ಬಳ್ಳಾರಿ: ಬೆಂಗಳೂರಿನ ದಿ ಕ್ಯಾಪಿಟಲ್ ಹೋಟೆಲ್ ಸಭಾಂಗಣದಲ್ಲಿ ಕಳೆದ ಶನಿವಾರ ಜರುಗಿದ ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದಲ್ಲಿ ಸಾಧನೆಗೈದ ಬಳ್ಳಾರಿಯ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿ.ದೊಡ್ಡ ಕೇಶವರೆಡ್ಡಿ ಕೊರ್ಲಗುಂದಿ ಅವರಿಗೆ ಕನ್ನಡಪ್ರಭ-ಏಷ್ಯಾನೆಟ್ ಸುವರ್ಣನ್ಯೂಸ್ ವತಿಯಿಂದ ಕರ್ನಾಟಕ ಸಹಕಾರ ಶಿರೋಮಣಿ -2025 ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿಯ ಪಿಎಲ್‌ಡಿ ಬ್ಯಾಂಕ್ ಕಚೇರಿಯಲ್ಲಿ ಸನ್ಮಾನಿಸಲಾಯಿತು. ವಕೀಲ ಬಾದಾಮಿ ಶಿವಲಿಂಗ ನಾಯಕ ಅವರು ಕೇಶವರೆಡ್ಡಿ ಅವರಿಗೆ ಸನ್ಮಾನಿಸಿದರು.ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಮತ್ತಷ್ಟು ಸ್ಥಾನಮಾನಗಳು ಲಭಿಸುವಂತಾಗಲಿ. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಮೂರು ಬಾರಿ ಆಯ್ಕೆಗೊಳ್ಳುವ ಮೂಲಕ ಸಾಕಷ್ಟು ರೈತಪರ ಕಾರ್ಯವನ್ನು ಕೈಗೊಂಡಿರುವ ದೊಡ್ಡ ಕೇಶವರೆಡ್ಡಿ ದುಡಿವ ವರ್ಗದ ಹಿತ ಕಾಯುವ ಕೆಲಸವನ್ನು ಕಾಳಜಿಯಿಂದ ಮಾಡಿಕೊಂಡು ಬಂದಿದ್ದಾರೆ ಎಂದು ಸ್ಮರಿಸಿದರು.

ಇದೇ ವೇಳೆ ಮಾತನಾಡಿದ ದೊಡ್ಡ ಕೇಶವರೆಡ್ಡಿ ಅವರು, ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿದ ಕನ್ನಡಪ್ರಭ-ಸುವರ್ಣನ್ಯೂಸ್ ಸುದ್ದಿ ವಾಹನಿಗೆ ರಾಜ್ಯಮಟ್ಟದ ಸಹಕಾರ ಶಿರೋಮಣಿ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಚ್ಚು ಸಂತಸ ತಂದಿದೆ. ಸಾಮಾಜಿಕ ಹಾಗೂ ಸಹಕಾರ ಕ್ಷೇತ್ರದಲ್ಲಿ ಮತ್ತಷ್ಟು ಕೆಲಸ ಮಾಡಲು ಶಕ್ತಿ ತುಂಬಿದಂತಾಗಿದೆ. ನನ್ನನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವ ಮಾಧ್ಯಮ ಸಂಸ್ಥೆಗಳಿಗೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದರು. ಪ್ರಕಾಶ್ ಗೌಡ ಎತ್ತಿನ ಬೂದಿಹಾಳ್, ಶ್ರೀನಿವಾಸ ರೆಡ್ಡಿ, ಜಿ ಬಾಲಾಜಿ, ಬ್ಯಾಂಕಿನ ವ್ಯವಸ್ಥಾಪಕ ದೀಪಕ್ ಮತ್ತಿತರರು ಉಪಸ್ಥಿತರಿದ್ದು, ದೊಡ್ಡ ಕೇಶವರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಬೆಂಗಳೂರಿನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕನ್ನಡಪ್ರಭ-ಸುವರ್ಣನ್ಯೂಸ್ ಸುದ್ದಿವಾಹಿನಿಂದ ಸಹಕಾರ ಭೂಷಣ ಪ್ರಶಸ್ತಿ ಪಡೆದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿ.ದೊಡ್ಡ ಕೇಶವರೆಡ್ಡಿ ಕೊರ್ಲಗುಂದಿ ಅವರಿಗೆ ಬಳ್ಳಾರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.