಲ್ಲಿ ಜೆಡಿಎಸ್ಬಲಪಡಿಸಲು ಈಗಿಂದಲೇ ಸಿದ್ಧರಾಗಬೇಕು. ಕಳೆದ ಚುನಾವಣೆಯಲ್ಲಿ ಕೃಷ್ಣನಾಯಕ ಅವರು ಕಡೆಯವರೆಗೂ ನಮ್ಮೊಂದಿಗೆ ಇದ್ದರು. ನಾಲ್ಕು ವರ್ಷ ಪಕ್ಷಕ್ಕಾಗಿ ಕೆಲಸ ಮಾಡಿದ ಕೃಷ್ಣನಾಯಕ್ ಕಡೆಯಲ್ಲಿ ಬಿಜೆಪಿ ಅಭ್ಯರ್ಥಿಯಾದರು. ಹೀಗಾಗಿ ಪಕ್ಷದ ಮತ ಬಿಜೆಪಿ, ಜೆಡಿಎಸ್ ನಡುವೆ ವಿಭಜನೆಯಾಗಿ ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತು. ಈ ರೀತಿ ಗೊಂದಲದಿಂದಾಗಿ ದಿವಂಗತ ಚಿಕ್ಕಮಾದು ಅವರ ನಂತರ ಎಚ್.ಡಿ ಕೋಟೆಯಲ್ಲಿ ಜೆಡಿಎಸ್ ಜಯಭೇರಿ ಬಾರಿಸಲು ಸಾಧ್ಯವಾಗಿಲ್ಲ ಎಂದರು.
ಕಾರ್ಯಕರ್ತರು ಮಾಜಿ ಶಾಸಕ ಚಿಕ್ಕಣ್ಣ ಅವರ ನೇತೃತ್ವದಲ್ಲಿಯೇ ಕೃಷ್ಣ ನಾಯಕ್ ಅವರನ್ನು ಪಕ್ಷಕ್ಕೆ ವಾಪಸ್ಸು ಕರೆತರಲು ಸಭೆಯಲ್ಲಿ ನಿರ್ಧರಿಸಿದ್ದಾರೆ. ಹಾಗಾಗಿ ಜಯಪ್ರಕಾಶ್, ಕೃಷ್ಣನಾಯಕ್ಕೆ ಒಟ್ಟಾಗಿ ಕುಳಿತು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಶಾಸಕ ಜಿ.ಟಿ. ದೇವೇಗೌಡರ ಭಿನ್ನಾಭಿಪ್ರಾಯ ಇಂದು, ನಿನ್ನೆಯದಲ್ಲ. ಕಳೆದ 15 ವರ್ಷಗಳಿಂದಲೂ ಇದೆ. ಅದು ಯಾವಾಗ ಬಗೆಹರಿಯಬೇಕೊ ಆಗ ಬಗೆಹರಿಯುತ್ತದೆ ಎಂದು ಅವರು ತಿಳಿಸಿದರು.
ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್ ಮಾತನಾಡಿ, ಕೃಷ್ಣನಾಯಕರು ಜೆಡಿಎಸ್ ಪಕ್ಷಕ್ಕೆ ಕರೆತರಲು ನಮ್ಮ ವಿರೊಧವಿಲ್ಲ. ಆದರೆ ಅದಾದ ನಂತರ ನಮ್ಮ ನಡೆ ಹೇಗಿರಬೇಕೆಂದು ಪಕ್ಷದ ಮುಖಂಡರು ಕಾರ್ಯಕರ್ತರನ್ನು ಕೇಳಿ ನಿರ್ಧರಿಸುವುದಾಗಿ ತಿಳಿಸಿದರು.ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕೃಷ್ಣನಾಯಕ್ ಮಾತನಾಡಿ, ಕಳೆದ ಬಾರಿ ನನಗೆ 50 ಸಾವಿರ ಮತ ದೊರೆತಿವೆ. ಹಾಗಾಗಿ ನಮ್ಮ ಮುಖಂಡರು ಒಡನಾಡಿಗಳೊಂದಿಗೆ ಚರ್ಚಿಸಿ ಪಕ್ಷಕ್ಕೆ ಸೇರುವ ಬಗ್ಗೆ ತಿಳಿಸುವುದಾಗಿ ಹೇಳಿದರು.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಕೃಷ್ಣ ನಾಯಕ ಮತ್ತು ಪ್ರಕಾಶ್ ಅವರು ಒಟ್ಟಿಗೆ ಮಾತನಾಡಿ ಒಳ್ಳೆ ನಿರ್ಧಾರಕ್ಕೆ ಬರಲಿ. ಮುಂಬರುವ ಚುನಾವಣೆಗೆ ಯಾರಿಗೆ ಟಿಕೆಟ್ ಅಂತ ಪಕ್ಷ ನಿರ್ಧರಿಸಲಿದೆ ಎಂದರು.