ಮಂಜುನಾಥ ಕೆ.ಎಂ./ ಎಸ್. ನಾರಾಯಣ

ಮುನಿರಾಬಾದ್ (ಕೊಪ್ಪಳ ಜಿಲ್ಲೆ): ತುಂಗಭದ್ರಾ ಜಲಾಶಯವನ್ನಾಶ್ರಯಿಸಿದ ಮೂರು ರಾಜ್ಯಗಳ ಲಕ್ಷಾಂತರ ರೈತರ ಬದುಕು ಜತನದಿಂದ ಕಾಪಾಡಿಕೊಳ್ಳುವ ಮಹತ್ವದ ಒಮ್ಮತ ನಿರ್ಧಾರವನ್ನು ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ಮುಖ್ಯಮಂತ್ರಿಗಳು ಗುರುವಾರ ಪ್ರಕಟಿಸಿದರು.

ಇಲ್ಲಿನ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಕರ್ನಾಟಕ ಜಲಸಂಪನ್ಮೂಲ ಇಲಾಖೆ ಹಮ್ಮಿಕೊಂಡಿದ್ದ 33 ನೂತನ ಕ್ರಸ್ಟ್‌ಗೇಟ್‌ಗಳ (ಸ್ಪಿಲ್ ವೇ) ಲೋಕಾರ್ಪಣೆಯ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಸಿಎಂ ಎ. ರೇವಂತ ರೆಡ್ಡಿ ಅವರು ರೈತರ ರಕ್ಷಣೆಯೇ ನಮ್ಮ ಮೊದಲ ಆದ್ಯತೆ. ಜಲಾಶಯದ ಅಭಿವೃದ್ಧಿಗೆ ಮೂರು ರಾಜ್ಯಗಳು ಒಗ್ಗಟ್ಟಾಗಿ ಕಾರ್ಯ ಯೋಜನೆ ರೂಪಿಸಿಕೊಂಡು ಅನುಷ್ಠಾನಗೊಳಿಸುವುದಾಗಿ ಘೋಷಿಸಿದರು.

ಸಮಾರಂಭ ಉದ್ಘಾಟನೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೃಷ್ಣ, ಕಾವೇರಿ ಹಾಗೂ ಗೋದಾವರಿ ನದಿಗಳ ಜೋಡಣೆಯ ಕುರಿತು ಪ್ರಸ್ತಾಪಿಸಿದರಲ್ಲದೆ, ತುಂಗಭದ್ರಾ ಜಲಾಶಯದಲ್ಲಿ ದಿನದಿನಕ್ಕೆ ಹೂಳು ತುಂಬಿಕೊಂಡು ನೀರಿನ ಸಾಮರ್ಥ್ಯ ಕುಸಿಯುತ್ತಿದೆ. ಹೀಗಾಗಿ ಮೂರು ರಾಜ್ಯಗಳ ರೈತರಿಗೆ ನೀರು ಅಭಾವ ಸೃಷ್ಟಿಯಾಗದಂತೆ ಜಲಾಶಯದ ಹೂಳು ತೆಗೆಯುವುದು ಅಥವಾ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಿಸುವ ಕುರಿತು ಕೇಂದ್ರ ಸಚಿವರ ಜತೆಗೆ ಒಂದು ತಾಸು ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ. ಮೂರು ರಾಜ್ಯಗಳ ಅನೇಕ ನೀರಾವರಿ ಸಮಸ್ಯೆಗಳು ಸೇರಿದಂತೆ ಕೃಷ್ಣ, ಕಾವೇರಿ, ಗೋದಾವರಿ ನದಿಗಳ ಜೋಡಣೆ ಕುರಿತಾಗಿಯೂ ಚರ್ಚಿಸಿದ್ದೇವೆ ಎಂದು ತಿಳಿಸಿದರು.

ನೆರೆಹೊರೆಯ ರಾಜ್ಯಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಆಗುವ ಪ್ರಯೋಜನಗಳ ಕುರಿತು ತಿಳಿಸಿದ ಸಿಎಂ ಡಿ.ಕೆ. ಶಿವಕುಮಾರ್, ಜತೆಗೂಡುವುದು ಆರಂಭ, ಜತೆಗೂಡುವುದೇ ಪ್ರಗತಿ, ಜತೆಗೂಡಿ ಕೆಲಸ ಮಾಡುವುದರಿಂದ ಯಶಸ್ಸು ಸಾಧ್ಯ. ದೇವರು ವರ ಕೊಡುವುದಿಲ್ಲ. ಶಾಪವೂ ಕೊಡುವುದಿಲ್ಲ. ಅವಕಾಶವನ್ನು ಮಾತ್ರ ಕೊಡುತ್ತಾನೆ. ಕೊಟ್ಟ ಅವಕಾಶವನ್ನು ಬಳಸಿಕೊಂಡು ಖಂಡಿತವಾಗಿ ರೈತರ ಹಿತ ಕಾಯುವ ಕೆಲಸವನ್ನು ಮೂವರು ಮುಖ್ಯಮಂತ್ರಿಗಳು ಸೇರಿ ಮಾಡುತ್ತೇವೆ ಎಂದರು.


ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ವೇಳೆ ಶಿಥಿಲಗೊಂಡ ಕ್ರಸ್ಟ್‌ಗೇಟ್‌ ಮುರಿದುಬಿತ್ತು. ಇದರಿಂದ ಅಪಾರ ಪ್ರಮಾಣದ ನೀರು ಪೋಲಾಯಿತು. ವಿಷಯ ಗೊತ್ತಾಗುತ್ತಿದ್ದಂತೆಯೇ ಕೂಡಲೇ ಸ್ಥಳಕ್ಕೆ ಆಗಮಿಸಿದ ನಾನು, ಹದಿನೈದು ದಿನಗಳಲ್ಲಿ 19ನೇ ಕ್ರಸ್ಟ್‌ ಗೇಟ್ ಬದಲಾಯಿಸಿ, ರೈತರ ಹಿತ ಕಾಯುವ ಕೆಲಸ ಮಾಡಿದೆ. ಬಳಿಕ 33 ಗೇಟ್‌ಗಳನ್ನು ಬದಲಾಯಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು. ರೈತರನ್ನು ರಕ್ಷಣೆ ಮಾಡಲು ಭಗವಂತನೇ ಅವಕಾಶ ಮಾಡಿಕೊಟ್ಟಿದ್ದಾನೆ. ನೀರಾವರಿ ಸಚಿವನಾಗಿ ಕಾರ್ಯನಿರ್ವಹಿಸಿದ ಬಳಿಕ ಮುಖ್ಯಮಂತ್ರಿಯಾಗಿದ್ದೇನೆ. ಸಿಎಂ ಆಗಿದ್ದರೂ ನಾನು ನಿಮ್ಮ ಸೇವಕ, ನಿಮ್ಮ ಬಂಧು ಎಂದೇ ಭಾವಿಸಿ ಎಂದರಲ್ಲದೆ, ರೈತರ ಬದುಕು ಉಳಿಸುವ, ಭತ್ತದ ಕಣಜವನ್ನು ಕಾಪಾಡುವ ಐತಿಹಾಸಿಕ ತೀರ್ಮಾನಕ್ಕೆ ಮುನಿರಾಬಾದ್‌ನಲ್ಲಿ ನಡೆದ ಈ ಸಮಾರಂಭವೇ ಸಾಕ್ಷಿ ಎಂದು ಹೇಳಿದರು.

ನದಿ ಜೋಡಣೆ ತುರ್ತು ಅಗತ್ಯ: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ದೇಶದ ನೀರಾವರಿ ಸಮಸ್ಯೆಗಳನ್ನು ನೀಗಿಸಲು ನದಿ ಜೋಡಣೆಯ ತುರ್ತು ಅಗತ್ಯವನ್ನು ಪ್ರತಿಪಾದಿಸಿದರು.

ದಕ್ಷಿಣ ಭಾರತದ ಪ್ರಮುಖ ನದಿಗಳಾದ ಗೋದಾವರಿ ಮತ್ತು ಕಾವೇರಿ ನದಿಗಳ ಜೋಡಣೆ ಯೋಜನೆಯನ್ನು ಕೇಂದ್ರ ಸರ್ಕಾರವು ''''''''ರಾಷ್ಟ್ರೀಯ ಯೋಜನೆ''''''''ಯಾಗಿ ಪರಿಗಣಿಸಿ ಅನುಷ್ಠಾನಕ್ಕೆ ತರಬೇಕು. ಜೋಡಣೆ ಪ್ರಕ್ರಿಯೆಯಲ್ಲಿ ಯಾವುದೇ ರಾಜ್ಯಕ್ಕೆ ಅನ್ಯಾಯವಾಗದಂತೆ ಎಚ್ಚರ ವಹಿಸಬೇಕು. ಈ ಯೋಜನೆಯನ್ನು ಜಾರಿಗೊಳಿಸುವಾಗ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಸಬೇಕು. ಅಗತ್ಯ ಎನಿಸಿದರೆ ತಮಿಳುನಾಡಿಗೂ ನೀರು ಕೊಂಡೊಯ್ಯುವ ವ್ಯವಸ್ಥೆಯಾಗಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರವು ಈಗಾಗಲೇ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ನಡುವಿನ ''''''''ಕೆನ್-ಬೆತ್ವಾ'''''''' ಯೋಜನೆ ಹಾಗೂ ರಾಜಸ್ಥಾನ ಮತ್ತು ಮಧ್ಯಪ್ರದೇಶದ ನಡುವಿನ ''''''''ಪಾರ್ವತಿ-ಕಾಳಿಸಿಂಧು-ಚಂಬಲ್'''''''' ನದಿ ಜೋಡಣೆ ಯೋಜನೆಗಳನ್ನು ಯಶಸ್ವಿಯಾಗಿ ಕೈಗೆತ್ತಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸೇರಿದಂತೆ ಅನೇಕ ರಾಷ್ಟ್ರ ಪ್ರಗತಿಯ ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಂಡು ಕಾರ್ಯೋನ್ಮುಖವಾಗಿದೆ. ನದಿ ಜೋಡಣೆಯಂತಹ ಮಹತ್ವದ ನಿರ್ಧಾರವನ್ನು ಕೈಗೊಳ್ಳುವುದು ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯವಿದೆ. ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳ ಭಾಷೆ, ಸಂಸ್ಕೃತಿ ಬೇರೆಯಾದರೂ ನಾವೆಲ್ಲರೂ ಭಾರತೀಯರು. ದೇಶದ ಸಮಗ್ರ ಅಭಿವೃದ್ಧಿಯೇ ನಮ್ಮ ಮುಖ್ಯ ಆಶಯವೂ ಆಗಿದೆ ಎಂದು ಹೇಳಿದರು.

ತುಂಗಭದ್ರಾ ಜಲಾಶಯದಿಂದ ಪ್ರತಿವರ್ಷ ದೊಡ್ಡ ಪ್ರಮಾಣದ ನೀರು ಪೋಲಾಗಿ ನದಿ ಸೇರುತ್ತಿದೆ. ಇದನ್ನು ತಡೆದು ಮೂರು ರಾಜ್ಯಗಳಿಗೆ ಅನುಕೂಲವಾಗುವಂತೆ ಕಾರ್ಯಯೋಜನೆ ರೂಪಿಸಿಕೊಳ್ಳಬೇಕಾಗಿದೆ. ಈ ಸಂಬಂಧ ಕೇಂದ್ರ ಸಚಿವರು ಶಾಶ್ವತ ಪರಿಹಾರವನ್ನು ಸೂಚಿಸಿದ್ದಾರೆ. ಈ ಕಾರಣಕ್ಕಾಗಿಯೇ ಮೂರು ರಾಜ್ಯಗಳು ಒಟ್ಟಾಗಿ ಸೇರಿದ್ದೇವೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದರು.

ಬಳ್ಳಾರಿ, ಅನಂತಪುರ ಹಾಗೂ ಕರ್ನೂಲ್ ಜಿಲ್ಲೆಗಳ ರೈತರು ಈ ಜಲಾಶಯವನ್ನು ಆಶ್ರಯಿಸಿದ್ದಾರೆ. ಕ್ರಸ್ಟ್‌ಗೇಟ್ ಬದಲಾವಣೆಯಿಂದ ರೈತರು ನಿರಾಳವಾದಂತಾಗಿದೆ. ಅನೇಕ ವರ್ಷಗಳಿಂದಲೂ ಕ್ರಸ್ಟ್‌ಗೇಟ್ ಬದಲಾಯಿಸುವ ಚರ್ಚೆಗಳು ಮುನ್ನಲೆಗೆ ಬಂದಿದ್ದವು. ಆದರೆ, ಸಾಧ್ಯವಾಗಿರಲಿಲ್ಲ. ಆದರೆ, ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್ ಅವರು ಹೆಚ್ಚಿನ ಆಸ್ಥೆ ವಹಿಸಿ ರೈತರ ಹಿತ ಕಾಯುವ ಕಾಳಜಿ ಮೆರೆದಿದ್ದಾರೆ ಎಂದು ಶ್ಲಾಘಿಸಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಈ ವೇದಿಕೆಯ ಮೂಲಕ ಮೂರು ರಾಜ್ಯಗಳ ನೀರಿನ ಸಮಸ್ಯೆ ನೀಗಿಸುವ ಮಹತ್ವದ ನಿರ್ಧಾರ ಕೈಗೊಳ್ಳಲು ಮುನ್ನುಡಿ ಬರೆದಂತಾಗಿದೆ ಎಂದು ಹೇಳಿದರು.

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು ಅತಿಥಿಗಳನ್ನು ಸ್ವಾಗತಿಸಿದರು.