ಪೌರ ಕಾರ್ಮಿಕರ ಸುರಕ್ಷತೆಗೆ ಮೊದಲ ಆದ್ಯತೆ

| Published : Apr 05 2024, 01:09 AM IST

ಸಾರಾಂಶ

ಪೌರ ಕಾರ್ಮಿಕರು ಪುರಸಭೆಯ ಆಸ್ತಿಯಾಗಿದ್ದಾರೆ ಅವರು ಆರೋಗ್ಯವಂತರಾಗಿದ್ದರೆ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುತ್ತಾರೆ

ಲಕ್ಷ್ಮೇಶ್ವರ: ಪ್ರತಿನಿತ್ಯ ಪೌರಕಾರ್ಮಿಕರು ಪಟ್ಟಣದ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಚರಂಡಿ ಹಾಗೂ ಇನ್ನಿತರ ನೈರ್ಮಲ್ಯ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಅವರು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅದಕ್ಕಾಗಿ ಪೌರ ಕಾರ್ಮಿಕರು ಸುರಕ್ಷಾ ಪರಿಕರಗಳನ್ನು ಧರಿಸಿ ಸ್ವಚ್ಛತಾ ಕಾರ್ಯ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಹೇಳಿದರು.

ಬುಧವಾರ ಪಟ್ಟಣದ ಪುರಸಭೆಯ ಪೌರಕಾರ್ಮಿಕರಿಗೆ ಸುರಕ್ಷಾ ಪರಿಕರ ವಿತರಿಸಿ ಮಾತನಾಡಿದರು.

ಪೌರ ಕಾರ್ಮಿಕರು ಪುರಸಭೆಯ ಆಸ್ತಿಯಾಗಿದ್ದಾರೆ ಅವರು ಆರೋಗ್ಯವಂತರಾಗಿದ್ದರೆ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುತ್ತಾರೆ. ಇಲ್ಲವಾದಲ್ಲಿ ಪಟ್ಟಣದ ಕಸ ಸ್ವಚ್ಚಗೊಳಿಸಿ ಅದನ್ನು ಊರಿನಾಚೆ ಹಾಕುವ ಕಾರ್ಯ ಮಾಡದೇ ಹೋದಲ್ಲಿ ಊರು ನರಕವಾಗುತ್ತದೆ. ಆದ್ದರಿಂದ ಸರ್ಕಾರ ಕೂಡಾ ಪೌರ ಕಾರ್ಮಿಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವ ಕಾರ್ಯ ಮಾಡುತ್ತಿದೆ. ಪೌರ ಕಾರ್ಮಿಕರು ಪ್ರತಿನಿತ್ಯ ಕೆಲಸಕ್ಕೆ ಬರುವಾಗ ಆರೋಗ್ಯ ಸುರಕ್ಷಾ ಪರಿಕರಗಳನ್ನು ಧರಿಸಿ ಬರಬೇಕು. ಇದು ಕಡ್ಡಾಯವಾಗಿದ್ದು ಆರೋಗ್ಯದ ವಿಷಯದಲ್ಲಿ ರಾಜಿ ಇಲ್ಲ ಎಂದು ಹೇಳಿದರು.

ಈ ವೇಳೆ ಕಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ಲ, ಬಸವಣ್ಣಿಪ್ಪ ನಂದೆಣ್ಣವರ, ಮಂಜುಳಾ ಹೂಗಾರ, ಹನುಮಂತ ನಂದೆಣ್ಣವರ, ಶಿವಣ್ಣ ಮ್ಯಾಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.