ಮತದಾರರ ಸ್ವಾಗತಕ್ಕೆ ಸಿದ್ಧಗೊಂಡ ಸಖಿ ಮತಗಟ್ಟೆ

| Published : May 07 2024, 01:02 AM IST

ಸಾರಾಂಶ

ಹೊನ್ನಾಳಿ ಪಟ್ಟಣದ ತಾಪಂ ಕಚೇರಿ ಮತಗಟ್ಟೆಯನ್ನು ಸಂಪೂರ್ಣ ಗುಲಾಬಿ ವಸ್ತುಗಳಿಂದ ಅಲಂಕಾರ ಮಾಡಿ ಮತದಾರರ ಸ್ವಾಗತಕ್ಕೆ ಸಿದ್ದಗೊಂಡ ಸಖಿ ಮಾತಗಟ್ಟೆಯಾಗಿದೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಸ್ವಾಗತಿಸಲು ಗುಲಾಬಿ ಬಣ್ಣಗಳಿಂದ ಸರ್ವ ವಿಧದಲ್ಲಿ ಸಿದ್ಧಗೊಂಡಿರುವ ಸಖಿ ಮತಗಟ್ಟೆ ಕೇಂದ್ರ.

ಹೊನ್ನಾಳಿ ವಿಧಾಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 245 ಮತಗಟ್ಟೆಗಳು ಇದ್ದು, ಇವುಗಳಲ್ಲಿ 9 ಮತಗಟ್ಟೆಗಳನ್ನು ವಿಶೇಷ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈ 9 ಮತಗಟ್ಟೆಗಳಲ್ಲಿ 5 ಸಖಿ ಮತಗಟ್ಟೆಗಳು, 1 ವಿಶೇಷಚೇತನರ ಮತಗಟ್ಟೆ, ಒಂದು ಯುವ ಮತಗಟ್ಟೆ ಒಂದು ಸಾಂಪ್ರದಾಯಿಕ ಮತಗಟ್ಟೆ ಮತ್ತು ಒಂದು ಧ್ಯೇಯ ಮತಗಟ್ಟೆಯಾಗಿದೆ ಎಂದು ತಾಪಂ ಇಒ ಸುಮಾ ತಿಳಿಸಿದರು.

ಮಹಿಳಾ ಮತದಾರರು ಹೆಚ್ಚಾಗಿ ಇರುವ ಸಖಿ ಮತಗಟ್ಟೆಗಳನ್ನು ಸಂಪೂರ್ಣವಾಗಿ ಮಹಿಳೆ ಸಿಬ್ಬಂದಿಯೇ ನಿರ್ವಹಣೆ ಮಾಡುತ್ತಾರೆ. ವಿಶೇಷ ಎಂದರೆ ಇಡಿ ಮತಗಟ್ಟೆಯನ್ನು ಫಿಂಕ್ (ಗುಲಾಭಿ) ಬಣ್ಣದ ವಸ್ತುಗಳಿಂದ ಶೃಂಗರಿಸಲಾಗಿರುತ್ತದೆ.

ವಿಶೇಷ ಚೇತನ ಮತದಾರರು ಹೆಚ್ಚಾಗಿ ಇರುವ ಸ್ಥಳೀಯ ಕೃಷಿ ಇಲಾಖೆ ಮತಗಟ್ಟೆಯನ್ನು ಕೂಡ ವಿಶೇಷ ಚೇತನರ ಮತಗಟ್ಟೆ ಎಂದು ಗುರುತಿಸಲಾಗಿದೆ ಮತ್ತು ಮತಗಟ್ಟೆ ಸಿಬ್ಬಂದಿ ಕೂಡ ವಿಶೇಷಚೇತನರಾಗಿರುತ್ತಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಉತ್ತಮ ತ್ಯಾಜ್ಯ ವಿವೇವಾರಿ ಘಟಕ ಹೊಂದಿರುವ ಚೀಲೂರು ಗ್ರಾಪಂ ಮತ ಕೇಂದ್ರವನ್ನು ಸ್ವಚ್ಛತೆಯೇ ಸೇವೆ ಎಂಬ ಧ್ಯೇಯದೊಂದಿಗೆ ಧ್ಯೇಯ ಮತಗಟ್ಟೆ ಕೇಂದ್ರವನ್ನಾಗಿ ಗುರುತಿಸಿದೆ, ಸಾಂಪ್ರದಾಯಿಕ ಮತಗಟ್ಟೆಯನ್ನು ತಾಲೂಕಿನ ಆಂಜನೇಯಪುರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಂಪೂರ್ಣ ಬಂಜಾರ ಸಮುದಾಯದ ಜನಾಂಗ ಇರುವ ಈ ಗ್ರಾಮದಲ್ಲಿ ಬಂಜಾರ ಸಾಂಪ್ರದಾಯಿಕ ಮತಗಟ್ಟೆ ಎಂದು ಗುರುತಿಸಲಾಗಿದ್ದು, ಈ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವ ಮತಗಟ್ಟೆ ಸಿಬ್ಬಂದಿ ಸಂಪೂರ್ಣ ಬಂಜಾರ ಸಾಂಪ್ರದಾಯಿಕ ಉಡುಗೆ ತೊಡುಗೆಯನ್ನು ಬಂಜಾರ ಸಂಸ್ಕೃತಿಯನ್ನು ಬಂಬಿಸುವ ರೀತಿಯಲ್ಲಿ ಮತಗಟ್ಟೆ ಅಲಂಕಾರ ಮಾಡಲಾಗಿದೆ ಎಂದು ತಾಪಂ ಇಒ ಸುಮಾ ವಿವರಿಸಿದರು.

ಯುವ ಮತದಾರರು ಹೆಚ್ಚಾಗಿರುವ ಕುಳಗಟ್ಟೆ ಮತಗಟ್ಟೆಯನ್ನು ಕೂಡ ಯುವ ಮತದಾನ ಕೇಂದ್ರ ಎಂದು ಗುರುತಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾ.ಪಂ. ಯೋಜನಾಧಿಕಾರಿ ರಾಘವೇಂದ್ರ ಕೂಡ ಉಪಸ್ಥಿತರಿದ್ದರು