ಸಾರಾಂಶ
ಹರಪನಹಳ್ಳಿ: ಬಂಜಾರ ಅಭಿವೃದ್ಧಿ ನಿಗಮಕ್ಕೆ ಸರಿಯಾಗಿ ಅನುದಾನ ಇಲ್ಲದೆ ಅಭಿವೃದ್ಧಿ ಕುಂಠಿತವಾಗಿದೆ ಎಂದು ಇಲ್ಲಿಯ ಬಂಜಾರ ಸಮಾಜದ ಮುಖಂಡ ಎಂ.ಪಿ. ನಾಯ್ಕ ದೂರಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಗುರುವಾರ ಆಯೋಜಿಸಿದ್ದ ಸಂತ ಸೇವಾಲಾಲ್ 285ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಸೇವಾಲಾಲ್ ಜಯಂತಿ ಸೇರಿದಂತೆ ಮಹನೀಯರ ಜಯಂತಿಗಳನ್ನು ಇತ್ತೀಚೆಗೆ ಕಾಟಾಚಾರಕ್ಕೆ ಆಚರಣೆ ಮಾಡಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಅನೇಕ ಹಟ್ಟಿ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿ ಮೂಲ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಶೋಷಿತ ಬಂಜಾರ ಸಮಾಜವನ್ನು ಮುಖ್ಯವಾಹಿನಿಗೆ ತರಲು ಸಂತ ಸೇವಾಲಾಲರು ಸಾಕಷ್ಟು ಶ್ರಮ ವಹಿಸಿದ್ದಾರೆ. ಆಚಾರ, ವಿಚಾರ, ಧರ್ಮಬೋಧನೆ ಮಾಡಿ ಸಮಾಜವನ್ನು ಸರಿದಾರಿಗೆ ತರಲು ಪ್ರಯತ್ನಿಸಿದ್ದಾರೆ ಎಂದರು.ಬಿಜೆಪಿ ಮುಖಂಡ ಬಿ.ವೈ. ವೆಂಕಟೇಶನಾಯ್ಕ ಮಾತನಾಡಿ, ತಾಲೂಕಿನಲ್ಲಿ 52 ತಾಂಡಾಗಳು ಇದ್ದು, ಮುಂದಿನ ದಿನಗಳಲ್ಲಿ ಪೂರ್ವಭಾವಿ ಸಭೆಗೆ ಎಲ್ಲ ಸಮಾಜದವರನ್ನು ಆಹ್ವಾನಿಸಬೇಕು ಹಾಗೂ ವಿಜೃಂಭಣೆಯಿಂದ ಸೇವಾಲಾಲ್ ಜಯಂತಿ ಆಚರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಬಿ.ವಿ. ಗಿರೀಶಬಾಬು ಮಾತನಾಡಿ, ಹಟ್ಟಿ, ತಾಂಡಾಗಳ ಸರ್ವೆ ಮಾಡುತ್ತಿದ್ದೇವೆ. ಹಂತ- ಹಂತವಾಗಿ ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡಲಾಗುತ್ತದೆ ಎಂದರು.ಉಪತಹಸೀಲ್ದಾರ್ ಸಿ.ಎಂ. ಚಂದ್ರಮೌಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಎಲ್. ಮಂಜನಾಯ್ಕ, ಎಡಿಎಲ್ ಆರ್ ಬಳ್ಳಾರಪ್ಪ, ರೈತ ಮುಖಂಡ ಪಣಿಯಾಪುರ ಲಿಂಗರಾಜ, ಗ್ರೇಡ್- 2 ತಹಸೀಲ್ದಾರ್ ನಟರಾಜ, ಕಂದಾಯ ಅಧಿಕಾರಿ ಶಶಿಕುಮಾರ ಸೇರಿದಂತೆ ಬಂಜಾರ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು.