ಕನ್ನಡಪ್ರಭ ವಾರ್ತೆ ಬೆಳಗಾವಿ

ನಗರ ಸೇವಕ ದಿನೇಶ್ ನಾಶಿಪುಡಿ ಮಂಗಳವಾರ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಎದುರು ಧರಣಿ ನಡೆಸಿ, ಅನಧಿಕೃತ ಕಟ್ಟಡಗಳ ಕುರಿತ ಹೊಸ ಸರ್ಕಾರಿ ಆದೇಶವನ್ನು ತಕ್ಷಣ ಜಾರಿಗೆ ತರಬೇಕೆಂದು ಆಗ್ರಹಿಸಿದರು.

ಆಯುಕ್ತ ಕಾರ್ತಿಕ್.ಎಂ ಅವರ ಕಚೇರಿ ಹೊರಗೆ ನೆಲದ ಮೇಲೆ ಕುಳಿತು ಪ್ರತಿಭಟನೆ ಆರಂಭಿಸಿದ ನಾಶಿಪುಡಿ, ಕಟ್ಟಡ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ನಾಗರಿಕರಿಗೆ ಹಳೆಯ ನಿಯಮದಂತೆ ಪ್ರತಿವರ್ಷ ಡಬಲ್ ತೆರಿಗೆ ವಿಧಿಸಲಾಗುತ್ತಿದೆ ಎಂದು ಆರೋಪಿಸಿದರು.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 2024ರ ಸೆಪ್ಟೆಂಬರ್ 10ರಂದು ರಾಜ್ಯ ಸರ್ಕಾರ ಹೊರಡಿಸಿದ ಆದೇಶದಲ್ಲಿ ಅನಧಿಕೃತ ಕಟ್ಟಡಗಳಿಗೆ ಮೊದಲ ವರ್ಷಕ್ಕೆ ಮಾತ್ರ ಪ್ರಮಾಣಿತ ತೆರಿಗೆಯ ದುಪ್ಪಟ್ಟು ವಿಧಿಸಿ, ನಂತರದ ವರ್ಷಗಳಲ್ಲಿ ಸಾಮಾನ್ಯ ಏಕ ತೆರಿಗೆ ವಿಧಿಸಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ ಎಂದು ವಿವರಿಸಿದರು.

ಹಿಂದಿನ ನಿಯಮಗಳ ಪ್ರಕಾರ, ಕಟ್ಟಡ ನಿಯಮ ಉಲ್ಲಂಘಿಸಿದ ಸಾಮಾನ್ಯ ನಾಗರಿಕರು ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದವರು ಪ್ರತಿ ವರ್ಷವೂ ಡಬಲ್ ತೆರಿಗೆ ರೂಪದಲ್ಲಿ ಭಾರೀ ದಂಡವನ್ನು ಭರಿಸಬೇಕಾಗುತ್ತಿತ್ತು. ಇದರಿಂದ ಅವರಿಗೆ ಅಪಾರ ನಷ್ಟ ಉಂಟಾಗುತ್ತಿದ್ದುದ್ದನ್ನು ಗಮನಿಸಿ ಸರ್ಕಾರ ಹೊಸ ತಿದ್ದುಪಡಿ ಆದೇಶ ಹೊರಡಿಸಿದೆ. ಆದಾಗ್ಯೂ, ಈ ಆದೇಶ ಜಾರಿಯಾದ ಬಳಿಕವೂ ಒಂದು ವರ್ಷ ಕಳೆದರೂ ಬೆಳಗಾವಿ ಪಾಲಿಕೆ ಅದನ್ನು ಜಾರಿಗೆ ತರದೆ ಹಳೆಯ ನಿಯಮವನ್ನೇ ಮುಂದುವರಿಸುತ್ತಿರುವುದು ದುರಂತ. ಸಾಮಾನ್ಯ ಜನರ ಹಿತಕ್ಕಾಗಿ ಸರ್ಕಾರ ತಂದಿರುವ ಈ ಆದೇಶವನ್ನು ತಕ್ಷಣ ಜಾರಿಗೆ ತರಬೇಕು. ಇಲ್ಲದಿದ್ದರೆ ಧರಣಿ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದರು.