ಹಲವು ವರ್ಷಗಳ ಬಳಿಕ ಕಾಣಿಸಿಕೊಂಡ ತೀವ್ರ ಚಳಿಯ ನಡುವೆಯೇ ಹೊಸ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ 2025ರ ವರ್ಷವು ಶುಭ ಸಮಾಚಾರಕ್ಕಿಂತ ದುಃಖದ ವಿಷಯಗಳೇ ಹೆಚ್ಚು ಕಾಣಿಸಿಕೊಂಡು ಮಲೆನಾಡನ್ನು ಹರ್ಷಗೊಳಿಸದೆ ಮುಕ್ತಾಯಗೊಂಡಿದೆ.

ಹಲವು ವರ್ಷಗಳ ಬಳಿಕ ಕಾಣಿಸಿಕೊಂಡ ತೀವ್ರ ಚಳಿಯ ನಡುವೆಯೇ ಹೊಸ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ 2025ರ ವರ್ಷವು ಶುಭ ಸಮಾಚಾರಕ್ಕಿಂತ ದುಃಖದ ವಿಷಯಗಳೇ ಹೆಚ್ಚು ಕಾಣಿಸಿಕೊಂಡು ಮಲೆನಾಡನ್ನು ಹರ್ಷಗೊಳಿಸದೆ ಮುಕ್ತಾಯಗೊಂಡಿದೆ. ಹಲವು ಅಪಘಾತಗಳು ಜೀವಗಳನ್ನು ಬಲಿ ಪಡೆದರೆ, ಮೇರು ವ್ಯಕ್ತಿತ್ವದ ಸಾಹಿತಿ ನಾ. ಡಿಸೋಜಾ ಸಾವು ಸಾಹಿತ್ಯ ವಲಯವನ್ನು ಬರಡಾಗಿಸಿತು. ಪಹಲ್ಗಾಮ್‌ ಉಗ್ರ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ್‌ ಬಲಿಯಾಗಿ ರಾಷ್ಟ್ರಮಟ್ಟದಲ್ಲಿ ಶಿವಮೊಗ್ಗದ ಹೆಸರು ಕಾಣುವಂತಾಯಿತು. ಕಾಂತಾರ-2 ಸಿನಿಮಾ ಶೂಟಿಂಗ್‌ ವೇಳೆ ಶರಾವತಿ ಹಿನ್ನೀರಿನಲ್ಲಿ ದೋಣಿ ಮಗುಚಿ ಕೂದಲೆಳೆಯ ಅಂತರದಿಂದ ಅಪಾಯದಿಂದ ಚಿತ್ರತಂಡ ಪಾರಾದರೂ ಅಭಿಮಾನಿಗಳ ಎದೆ ಝಲ್‌ ಎಂದಿದ್ದು ಸುಳ್ಳಲ್ಲ. ಹೊಸನಗರದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೀರಿನ ಟ್ಯಾಂಕ್‌ಗೆ ದುಷ್ಕರ್ಮಿಗಳು ವಿಷ ಬೆರೆಸಿದ ಪ್ರಕರಣ ಪತ್ತೆಯಾಗಿದ್ದು, ಅದೃಷ್ಠವಶಾತ್‌ ಯಾವುದೇ ಪ್ರಾಣಾಹಾನಿ ಸಂಭವಿಸಿರಲಿಲ್ಲ ಎನ್ನುವುದು ಸಮಾಧಾನ ತಂದಿತ್ತು.

ದಶಕಗಳ ಬೇಡಿಕೆಯಾದ ಸಿಗಂಧೂರು ಸೇತುವೆ ನಿರ್ಮಾಣದ ಮೂಲಕ ದೇಶದ ಎರಡನೇ ಅತಿದೊಡ್ಡ ಸೇತುವೆ ನಿರ್ಮಾಣದ ಹೆಮ್ಮೆ ನಮ್ಮದಾಗಿದ್ದಲ್ಲದೆ, ಶರಾವತಿ ಸಂತ್ರಸ್ಥರ ಕಣ್ಣಂಚಲ್ಲಿ ಮೊದಲಿಗೆ ಕೋಲ್ಮಿಂಚು ಕಾಣಿಸಿದ್ದು ಜಿಲ್ಲೆಯ ಸಂತಸದ ವಿಚಾರದಲ್ಲಿ ಮೊದಲಿಗೆ ಬಂದಿತು. ನಕ್ಸಲ್‌ ಕೃಷ್ಣಮೂರ್ತಿಯ ಬಂಧನ ಮಲೆನಾಡಿನಲ್ಲಿ ಸಮಾಧಾನ ತಂದಿತು. ಜಿಲ್ಲೆಯ ಮೂವರು ಖ್ಯಾತರಿಗೆ ರಾಜ್ಯೋತ್ಸವ ಪ್ರಶಸ್ತಿ ದಕ್ಕಿದ್ದು, ಅರ್ಹರಿಗೆ ಸಂದ ಸಮಾಧಾನ ಜಿಲ್ಲೆಯದ್ದಾಗಿತ್ತು.

ಜನವರಿ: ಜ.1. ಹೊಸ ವರ್ಷಾಚರಣೆ ಸಂದರ್ಭ ಕೇಕ್ ತರಲು ಬೈಕಿನಲ್ಲಿ ಹೋಗುವಾಗ ಕಾರಿನ ಕನ್ನಡಿಗೆ ಬೈಕು ಟಚ್ ಆಯಿತೆಂಬ ಕಾರಣಕ್ಕೆ ಕಾರು ಚಾಲಕ ಹಿಂಬದಿಯಿಂದ ಬೈಕ್‌ ಗೆ ಗುದ್ದಿದ ಪರಿಣಾಮ ಉರುಳಿ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವು.

ಜ.3.ಹೊಸ ವರ್ಷದ ಶುಭಾಶಯ ಹೇಳುವ ನೆಪದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಅವರ ಹೆಸರಿನಲ್ಲಿ ಕಹಿಯಾದ ಸ್ವೀಟ್ ಬಾಕ್ಸ್ ಕಳುಹಿಸಿದ್ದ ಪ್ರಕರಣ ಸದ್ದು ಮಾಡಿತ್ತು.

ಜ.18: ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದಿಂದ ಅಡಕೆ ಕ್ಯಾನ್ಸರ್ ಕಾರಕ ಎಂಬ ಸುದ್ದಿಯ ಕುರಿತು ಸ್ಪಷ್ಟನೆ ನೀಡಲು ಆಯೋಜಿಸಿದ್ದ ಅಡಕೆ ಬೆಳೆಗಾರರ ಸಮಾವೇಶದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭಾಗಿ.

ಜ.20: ಕಾಗೋಡು ತಿಮ್ಮಪ್ಪನವರಿಗೆ ಕುವೆಂಪು ವಿಶ್ವವಿದ್ಯಾಲಯ ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು ಏಕಕಾಲಕ್ಕೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನ.

ಫೆಬ್ರವರಿ:

ಫೆ.4: ಜಿಲ್ಲೆಯಲ್ಲಿ ಫೆ.4 ರಂದು ಒಂದೇ ದಿನ 11 ಮಂದಿಯಲ್ಲಿ ಕೆಎಫ್‌ ಡಿ ಸೋಂಕು ಪತ್ತೆ. ಹೊಸನಗರದ ಮಾರುತಿಪುರ- ಸಂತೇಕಟ್ಟೆ, ತೀರ್ಥಹಳ್ಳಿಯ ಕನ್ನಂಗಿ, ಗುಡ್ಡೇಕೊಪ್ಪ, ಮಾಳೂರು ಗ್ರಾಮಗಳಲ್ಲಿ ಕೆಎಫ್‌ ಡಿ ಕಾಣಿಸಿಕೊಂಡಿತ್ತು.

ಫೆ.14: ಭದ್ರಾವತಿ ಶಾಸಕ ಸಂಗಮೇಶ್ವರ್‌ ರಾಜೀನಾಮೆಗೆ ಹಾಗೂ ಅವರ ಪುತ್ರನನ್ನು ಬಂಧಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಭಾಗಿ.

ಫೆ.26: ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ವಯೋ ಸಹಜ ಅನಾರೋಗ್ಯದಿಂದ 17 ವರ್ಷ ಪ್ರಾಯದ ವಿಜಯ್ ಹೆಸರಿನ ಗಂಡು ಹುಲಿ ಸಾವು.

ಫೆ.27: ನಗರದ ಹೊರವಲಯದ ಗೋವಿಂದಾಪುರದಲ್ಲಿ ನಿರ್ಮಿಸಿರುವ ಜಿ+2 ಮಾದರಿಯ ಆಶ್ರಯ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ವಸತಿ ಸಚಿವ ಜಮೀರ್ ಅಹಮದ್ ಭಾಗವಹಿಸಿದ್ದರು.

ಮಾರ್ಚ್:

ಮಾ.12: ಫೆ. 28 ರಂದು ಲವ್ ಜಿಹಾದ್ ಪುಸ್ತಕ ಬಿಡುಗಡೆಗೆ ತಡೆ ಒಡ್ಡಲಾಗಿತ್ತು ಎಂಬ ಕಾರಣಕ್ಕೆ ಮಾ.12ರಂದು ಶಿವಮೊಗ್ಗ ನಗರದಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್. ‘ಲವ್ ಜಿಹಾದ್’ ಪುಸ್ತಕ ಬಿಡುಗಡೆ ಮಾಡಿದ್ದರು.

ಮಾ.14: ಕುಂಭಮೇಳದಲ್ಲಿ ಭಾಗಿಯಾಗದವರಿಗೆ ವಿಶ್ವಹಿಂದೂ ಪರಿಷತ್ ಮತ್ತು ದೇವಾಲಯದ ಸಮಿತಿಯಿಂದ ಕುಂಭ ಸಂಗಮ ತೀರ್ಥ-ಪ್ರಸಾದ ವಿತರಣಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಮಾ.19: ಶರಾವತಿ ನದಿ ಕಣಿವೆಯಲ್ಲಿ ಆರಂಭವಾಗಿರುವ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಮಾ. 19 ರಂದು ಶಿವಮೊಗ್ಗದಲ್ಲಿ ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟದಿಂದ ಬೃಹತ್ ಪ್ರತಿಭಟನೆ.

ಮಾ.26: ಶಿವಮೊಗ್ಗ ಕಾಶಿಪುರ ಗೇಟ್ ಬಳಿ ಕಸದ ರಾಶಿಯಲ್ಲಿ ಮೇಯಲು ಬಂದಿದ್ದ 4 ಹಸುಗಳು ರೈಲಿಗೆ ಸಿಲುಕಿ ಸಾವು.

ಏಪ್ರಿಲ್:

ಏ.1: ಶಿವಮೊಗ್ಗ ನಗರದಲ್ಲಿ ಮತ್ತೆ ಭುಗಿಲೆದ್ದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಮೈದಾನ ವಿವಾದ. ರಂಜಾನ್ ಹಬ್ಬದ ಪ್ರಾರ್ಥನೆಗೆ ಅವಕಾಶ ನೀಡಲಾಗಿದ್ದ ಮೈದಾನದ ಮುಖ್ಯದ್ವಾರದಲ್ಲಿ ರಾತ್ರೋರಾತ್ರಿ 10 ಅಡಿ ಎತ್ತರದ ಬೇಲಿ ನಿರ್ಮಾಣ.

ಏ.8: ಕೆಲ ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್ ಶಾಖಾ ಕಚೇರಿ ಒಂದರಲ್ಲಿ ನಡೆದಿದ್ದ ನಕಲಿ ಬಂಗಾರ ಅಡಮಾನ ಪ್ರಕರಣ ಸಂಬಂಧ ಏ.8 ರಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರ ವಿರುದ್ಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳಿಂದ ವಿವಿಧೆಡೆ ದಾಳಿ.

ಏ.16: ಶಿವಮೊಗ್ಗ ನಗರದ ಆದಿಚುಂಚನಗಿರಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿ ಪರೀಕ್ಷೆ ಬರೆಯಲು ಒಳಗೆ ಕಳುಹಿಸಿದ್ದ ಘಟನೆ ವಿರೋಧಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಶಿವಮೊಗ್ಗ ಜಿಲ್ಲೆಯ ವಿವಿಧ ಬ್ರಾಹ್ಮಣ ಸಂಘಗಳ ಒಕ್ಕೂಟಗಳ ಖಂಡನೆ.

ಏಪ್ರಿಲ್ 22: ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪೆಹಲ್ಗಾಮ್ ಪ್ರವಾಸದಲ್ಲಿದ್ದ ಶಿವಮೊಗ್ಗದ ನಗರದ ನಿವಾಸಿ ಮಂಜುನಾಥ್ ಎಂಬುವರು ಬಲಿ.

ಮೇ

ಮೇ 11: ಮಲೆನಾಡಿನಲ್ಲಿ ಹಲವು ಸ್ಫೋಟ, ದಾಳಿ ಇತ್ಯಾದಿ ಕಾನೂನು ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಬೇಕಾಗಿದ್ದ ನಕ್ಸಲ್ ಬಿ.ಜಿ. ಕೃಷ್ಣಮೂರ್ತಿಯನ್ನು ಬಾಡಿ ವಾರೆಂಟ್ ಮೇಲೆ ತ್ರಿಶೂರ್‌ ಜೈಲಿನಿಂದ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಲಯಕ್ಜೆ ಹಾಜರುಪಡಿಸಿದ ಪೊಲೀಸರು.

ಜೂನ್

ಜೂ.15: ಶಿವಮೊಗ್ಗ ತಾಲೂಕಿನ ಆಡುಗೋಡಿ ಗ್ರಾಮದಲ್ಲಿ ತಡರಾತ್ರಿ ಭಾರೀ ಮಳೆಗೆ ಗೋಡೆ ಕುಸಿದು ಪರಿಣಾಮ ವೃದ್ಧೆ ಸಿದ್ಧಮ್ಮ (94) ಸಾವು.

ಜೂ.16: ಶಾಸಕ ಬೇಳೂರು ಗೋಪಾಲಕೃಷ್ಣ ವಿದೇಶ ಪ್ರವಾಸದಲ್ಲಿರುವಾಗ ಅವರ ಆಪ್ತ ಕಾರ್ಯದರ್ಶಿ ಶ್ರೀನಿವಾಸ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದು ವಿವಾದ ಸೃಷ್ಠಿ.

ಜೂ.17: ಹೊಸನಗರ ತಾಲೂಕು ಹುಲಿಕಲ್ ಘಾಟ್‌ ನಲ್ಲಿ ಮಧ್ಯರಾತ್ರಿಯಲ್ಲಿ ಲಾರಿಯೊಂದು ಕೆಟ್ಟು ನಿಂತ ಪರಿಣಾಮ ವಾಹನಗಳ ಸಂಚಾರ ಸಂಪೂರ್ಣ ಬಂದ್‌.

ಜೂ.19: ಭದ್ರಾವತಿ ತಾಲೂಕಿನ ಬಂಡೀಗುಡ್ಡದಲ್ಲಿ ಆನೆ ತುಳಿತದಿಂದ ವ್ಯಕ್ತಿ ಬಲಿ.

ಜೂ.27: ಸೊರಬ ತಾಲೂಕು ಕಪ್ಪಗಳಲೆ ಗ್ರಾಮದಲ್ಲಿ ಒಣಗಿದ ಬಟ್ಟೆ ತೆಗೆಯಲು ಹೋದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶದಿಂದ ದಂಪತಿ ಸಾವು.

ಜುಲೈ:

ಜು.5: ನಗರದ ಕೋಟೆ ಪೊಲೀಸ್ ಠಾಣೆ ಆವರಣದಲಿದ್ದ ಅರಳಿ ಮರವೇರಿ ಕುಳಿತು ಹೈಡ್ರಾಮಾ ಸೃಷ್ಟಿಸಿದ ಯುವಕ ಇಬ್ರಾಹಿಂ.

ಜು.12: ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಖೈದಿಯೊಬ್ಬನ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆ. ಮೆಗ್ಗಾನ್ ಆಸ್ಪತ್ರೆ ವೆದ್ಯರಿಂದ ಶಸ್ತ್ರಚಿಕಿತ್ಸೆ ಮೂಲಕ ಮೊಬೈಲ್‌ ಹೊರಕ್ಕೆ.

ಜು.14: ಅಂಬಾರಗೋಡ್ಲು-ಕಳಸವಳ್ಳಿ- ಸಿಗಂದೂರು ಸೇತುವೆ ಉದ್ಘಾಟನೆ ನಡೆದಿತ್ತು. ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಆಗಸ್ಟ್

ಆ.11: ನೂಲು ಹುಣ್ಣಿಮೆ ನಿಮಿತ್ತ ತನ್ನ ಕುಟುಂಬದ ಸದಸ್ಯರೊಂದಿಗೆ ಚಂದ್ರಗುತ್ತಿ ದೇವಾಲಯಕ್ಕೆ ಆಗಮಿಸಿದ ಹಾವೇರಿ ಮೂಲದ ಅವಿವಾಹಿತ ಯುವತಿಗೆ ಹೆಣ್ಣು ಮಗು ಜನನ.

ಆ.16: ರಿಪ್ಪನ್ ಪೇಟೆ ಸಮೀಪದ ಕಾನುಗೋಡು ಗ್ರಾಮದ ಬಳಿ ತಮ್ಮಡಿಕೊಪ್ಪ- ಮೂಗುಡ್ತಿ ಮಾರ್ಗದಲ್ಲಿ ಚಲಿಸುತ್ತಿದ್ದ ನರ್ಸರಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿಯಾಗಿತ್ತು. ಈ ಬಸ್ಸಿನಲ್ಲಿ 12 ನರ್ಸರಿ ಮಕ್ಕಳನ್ನು ಇದ್ದರು. ಅದೃಷ್ಟವಶಾತ್ ಮಕ್ಕಳು ಪ್ರಾಣಪಾಯದಿಂದ ಪಾರಾಗಿದ್ದರು.

ಆ.20: ಶಿವಮೊಗ್ಗ ನಗರದ ಪ್ರವಾಸಿ ಮಂದಿರದ ಬಳಿ ಆ.20ರಂದು ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ನಡೆದಿತ್ತು.

ಸೆಪ್ಟೆಂಬರ್

ಸೆ.8: ನಗರದ ಮಲವಗೊಪ್ಪದ ಬಳಿ ನಡೆದ ಅಪಘಾತದಲ್ಲಿ ದುಮ್ಮಳ್ಳಿ ಗ್ರಾಮದ ನಿವಾಸಿ ಮದುವೆ ನಿಶ್ಚಯಗೊಂಡಿದ್ದ ಕವಿತಾ ಬಾಯಿ (28) ಯುವತಿ ಸಾವು.

ಸೆ.9: ಭದ್ರಾವತಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದ ವಿಡಿಯೊ ವೈರಲ್. .

ಅಕ್ಟೋಬರ್

ಅ.3: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ನರ್ಸ್ ಕ್ವಾರ್ಟಸ್ ನಲ್ಲಿ 10 ವರ್ಷದ ಮಗುವನ್ನು ಹತ್ಯೆ ಮಾಡಿ ತಾಯಿಯು ಆತ್ಮಹತ್ಯೆ.

ಅ.8: ಶಿವಮೊಗ್ಗ ನಗರದ ಹೊರವಲಯದ ಪುರಲೆ ಬಳಿ ಅಮ್ಜದ್ ಕೊಲೆ ಪ್ರಕರಣದ ಆರೋಪಿ ರೌಡಿಶೀಟರ್ ಅಕ್ಬರ್ (21) ಕಾಲಿಗೆ ಪೊಲೀಸರಿಂದ ಗುಂಡು.

ಅ.30: ಶಿವಮೊಗ್ಗ ನಗರದ ಹೊರವಲಯ ಗೋಂದಿ ಚಟ್ನಹಳ್ಳಿ ಬಳಿ ರಸ್ತೆ ಬದಿ ಮರಕ್ಕೆ ಗೂಡ್ಸ್ ವಾಹನ ಡಿಕ್ಕಿ. ಮೂವರ ಸಾವು.

ಅ.25: ಶಿವಮೊಗ್ಗ ನಗರದ ನವುಲೆಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ಕರ್ನಾಟಕ ಮತ್ತು ಗೋವಾ ತಂಡಗಳ ನಡುವೆ ರಣಜಿ ಟ್ರೋಫಿ ಪಂದ್ಯಾವಳಿ ಆರಂಭ.

ನವೆಂಬರ್

ನ.8: ಶಿವಮೊಗ್ಗ ನಗರದ ನವುಲೆಯ ಕೃಷಿ ಮತ್ತು ತೋಟಗಾರಿಕಾ ವಿವಿ ಆವರಣದಲ್ಲಿ ಕೃಷಿ ಮೇಳ ಆರಂಭ.

ನ.16: ಶಿವಮೊಗ್ಗದ ಆರ್.ಎಂ.ಎಲ್. ನಗರ, ಮಾರ್ನವಮಿ ಬೈಲಿನಲ್ಲಿ ನ.16ರಂದು ಹಿಂದೂ ಯವಕನ ಮೇಲೆ ಹಲ್ಲೆ.

ನ.18: ಕುವೆಂಪು ವಿಶ್ವವಿದ್ಯಾಲಯದಲ್ಲಿ ‘ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ’ಕುರಿತು ಹಮ್ಮಿಕೊಳ್ಳಲಾದ ವಿಚಾರ ಸಂಕಿರಣ ವಿರೋಧಿಸಿ ಕುವೆಂಪು ವಿವಿ ಎದುರು ಡಿಎಸ್ಎಸ್ ನಿಂದ ತಮಟೆ ಚಳವಳಿ.

ಡಿಸೆಂಬರ್

ಡಿ.18: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಮೇಲಿನ ಅನಗತ್ಯ ಆರೋಪ ವಿರೋಧಿಸಿ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ ವೇಳೆ ಕೋಟೆ ಠಾಣೆಯ ಎಎಸ್ಐ ಅಮೃತಾಬಾಯಿ ಅವರ ಮಾಂಗಲ್ಯಸರ ಕಳವು.

ಡಿ.19: ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ ಬಿಡುಗಡೆ.

ನಡೆಯದ ಮೊದಲ ಮಲೆನಾಡ ಕಂಬಳ:

ತುಳುನಾಡಿನ ಜಾನಪದ ಕ್ರೀಡೆಯನ್ನು ವಿಸ್ತರಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಕಂಬಳ ನಡೆಸಲು ಉದ್ದೇಶಲಾಗಿತ್ತು. ಏಪ್ರಿಲ್ 19 ಮತ್ತು 20ರಂದು ಮಾಚೇನಹಳ್ಳಿಯಲ್ಲಿ ಸುಮಾರು 16 ಎಕರೆ ಪ್ರದೇಶದಲ್ಲಿ ಕಂಬಳ ನಡೆಸಲು ಸಿದ್ದತೆ ನಡೆದಿದ್ದವು. ಬಳಿಕ ಜಿಲ್ಲಾ ಕಂಬಳ ಸಮಿತಿಗೆ ನ್ಯಾಯಲಯದಿಂದ ನೋಟೀಸ್ ಜಾರಿಯಾದ ಹಿನ್ನೆಲೆ ಕಂಬಳವನ್ನು ರದ್ದು ಮಾಡಲಾಯಿತು.

ಶಾಸಕರ ಪುತ್ರನಿಂದ ಮಹಿಳಾ ಅಧಿಕಾರಿಗೆ ನಿಂಧನೆ

ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಪುತ್ರ ಬಸವೇಶ್ ಮಹಿಳಾ ಅಧಿಕಾರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ದೊಡ್ಡ ಸದ್ದು ಮಾಡಿತ್ತು. ಭದ್ರಾವತಿಯಲ್ಲಿ ಮರುಳಗಾರಿಕೆ ತಡೆಯಲು ಹೋದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿಗೆ ಅವಾಚ್ಯ ನಿಂದಿಸಿದ ಆಡಿಯೋ ವೈರಲ್ ಆಗಿತ್ತು.

ಹಾಲು ಕುಡಿಯದ ಗಂಡಾನೆ ಮರಿ ಸಾವು

ಸಕ್ರೆಬೈಲು ಆನೆ ಬಿಡಾರದ ಹೇಮಾವತಿ ಆನೆಯು ಕಾಡಿನಲ್ಲಿ ಮರಿ ಹಾಕಿತ್ತು. ಇದರ ಜತೆ ಕಾಡಿನ ಗಂಡಾನೆಯೊಂದು ರಕ್ಷಣೆಗೆ ನಿಂತಿದ್ದರಿಂದ ಮಾವುತರು ಹತ್ತಿರಕ್ಕೆ ಹೋಗಲು ಆಗುತ್ತಿರಲಿಲ್ಲ. ಚಿಕ್ಕ ವಯಸ್ಸಿಗೆ ಹೇಮಾವತಿ ಮರಿಹಾಕಿದ್ದರಿಂದ ಮರಿಯ ಆರೈಕೆ ಮಾಡುವುದು ತಿಳಿದಿರಲಿಲ್ಲ. ಮರಿಗೆ ಹಾಲು ಕುಡಿಸಿರಲಿಲ್ಲ. ಈ ನಡುವೆ ಮರಿಯನ್ನು ಒಂದೂವರೆ ಕಿ.ಮೀ.ನಷ್ಟು ದೂರಕ್ಕೆ ಗುಡ್ಡ ಹತ್ತಿಸಿದೆ. ಬಳಲಿದ ಆನೆ ಮರಿಯು ಸಾವನ್ನಪ್ಪಿತ್ತು.

ಕೆಎಫ್‌ ಡಿಗೆ 8 ವರ್ಷದ ಬಾಲಕ ಬಲಿ

ತೀರ್ಥಹಳ್ಳಿ ತಾಲೂಕು ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ದತ್ತರಾಜಪುರದ 8 ವರ್ಷದ ಬಾಲಕ ಕೆಎಫ್‌ ಡಿ ಸೋಂಕಿಗೆ ಬಲಿಯಾಗಿದ್ದು, ಅಕ್ಕ ಹಾಗೂ ತಮ್ಮ ಇಬ್ಬರು ಸೋಂಕಿನಿಂದ ಬಳಲುತ್ತಿದ್ದರು. ಅಕ್ಕ ಚೇತರಿಸಿಕೊಂಡರು ತಮ್ಮ ಚೇತರಿಸಿಕೊಂಡಿರಲಿಲ್ಲ.

ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್ ರಾಜೀನಾಮೆ

15 ಕೋಟಿ ರು. ವೆಚ್ಚದಲ್ಲಿ ರಾಜ್ಯ ಭೋವಿ ನಿಗಮವು ಭೂಒಡೆತನ ಯೋಜನೆ ಜಾರಿಗೊಳಿಸಲಾಗಿದ್ದ ಯೋಜನೆಯಡಿ 60 ಎಕರೆ ಭೂಮಿ ಖರೀದಿಸಿ ಫಲಾನುವಿಗಳಿಗೆ ಹಂಚಿಕೆ ಮಾಡಬೇಕಿತ್ತು. ಈ ಫಲಾನುಭವಿಗಳಿಂದ ಶೇ. 60ರಷ್ಟು ಕಮಿಷನ್ ನಿಗದಿ ಮಾಡಿದ ಆರೋಪಕ್ಕೆ ವೀಡಿಯೋ ಸಾಕ್ಷ್ಯ ಬಯಲುಗೊಂಡ ಬಳಿಕ ನಿಗಮದ ಅಧ್ಯಕ್ಷ ಎಸ್‌. ರವಿಕುಮಾರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಪ್ಯಾರಾಚೂಟ್‌ನಿಂದ ಬಿದ್ದು ಯೋಧ ಸಾವು

ಉತ್ತರಪ್ರದೇಶ ಆಗ್ರಾದಲ್ಲಿ ತರಬೇತಿ ವೇಳೆ ಪ್ಯಾರಾಚೂಟ್‌ ತೆರೆದುಕೊಳ್ಳದೆ ಜಿಲ್ಲೆಯ ಹೊಸನಗರ ಮೂಲದ ವಾಯುಪಡೆಯ ವಾರೆಂಟ್‌ ಅಧಿಕಾರಿ ಜಿ.ಎಸ್‌. ಮಂಜುನಾಥ್‌(36) ಮೃತಪಟ್ಟಿದ್ದರು.

ಅಂಧರ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ರಿಪ್ಪನಪೇಟೆ ಯುವತಿ

ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಮಹಿಳಾ ಅಂಧರ ಟಿ-20 ವಿಶ್ವಕಪ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತದ ಮಹಿಳೆಯರ ತಂಡದಲ್ಲಿ ರಿಪ್ಪನಪೇಟೆಯ ಬರುವೆ ಗ್ರಾಮದ ಆಚಾರ್‌ ಕೇರಿ ನಿವಾಸಿ ವಿ.ಕಾವ್ಯಾ ಭಾಗವಹಿಸಿ ಗಮನ ಸೆಳೆದಿದ್ದಾರೆ.

ಸರ್ಕಾರಿ ಶಾಲೆ ನೀರಿನ ಟ್ಯಾಂಕ್‌ನಲ್ಲಿ ಕೀಟನಾಶಕ ಅಂಶ ಪತ್ತೆ:

ಹೊಸನಗರ ತಾಲೂಕಿನ ಹೂವಿನಕೋಣೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ಗೆ ಕಿಡಿಗೇಡಿಗಳು ವಿಷ ಬೆರೆಸಿದ ಘಟನೆ ಆ.1 ರಂದು ನಡೆದಿತ್ತು. ಈ ಘಟನೆಗೆ ಸಿಎಂ ಸಿದ್ದರಾಮಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ವೈದ್ಯರ ಎಡವಟ್ಟು: ಸಕ್ರೆಬೈಲು ಆನೆ ಬಿಡಾರದ ಬಾಲಣ್ಣ ಆನೆಯ ಕಿವಿ ಕಟ್

ಶಿವಮೊಗ್ಗ ತಾಲೂಕು ಸಕ್ರೆಬೈಲು ಆನೆ ಶಿಬಿರದಲ್ಲಿ 35 ವರ್ಷದ ಬಾಲಣ್ಣ ಹೆಸರಿನ ಆನೆ ಬಾಲಣ್ಣನನ್ನು ದಸರಾ ಮೆರವಣಿಗೆಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಕಾಲಿನಲ್ಲಿ ನೋವು ಕಂಡು ಬಂದಿತ್ತು. ಅದಕ್ಕಾಗಿ ಆನೆಗೆ ನೋವು ನಿವಾರಕ ಇಂಜೆಕ್ಷನ್ ಕೊಡಲಾಗಿತ್ತು.‌ ಅದರಿಂದ ಆನೆ ಮೇಲೆ ಪ್ರತಿಕೂಮ ಪರಿಣಾಮ ಬೀರಿ, ರಕ್ತ ಹೆಪ್ಪುಗಟ್ಟುವಿಕೆಯಾಗಿ ಕಿವಿಯಲ್ಲಿ ಸೋಂಕು ಹೆಚ್ಚಾಗಿತ್ತು. ಕೊಳೆತ ಕಿವಿಯನ್ನು ಕತ್ತರಿಸುವ ಅನಿವಾರ್ಯತೆಗೆ ವೈದ್ಯರು ಸಿಲುಕಿದ್ದರು. ಆನೆಯ ಆರೋಗ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದರು. ಬಳಿಕ ಆಗ್ರಾ ಹಾಗೂ ಬನ್ನೇರುಘಟ್ಟ ಮೃಗಾಲಯ ತಜ್ಞರು ಸಕ್ರೆಬೈಲಯ ಬಿಡಾರಕ್ಕೆ ಆಗಮಿಸಿ ಸೂಕ್ತ ಚಿಕಿತ್ಸೆ ನೀಡಿದ್ದರು. ವೈದ್ಯರ ನಿರ್ಲಕ್ಷ್ಯ ದಿಂದ ಬಾಲಣ್ಣ ಆನೆ ತನ್ನ ಕಿವಿ ಕಳೆದುಕೊಳ್ಳಬೇಕಾಗಿತ್ತು.

ಶರಾವತಿ ಪಂಪ್ ಸ್ಟೋರೇಜ್: ಹೆಚ್ಚಿದ ವಿರೋಧ

ಕರ್ನಾಟಕ ವಿದ್ಯುತ್ ನಿಗಮವು ಶರಾವತಿ ಪಂಪ್ ಸ್ಟೋರೇಜ್ ಮೂಲಕ ಕೈಗೆತ್ತಿಕೊಂಡಿರುವ 2,000 ಮೆಗಾವಾಟ್ ವಿದ್ಯುತ್‌ ಶೇಖರಣಾ ಯೋಜನೆಗೆ ಜಿಲ್ಲೆಯಲ್ಲಿ ಪರಿಸರವಾದಿಗಳು ಹಾಗೂ ಶರಾವತಿ ಕಣಿವೆ ನಿವಾಸಿಗಳಿಂದ ವಿರೋಧ ವ್ಯಕ್ತವಾಯಿತು. ಯೋಜನೆ ವಿರೋಧಿಸಿ ಶಿವಮೊಗ್ಗ, ಸಾಗರದಲ್ಲಿ ದುಂಡು ಮೇಜಿನ ಸಭೆಗಳು, ಪ್ರತಿಭಟನಾ ಸಭೆಗಳು, ಧರಣಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಕಾರ್ಗಲ್‌ನಲ್ಲಿ ಕೆಪಿಸಿ ವತಿಯಿಂದ ನಡೆದ ಜನರ ಅಹವಾಲು ಆಲಿಕೆ ಸಭೆಯಲ್ಲೂ ಯೋಜನೆಗೆ ವಿರೋಧ ವ್ಯಕ್ತವಾಗಿತ್ತು.

ನವೆಂಬರ್ ತಿಂಗಳಲ್ಲೇ ಕಾಣಿಸಿಕೊಂಡ ಕೆಎಫ್‌ಡಿ ಪ್ರಕರಣಗಳು

ಕೆಎಫ್‌ ಡಿ ಮಲೆನಾಡಿನಲ್ಲಿ ಈ ಬಾರಿ ನವೆಂಬರ್‌ನಲ್ಲೇ ಕಾಣಿಸಿಕೊಂಡಿದೆ. ಜಿಲ್ಲೆಯ ಹೊಸನಗರದ ಸೊನಲೆ ಗ್ರಾಮದ ಮಹಿಳೆಯೊಬ್ಬರಿಗೆ ಕೆಎಫ್‌ಡಿ (ಕ್ಯಾಸನೂರ್ ಪಾರೆಸ್ಟ್‌ ಡಿಸೀಸ್/ಮಂಗನ ಕಾಯಿಲೆ) ಪಾಸಿಟಿವ್ ಬಂದಿದೆ. ಡಿಸೆಂಬರ್‌ ಅಂತ್ಯದವರೆಗೆ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ 15 ಮಂದಿಗೆ ಕೆಎಫ್‌ಡಿ ಬಾಧಿಸಿತ್ತು. ಈ ನಡುವೆ ಸಾಗರ ತಾಲೂಕಿನ ವಿವಿಧ ಗ್ರಾಮದಲ್ಲಿ ಮಂಗಗಳ ಸಾವು ಕೆಎಫ್‌ಡಿ ಆತಂಕವನ್ನು ಹೆಚ್ಚಿಸಿದೆ.